ಮಂಗಳವಾರ, ಮೇ 26, 2009

ಗಣಕಿಂಡಿ - ೦೦೨ (ಮೇ ೨೫, ೨೦೦೯)

ಅಂತರಜಾಲಾಡಿ


ನೀವೊಬ್ಬರು ಸಣ್ಣ ಲೇಖಕರೇ? ನಿಮ್ಮ ಪುಸ್ತಕವನ್ನು ಯಾವ ಪ್ರಕಾಶನದವರೂ ಕೈಗೆತ್ತಿಕೊಳ್ಳುವುದಿಲ್ಲವೇ? ಅಥವಾ ನೀವು ಖ್ಯಾತನಾಮರಾಗಿದ್ದರೂ ನಿಮ್ಮ ಪುಸ್ತಕಕ್ಕೆ ಕಡಿಮೆ ಪ್ರಮಾಣದ ಕೊಳ್ಳುಗರಿದ್ದಾರೆಯೇ? ಸಾಮಾನ್ಯವಾಗಿ ಯಾವುದೇ ಮುದ್ರಕರೂ ಪುಸ್ತಕ ಮುದ್ರಿಸಬೇಕಾದರೆ ಕನಿಷ್ಠ ಇಂತಿಷ್ಟು ಪ್ರತಿ ಮುದ್ರಿಸಲೇಬೇಕು ಎಂಬ ಷರತ್ತು ವಿಧಿಸುತ್ತಾರೆ. ಇದೇ ಷರತ್ತನ್ನು ಪ್ರಕಾಶಕರು ಹಾಕುತ್ತಾರೆ. ಹಾಗಾದರೆ ಕಡಿಮೆ ಸಂಖ್ಯೆಯ ಪುಸ್ತಗಳನ್ನು ಪ್ರಕಟಿಸಬೇಕಾದರೆ ಏನು ಮಾಡಬೇಕು? ಇನ್ನೂ ಒಂದು ರೀತಿಯ ಸಮಸ್ಯೆ ಇದೆ. ಪ್ರಕಾಶಕರು ಸತ್ಯವನ್ನೇ ಹೇಳುತ್ತಾರೆ ಎಂಬ ಖಾತ್ರಿ ಏನು? ಕೇವಲ ಒಂದು ಸಾವಿರ ಪ್ರತಿ ಮುದ್ರಿಸಿದ್ದೇವೆ ಎಂದು ಸುಳ್ಳು ಹೇಳಿ ಹತ್ತು ಸಾವಿರ ಪ್ರತಿ ಮುದ್ರಿಸಿ ಮಾರಾಟ ಮಾಡಿಲ್ಲ ಎಂದು ಏನು ಖಾತ್ರಿ? ಎಲ್ಲ ಸಮಸ್ಯೆಗಳಿಗೆ ಪರಿಹಾರ ಅಂತರಜಾಲ ಮೂಲಕ ಸ್ವ-ಪ್ರಕಾಶನ. pothi.com ಎಂಬ ಜಾಲತಾಣವಿದೆ. ಇಲ್ಲಿ ನೀವು ನಿಮ್ಮ ಪುಸ್ತಕದ ಪ್ರತಿಯನ್ನು ಗಣಕದಲ್ಲಿ ತಯಾರಿಸಿ ಸೇರಿಸಿಡಬಹುದು. ಪುಸ್ತಕ ಬೇಕಾದವರು ಅದಕ್ಕೆ ನಿಗದಿಪಡಿಸಿದ ಹಣ ತೆತ್ತು ಬೇಡಿಕೆ ಸಲ್ಲಿಸಿದಾಗ ಜಾಲತಾಣದವರು ಅದನ್ನು ಮುದ್ರಿಸಿ ಕಳುಹಿಸುತ್ತಾರೆ. ಲೇಖಕರಿಗೆ ಹಣವೂ ತಲುಪುತ್ತದೆ. ಸಾವಿರಾರು ಪ್ರತಿ ಮುದ್ರಿಸಲೇಬೇಕೆಂಬ ಷರತ್ತಿಲ್ಲ. ಒಂದೇ ಒಂದು ಪ್ರತಿ ಬೇಕಿದ್ದರೂ ಮುದ್ರಿಸಿ ಕಳುಹಿಸುತ್ತಾರೆ.

ಡೌನ್ಲೋಡ್


ಅಂತರಜಾಲದಿಂದ ಡೌನ್ಲೋಡ್ ಮಾಡಬಲ್ಲ ತಂತ್ರಾಂಶಗಳಲ್ಲಿ ಹಲವು ವಿಧ ಇವೆ. ಸಂಪೂರ್ಣ ಉಚಿತ ಕೆಲವು. ಸ್ವಲ್ಪ ಕಾಲ ಪ್ರಯೋಗಾತ್ಮಕವಾಗಿ ಬಳಸಬಲ್ಲವು ಕೆಲವು. ಸಂಪೂರ್ಣ ಹಣ ನೀಡಿ ಕೊಳ್ಳಬೇಕಾದವು ಬಹಳಷ್ಟು. ಸಂಪೂರ್ಣ ಹಣ ಕೊಟ್ಟು ಕೊಳ್ಳಬೇಕಾದ ತಂತ್ರಾಂಶವನ್ನು ಒಂದು ದಿನ ಉಚಿತವಾಗಿ ನೀಡುವ ಜಾಲತಾಣ www.giveawayoftheday.com. ಜಾಲತಾಣದಲ್ಲಿ ಹೆಸರೇ ಸೂಚಿಸುವಂತೆ ಒಂದು ಬೆಲೆಬಾಳುವ ತಂತ್ರಾಂಶವನ್ನು ಪ್ರತಿ ದಿನ ಉಚಿತವಾಗಿ ನೀಡುತ್ತಾರೆ. ಅದನ್ನು ದಿನ ಡೌನ್ಲೋಡ್ ಮಾಡಿಕೊಂಡರೆ ಸಾಲದು. ಅದನ್ನು ಅಂದೇ ಇನ್ಸ್ಟಾಲ್ ಮಾಡಿಕೊಳ್ಳಬೇಕು.

e - ಸುದ್ದಿ

ಬ್ಲಾಗರುಗಳು ಪತ್ರಿಕೋದ್ಯಮಿ ಅಲ್ಲ ಎಂಬ ತೀರ್ಮಾನಕ್ಕೆ ಅಮೆರಿಕದ ಕಾಂಗ್ರೆಸ್ ಬಂದಿದೆ. ಇದರಿಂದಾಗಿ ಬ್ಲಾಗರುಳು ತಾವು ಏನನ್ನೇ ಬರೆದರೂ ಅದಕ್ಕೆ ತಾವೇ ಜವಾಬುದಾರರಾಗುತ್ತಾರೆ. ಮಾತ್ರವಲ್ಲ, ತಮ್ಮ ಮಾಹಿತಿಯ ಮೂಲವನ್ನು ಅಧಿಕಾರಿಗಳು ಕೇಳಿದಾಗ ನೀಡಬೇಕಾಗುತ್ತದೆ. ರಾಜಕಾರಣಿ ಅಥವಾ ಉದ್ಯಮದವರುಗಳ ಅವ್ಯವಹಾರಗಳನ್ನು ಹೊರಹಾಕುವ ಬ್ಲಾಗರುಗಳು ಇನ್ನು ಮುಂದೆ ನಾವು ಪತ್ರಿಕೋದ್ಯಮಿಗಳು ಎಂದು ಹೇಳಿ ತಪ್ಪಿಸಿಕೊಳ್ಳುವಂತಿಲ್ಲ.

e- ಪದ

ವೈ-ಮಾಕ್ಸ್ (WiMAX) - ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಒಂದಕ್ಕೊಂದು ಸಂಪರ್ಕ ಸಾಧಿಸುವ ಇನ್ನೊಂದು ವಿಧಾನ. ವಿಧಾನದ ಮೂಲಕ ಗಣಕದಿಂದ ಗಣಕಕ್ಕೆ ಮತ್ತು ಅಂತರಜಾಲಕ್ಕೆ ಸಂಪರ್ಕ ಸಾಧಿಸಬಹುದು. ಇದನ್ನು ವಯರ್ಲೆಸ್ ಬ್ರಾಡ್ಬಾಂಡ್ ಎಂದೂ ಕರೆಯುತ್ತಾರೆ. ಇದು ವೈ-ಫೈಗಿಂತ ತುಂಬ ಹೆಚ್ಚಿನ ಮಾಹಿತಿ ಸಾಗಾಣಿಕೆಯ ಸಾಮರ್ಥ್ಯ ಹೊಂದಿದೆ.

e - ಸಲಹೆ

ಮೈಕ್ರೋಸಾಫ್ಟ್ ವರ್ಡ್ ೨೦೦೩ ಬಳಸಿ ಕನ್ನಡದ ಕಡತ ತಯಾರಿ ಮಾಡುವಾಗ ಕೆಲವೊಮ್ಮೆ ಫಾಂಟ್ ಆಯ್ಕೆಯ ಸಮಸ್ಯೆ ಬಾಧಿಸುತ್ತದೆ. ಫಾಂಟನ್ನು ಆಯ್ಕೆ ಮಾಡಲು ಹೋದಾಗ ಕನ್ನಡದ ಫಾಂಟ್ಗಳ ಹೆಸರು ಕನ್ನಡ ಲಿಪಿಯಲ್ಲಿ ವಿಚಿತ್ರವಾಗಿ ಅಸಂಬದ್ಧವಾಗಿ ಕಾಣಿಸುತ್ತವೆ. ಇದರಿಂದಾಗಿ ನಮಗೆ ಬೇಕಾದ ಫಾಂಟನ್ನು ಆಯ್ಕೆ ಮಾಡಲು ಕಷ್ಟವಾಗುತ್ತದೆ. ಇದಕ್ಕೊಂದು ಪರಿಹಾರವಿದೆ. Tools ಮೆನುವಿನಲ್ಲಿ Customize ಎಂದು ಆಯ್ಕೆ ಮಾಡಿ ನಂತರ List font names in their font ಎಂಬ ಆಯ್ಕೆಯನ್ನು ತೆಗೆದು ಹಾಕಿ. ಈಗ ಎಲ್ಲ ಫಾಂಟುಗಳ ಹೆಸರುಗಳೂ ಇಂಗ್ಲಿಶ್ ಲಿಪಿಯಲ್ಲೇ ಕಾಣಿಸುತ್ತವೆ. ದುರದೃಷ್ಟಕ್ಕೆ ಸವಲತ್ತು ವರ್ಡ್ ೨೦೦೭ರಲ್ಲಿ ಇಲ್ಲ. ಬರಬರುತ್ತಾ ರಾಯನ ಕುದುರೆ ಕತ್ತೆಯಾಯಿತು ಎನ್ನೋಣವೇ?

ಕಂಪ್ಯೂತರ್ಲೆ

ಬ್ಲಾಗಾಯಣ ಸೂತ್ರಗಳು-

ನಿಮ್ಮ ಬ್ಲಾಗನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರು ಹೊರತಾಗಿ ಇನ್ನೂ ಹಲವಾರು ಮಂದಿ ಓದುತ್ತಾರೆ ಎನ್ನುವುದು ಕೇವಲ ನಂಬಿಕೆ.

ಬ್ಲಾಗಿಂಗ್ ಮೂಲಕ ಸಮಾಜವನ್ನು ಬದಲಿಸುತ್ತೇನೆ ಎಂಬ ನಿಮ್ಮ ನಂಬಿಕೆ ವಾಸ್ತವದಿಂದ ಬಹಳ ದೂರ ಇದೆ.

ಬ್ಲಾಗಿಂಗ್ ಮಾಡುವ ಮೂಲಕ ತರಕಾರಿಯ ಬೆಲೆ ಕೆಳಗಿಳಿಸಲು ಸಾಧ್ಯವಿಲ್ಲ.

ಖಡ್ಗಕ್ಕಿಂತ ಬ್ಲಾಗಿಂಗ್ ಹರಿತ ಎಂಬ ಗಾದೆ ಇನ್ನೂ ಬಳಕೆಗೆ ಬಂದಿಲ್ಲ.

ಬುಧವಾರ, ಮೇ 20, 2009

ಕನ್ನಡಪ್ರಭದಲ್ಲಿ ಗಣಕಿಂಡಿ ಅಂಕಣ

ಕನ್ನಡ ಪ್ರಭ ದಿನ ಪತ್ರಿಕೆಯಲ್ಲಿ ಮೇ ೧೮, ೨೦೦೯ ರಿಂದ ನನ್ನ ಅಂಕಣ ಗಣಕಿಂಡಿ ಪ್ರಾರಂಭವಾಗಿದೆ. ಪ್ರತಿ ಸೋಮವಾರ ಈ ಅಂಕಣ ಇರುತ್ತದೆ. ಈ ಬ್ಲಾಗ್‌ನಲ್ಲಿ ಅವುಗಳನ್ನು ಸೇರಿಸುತ್ತೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

-ಪವನಜ

ಗಣಕಿಂಡಿ - ೦೦೧ (ಮೇ ೧೮, ೨೦೦೯)

ಅಂತರಜಾಲಾಡಿ

ಅಂತರಜಾಲದಲ್ಲಿ (ಇಂಟರ್ನೆಟ್) ಹಲವು ಮಂದಿ ಒಬ್ಬರಿಗೊಬ್ಬರು ಸಂಪರ್ಕದಲ್ಲಿದ್ದು ಮತ್ತು ತಮ್ಮದೇ ಗುಂಪುಗಳನ್ನು ಸ್ಥಾಪಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವ ಹಲವು ಜಾಲತಾಣ (ವೆಬ್ಸೈಟ್) ಅಥವಾ ಸೌಕರ್ಯಗಳಿವೆ. ಇಂತಹ ಜಾಲತಾಣಗಳಿಗೆ ಸೋಶಿಯಲ್ ನೆಟ್ವರ್ಕಿಂಗ್ ವೆಬ್ಸೈಟ್ ಎನ್ನುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಆರ್ಕುಟ್. ಜ್ಞಾನದಾಹಿಗಳಿಗೆಂದೇ ಇರುವ ನೆಟ್ವರ್ಕಿಂಗ್ ಜಾಲತಾಣ ಟ್ವೈನ್. ಇದರಲ್ಲಿ ಹಲವು ಮಂದಿ ಜೊತೆಗೂಡಿ ತಾಣವೀಕ್ಷಣೆ ಮಾಡುವುದು, ಜಾಲತಾಣಗಳ ಕೊಂಡಿ ನೀಡಿ ಅದಕ್ಕೆ ಟಿಪ್ಪಣಿ ಬರೆಯುವುದು, ಅದರ ಬಗ್ಗೆ ವಿಚಾರ ವಿನಿಮಯ, ಇತ್ಯಾದಿ ಮಾಡಬಹುದು. ಉದಾಹರಣೆಗೆ ವಿಜ್ಞಾನದ ಇತ್ತೀಚೆಗಿನ ಸಂಶೋಧನೆಗಳ ಬಗ್ಗೆ ಒಂದು ಟ್ವೈನ್ ಇದೆ. ಈ ವಿಷಯದಲ್ಲಿ ಆಸಕ್ತಿ ಇರುವವರೆಲ್ಲ ಈ ಟ್ವೈನ್ಗೆ ಸದಸ್ಯರಾಗಬಹುದು. ಟ್ವೈನ್ನ ಜಾಲತಾಣ - www.twine.com

ಡೌನ್ಲೋಡ್

ಅಂತರಜಾಲದಲ್ಲಿ ಹಲವು ತಾಣಗಳಿಗೆ ಭೇಟಿ ನೀಡಿ ಅಲ್ಲಿರುವ ವಿಷಯಗಳನ್ನು ಓದುವುದಲ್ಲದೆ ಅವುಗಳನ್ನು ನಿಮ್ಮ ಲೇಖನಕ್ಕೆ ಆಕರವಾಗಿ ಬಳಸಿಕೊಳ್ಳುವವರಲ್ಲಿ ನೀವೂ ಒಬ್ಬರೇ? ಇಂತಹ ಹಲವು ತಾಣಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವಂತಿದ್ದರೆ ಎಷ್ಟು ಒಳ್ಳೆಯದಿತ್ತು ಅನಿಸಿದೆಯೇ? ಹಾಗಿದ್ದರೆ ನಿಮಗೆ ಬೇಕು ಝೊಟೆರೊ. ಇದು ಮೊಝಿಲ್ಲ ಫೈರ್ಪಾಕ್ಸ್ ಬ್ರೌಸರ್ ತಂತ್ರಾಂಶಕ್ಕೆ ಹೆಚ್ಚಿಗೆ ಸೇರ್ಪಡೆಯಾಗಿ ಕೆಲಸ ಮಾಡುತ್ತದೆ. ಇದರಲ್ಲಿ ತಾಣಪುಟಗಳ (ವೆಬ್ಪೇಜ್) ಪ್ರತಿ ಮಾಡಿಟ್ಟುಕೊಳ್ಳುವುದು, ಅವುಗಳಿಗೆ ಟಿಪ್ಪಣಿಯನ್ನು ಮಾಡಿಟ್ಟುಕೊಳ್ಳುವುದು, ಸಂಗ್ರಹಿಸಿಟ್ಟ ಮಾಹಿತಿಗೆ ಮುಖ್ಯಸೂಚಿಪದ (keyword) ನಮೂದನೆ ಇವುಗಳನ್ನೆಲ್ಲ ಮಾಡಬಹುದು. ಝೊಟೆರೊ ಬೇಕಿದ್ದಲ್ಲಿ www.zotero.org ಜಾಲತಾಣಕ್ಕೆ ಭೇಟಿ ನೀಡಿ.

e - ಸುದ್ದಿ

ಗೂಗ್ಲ್ನ ಹಲವು ಸವಲತ್ತುಗಳಲ್ಲಿ ಬೀದಿನೋಟ (streetview) ಕೂಡ ಒಂದು. ಇದನ್ನು ಬಳಸಿ ಇಂಗ್ಲೆಂಡಿನ ಮಹಿಳೆಯೊಬ್ಬಳು ಬೀದಿ ಬೀದಿ ವೀಕ್ಷಿಸುತ್ತಿದ್ದಾಗ ಕಾಣಬಾರದ್ದನ್ನು ಕಂಡಳು. ಅಕೆಯ ಪತಿರಾಯನ ಕಾರು ಇನ್ನೊಂದು ಮಹಿಳೆಯ ಮನೆಯ ಮುಂದೆ ನಿಂತಿತ್ತು. ತಾನು ವ್ಯವಹಾರ ನಿಮಿತ್ತ ಹೊರಗೆ ಹೋಗುತ್ತಿದ್ದೇನೆ ಎಂದ ಪತಿರಾಯ ಆಕೆಯ ಸವತಿ(?) ಮನೆಗೆ ಹೋಗಿದ್ದನ್ನು ಗೂಗ್ಲ್ ಎಂಬ ಉಚಿತ ಖಾಸಗಿ ಪತ್ತೇದಾರ ಹುಡುಕಿ ಕೊಟ್ಟಿದ್ದ. ಇನ್ನೇನು? ಸೋಡಾಚೀಟಿ ಸದ್ಯದಲ್ಲೇ ಬರಲಿದೆ. ಗೂಗ್ಲ್ನ ಬೀದಿನೋಟ ಸವಲತ್ತಿನ ಮೇಲೆ ಹಲವು ಮಂದಿ ಈಗಾಗಲೆ ಕಿಡಿ ಕಾರಿದ್ದಾರೆ. ಬೀದಿನೋಟವನ್ನು ದಾಖಲಿಸಲು ಇಂಗ್ಲೆಂಡಿನ ಬೀದಿಯೊಂದರಲ್ಲಿ ಬಂದು ನಿಂತಿದ್ದ ಗೂಗ್ಲ್ನವರ ವಾಹನವನ್ನು ಬೀದಿಯ ಮಂದಿ ಹೊಡೆದು ಓಡಿಸಿದ್ದೂ ವರದಿಯಾಗಿದೆ.

e- ಪದ

ವೈ-ಫೈ (Wi-Fi) - ನಿಸ್ತಂತು (ವಯರ್ಲೆಸ್) ತಂತ್ರಜ್ಞಾನ ಮೂಲಕ ತಂತಿ ಇಲ್ಲದೆ ಒಂದಕ್ಕೊಂದು ಸಂಪರ್ಕ ಸಾಧಿಸುವ ಒಂದು ವಿಧಾನ. ಈ ವಿಧಾನದ ಮೂಲಕ ಗಣಕದಿಂದ ಗಣಕಕ್ಕೆ ಮತ್ತು ಅಂತರಜಾಲಕ್ಕೆ, ಗಣಕ, ಮೊಬೈಲ್ ಫೋನು, ಕ್ಯಾಮೆರಾ, ಇತ್ಯಾದಿಗಳು ಸಂಪರ್ಕ ಸಾಧಿಸಬಹುದು. ಇತ್ತೀಚೆಗೆ ಇದು ತುಂಬ ಜನಪ್ರಿಯವಾಗುತ್ತಿದೆ. ಬಹುತೇಕ ವಿಮಾನ, ಬಸ್ಸು, ರೈಲು ನಿಲ್ದಾಣಗಳಲ್ಲಿ, ವ್ಯಾಪರೀ ಮಳಿಗೆಗಳಲ್ಲಿ, ಇನ್ನೂ ಹಲವು ಸಾರ್ವಜನಿಕ ಸ್ಥಳಗಳಲ್ಲಿ, ವೈ-ಫೈ ಸೌಲಭ್ಯ ಈಗ ಲಭ್ಯವಿದೆ. ಇದನ್ನು ಬಳಸಿ ಈ ಸ್ಥಳಗಳಲ್ಲಿ ಲ್ಯಾಪ್ಟಾಪ್ ಅಥವಾ ಮೊಬೈಲ್ ಫೋನು ಮೂಲಕ ಅಂತರಜಾಲ ವೀಕ್ಷಣೆ ಮಾಡಬಹುದು.

e - ಸಲಹೆ

ಯಾವುದಾದರೊಂದು ತಂತ್ರಾಂಶ ಕೈಕೊಟ್ಟಾಗ ವಿಂಡೋಸ್ ಒಂದು ದೋಷವರದಿ ಕಳುಹಿಸುವುದಾಗಿ ಹೇಳಿ ನಿಮಗೆ ಕಿರಿಕಿರಿ ಹುಟ್ಟಿಸುತ್ತಿದೆಯೇ? ಈ ವರದಿ ಕಳುಹಿಸುವುದನ್ನು ನಿಲ್ಲಿಸಲು ಹೀಗೆ ಮಾಡಿ: ಡೆಸ್ಕ್ಟಾಪ್ ಮೇಲೆ ಕಾಣುವ My computer ಮೇಲೆ ಮೌಸ್ನ ಬಲ ಗುಂಡಿಯನ್ನು ಆದುಮಿ Properties, ನಂತರ Advanced ಆಯ್ಕೆ ಮಾಡಿ, ನಂತರ ಕಾಣಸಿಗುವ Error Reporting ಗುಂಡಿ (ಬಟನ್) ಯನ್ನು ಅದುಮಿ, ನಂತರ Disable error reporting ಎಂದು ಆಯ್ಕೆ ಮಾಡಿ. ನಂತರ OK ಒತ್ತುತ್ತಾ ಹೋಗಿ ಎಲ್ಲ ಕಿಟಿಕಿಗಳನ್ನು ಮುಚ್ಚಿ.

ಕಂಪ್ಯೂತರ್ಲೆ

ಕೋಲ್ಯನಿಗೆ ಗಣಕದಲ್ಲಿ ತಯಾರಿಸಿದ ಒಂದು ಕಡತವನ್ನು ಅತೀ ಅಗತ್ಯವಾಗಿ ಮುದ್ರಿಸಬೇಕಾಗಿತ್ತು. ಮುದ್ರಕ ಕೈಕೊಟ್ಟಿತ್ತು. ಬಾಸ್ ಬೇರೆ ಕಿರುಚಾಡುತ್ತಿದ್ದರು. ಕೋಲ್ಯನಿಗೆ ಒಂದು ಉಪಾಯ ಹೊಳೆಯಿತು. ಗಣಕದ ಮೋನಿಟರ್ ಅನ್ನು ಕ್ಸೆರಾಕ್ಸ್ ಯಂತ್ರದ ಮೇಲೆ ಬೋರಲು ಹಾಕಿ ಬಟನ್ ಒತ್ತಿದ!

- ಡಾ. ಯು. ಬಿ. ಪವನಜ (ganakindi at gmail dot com)