ಮಂಗಳವಾರ, ಜನವರಿ 25, 2011

ಗಣಕಿಂಡಿ - ೦೮೮ (ಜನವರಿ ೨೪, ೨೦೧೧)

ಅಂತರಜಾಲಾಡಿ

ಗೂಗ್ಲ್ ದೇಹ

ಗೂಗ್ಲ್‌ನವರು ಜಾಲತಾಣ ಶೋಧನೆಯಲ್ಲದೆ ಇನ್ನೂ ಹಲವಾರು ಸವಲತ್ತುಗಳನ್ನು ನೀಡಿದ್ದಾರೆ. ಈ ಸವಲತ್ತುಗಳ ಪಟ್ಟಿಗೆ ಹೊಸ ಸೇರ್ಪಡೆ ಗೂಗ್ಲ್ ದೇಹ. ಇದೊಂದು ಅಂತರಜಾಲತಾಣ. ಈ ಜಾಲತಾಣದಲ್ಲಿ ಮಾನವನ ದೇಹದ ವಾಸ್ತವೋಪಮ (virtual reality) ಮಾದರಿಯನ್ನು ನೀಡಿದ್ದಾರೆ. ಇಲ್ಲಿ ಮಾನವನ ದೇಹದ ಮೂರು ಆಯಾಮಗಳ ಮಾದರಿ ಇದೆ. ನರಮಂಡಳ, ಜೀರ್ಣಾಂಗ ವ್ಯವಸ್ಥೆ, ರಕ್ತನಾಳಗಳು -ಹೀಗೆ ಬೇರೆ ಬೇರೆ ವಿಭಾಗಗಳನ್ನು ಆಯ್ಕೆ ಮಾಡಿಕೊಂಡು ಅವುಗಳನ್ನು ತಿರುಗಿಸಿ, ಒಳಹೊಕ್ಕು ವೀಕ್ಷಿಸಬಹುದು. ಈ ಜಾಲತಾಣದ ವಿಳಾಸ bodybrowser.googlelabs.com. ಇದನ್ನು ವೀಕ್ಷಿಸಲು ಗೂಗ್ಲ್ ಕ್ರೋಮ್ ಬ್ರೌಸರ್ ಇದ್ದರೆ ಒಳ್ಳೆಯದು.

ಡೌನ್‌ಲೋಡ್

ಮೊಬೈಲ್‌ಗೆ ತಂತ್ರಾಂಶ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಸಾಧಾರಣ ಫೋನ್‌ಗಳೂ ಬಹುಮಟ್ಟಿಗೆ ಸ್ಮಾರ್ಟ್‌ಫೋನ್‌ಗಳಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿವೆ. ಅಂತೆಯೇ ಈ ಫೋನ್‌ಗಳಿಗೆ ಸಾವಿರಾರು ತಂತ್ರಾಂಶಗಳೂ ಲಭ್ಯವಿವೆ. ಆಟ, ವಾಲ್‌ಪೇಪರ್, ಚಿತ್ರ, ಕಚೇರಿ ತಂತ್ರಾಂಶ, ಕ್ಯಾಲೆಂಡರ್, ಅಲಾರ್ಮ್ -ಹೀಗೆ ಹಲವಾರು ನಮೂನೆಯ ತಂತ್ರಾಂಶಗಳು ಲಭ್ಯವಿವೆ. ಕೆಲವನ್ನು ಹಣಕೊಟ್ಟು ಕೊಳ್ಳಬೇಕು. ಇನ್ನು ಕೆಲವು ಉಚಿತವಾಗಿ ದೊರೆಯುತ್ತವೆ. ಈ ರೀತಿಯ ತಂತ್ರಾಂಶಗಳು ದೊರೆಯುವ ಒಂದು ಜಾಲತಾಣ www.crazy4mobilez.com. ಈ ಜಾಲತಾಣದಲ್ಲಿ ಮುಖ್ಯವಾಗಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ನೋಕಿಯ ಫೋನ್‌ಗಳಿಗೆ ಮತ್ತು ಐಫೋನ್‌ಗಳಿಗೆ ತಂತ್ರಾಂಶಗಳು ದೊರೆಯುತ್ತವೆ.

e - ಸುದ್ದಿ

ಮುಖನೋಡಿ ಸಲಹೆ ನೀಡುವ ಯಂತ್ರ

ನೀವು ಅಂಗಡಿಗೆ ಹೋದಾಗ ಅಂಗಡಿಯಾತ ನಿಮ್ಮ ಮುಖ ಚಹರೆ ನೋಡಿ ನೀವು ಯಾವ ಸಾಮಾನು ಕೊಳ್ಳಬಹುದು ಎಂದು ಊಹಿಸಿ ಅಂತೆಯೇ ಸಲಹೆ ನೀಡುವುದನ್ನು ಗಮನಿಸಿರಬಹುದು. ತೈವಾನ್‌ನ ತಂತ್ರಜ್ಞರು ಅಂತಹುದೇ ಯಂತ್ರ ತಯಾರಿಸಿದ್ದಾರೆ. ಆ ಯಂತ್ರದ ಮುಂದೆ ನಿಂತರೆ ಆ ವ್ಯಕ್ತಿ ಹೆಣ್ಣೇ ಗಂಡೇ, ಆ ವ್ಯಕ್ತಿಯ ಕೈಯಲ್ಲಿ ಏನೇನು ಇದೆ, ತಲೆಕೂದಲು ಬಿಳಿಯಾಗಿದೆಯೆ, ಕನ್ನಡಕ ಧರಿಸಿದ್ದಾರೆಯೇ, ಇತ್ಯಾದಿ ಎಲ್ಲ ಮಾಹಿತಿಗಳನ್ನು ಕಲೆ ಹಾಕಿ ಆತನಿಗೆ/ಆಕೆಗೆ ಯಾವ ಸಾಮಾನು ಕೊಳ್ಳಲು ಆಸಕ್ತಿ ಇರಬಹುದು ಎಂದು ಊಹಿಸಿ ಅಂತೆಯೇ ಸಲಹೆ ನೀಡುತ್ತದೆ. ನಿಮ್ಮ ಸ್ನೇಹಿತರಿಗೆ ಉಡುಗೊರೆ ಕೊಳ್ಳಬೇಕಿದ್ದರೆ ಈ ಯಂತ್ರವನ್ನು ಬಳಸಿದರೆ ಅದು ನಿಮ್ಮ ಆಸಕ್ತಿಯ ವಸ್ತುಗಳನ್ನು ನೀಡಬಹುದೇ ವಿನಃ ಆತನ ಆಸಕ್ತಿಯ ವಸ್ತಗಳಾಗಿರಲಿಕ್ಕಿಲ್ಲ. 

e- ಪದ

ಮರುಕಳಿಸುವ ಒತ್ತಡದ ನೋವು (Repetitive strain injury - RSI) -ಮತ್ತೆ ಮತ್ತೆ ಕೈ ಅಥವಾ ದೇಹದ ಯಾವುದೇ ಅಂಗವನ್ನು ಒಂದೇ ರೀತಿಯಲ್ಲಿ ಬಳಸುವುದರಿಂದ ಆಗುವ ತೊಂದರೆ. ಇದು ಸಾಮಾನ್ಯವಾಗಿ ಗಣಕದಲ್ಲಿ ಅತಿಯಾಗಿ ದಿನಪೂರ್ತಿ ಒಂದೇ ನಮೂನೆಯ ಕೆಲಸ ಮಾಡುವವರಿಗೆ, ಉದಾಹರಣೆಗೆ ಬೆರಳಚ್ಚು ಮಾಡುವುದು, ಗ್ರಾಫಿಕ್ಸ್ ಕೆಲಸ ಮಾಡುವುದು -ಇಂತಹವರಿಗೆ ಬರುತ್ತದೆ. ಕೈಯನ್ನು ಒಂದೇ ರೀತಿಯಲ್ಲಿ ಇಟ್ಟು ಕೆಲಸ ಮಾಡುವುರಿಂದ ಈ ತೊಂದರೆ ಬರುತ್ತದೆ. ಕುಳಿತುಕೊಳ್ಳುವ ಭಂಗಿ ಸರಿಯಿಲ್ಲದಿದ್ದರೂ ಈ ನೋವು ಬುರತ್ತದೆ.

e - ಸಲಹೆ

ಶಣ್ಮುಖರ ಪ್ರಶ್ನೆ: ನನ್ನ ಗಣಕದ ಮ್ಯಾಕ್ (MAC) ವಿಳಾಸ ತಿಳಿಯುವುದು ಹೇಗೆ?   
ಉ: ಕಮಾಂಡ್ ಪ್ರಾಮ್ಟ್ (command prompt) ಪ್ರಾರಂಭಿಸಿ ಅದರಲ್ಲಿ ipconfig /all ಎಂದು ಬೆರಳಚ್ಚು ಮಾಡಿ. ಕಮಾಂಡ್ ಪ್ರಾಮ್ಟ್ ಪ್ರಾರಂಭಿಸಲು Run ಎಂಬಲ್ಲಿ cmd ಎಂದು ಬೆರಳಚ್ಚು ಮಾಡಿ. ಅಲ್ಲಿ ದೊರೆಯುವ ಮಾಹಿತಿಗಳಲ್ಲಿ Physical address ಎಂಬುದರ ಮುಂದೆ ಇರುವುದೆ ನಿಮ್ಮ ಗಣಕದ ಅಡಾಪ್ಟರ್‌ನ ಮ್ಯಾಕ್ ವಿಳಾಸ.

ಕಂಪ್ಯೂತರ್ಲೆ

ಪ್ರಪಂಚದಲ್ಲಿ ಅತ್ಯಂತ ಅಪ್ರಮಾಣಿಕ ವ್ಯಕ್ತಿ ಯಾರು ಗೊತ್ತೆ? ಗಣಕ ಬಳಕೆದಾರ. ಯಾಕೆಂದರೆ ಪ್ರತಿ ತಂತ್ರಾಂಶ ಅಥವಾ ಜಾಲತಾಣ ಬಳಸುವಾಗಲೂ ಅತಿ ದೀರ್ಘವಾದ ಒಪ್ಪಂದವೊಂದನ್ನು ಅದು ನಿಮ್ಮ ಮುಂದೆ ಎಸೆಯುತ್ತದೆ. ಅದನ್ನು ಯಾರೂ ಓದದೆ ಹಾಗೆಯೇ “ಹೌದು, ನಾನು ಒಪ್ಪಿದ್ದೇನೆ” ಎಂಬಲ್ಲಿ ಕ್ಲಿಕ್ ಮಾಡುತ್ತೀರಾ. 

ಮಂಗಳವಾರ, ಜನವರಿ 18, 2011

ಗಣಕಿಂಡಿ - ೦೮೬ (ಜನವರಿ ೧೦, ೨೦೧೧)

ಅಂತರಜಾಲಾಡಿ

ಆವರ್ತಕೋಷ್ಟಕ ವೀಡಿಯೋ

ಮೂಲವಸ್ತುಗಳನ್ನು ಒಂದು ಕ್ರಮದಲ್ಲಿ ಜೋಡಿಸಿರುವ ಆವರ್ತಕೋಷ್ಟಕ ಎಲ್ಲರಿಗೂ ತಿಳಿದಿರುವ ವಿಚಾರ. ಈ ಆವರ್ತಕೋಷ್ಟಕದ ಬಗ್ಗೆ ಹಲವಾರು ಜಾಲತಾಣಗಳಿವೆ. ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಬಲ್ಲ ತಂತ್ರಾಂಶಗಳೂ ಇವೆ. ಆ ಬಗ್ಗೆ ಇದೇ ಅಂಕಣದಲ್ಲಿ ಮಾಹಿತಿ ನೀಡಲಾಗಿತ್ತು. ಆವರ್ತಕೋಷ್ಟಕದಲ್ಲಿರುವ ಪ್ರತಿ ಮೂಲವಸ್ತುವಿಗೂ ಒಂದು ಕಥೆ ಇದೆ. ಒಂದೊಂದು ಧಾತುವಿನ ಕಥೆಯೂ ಸ್ವಾರಸ್ಯಕರ. ಕೆಲವು ಮೂಲವಸ್ತುಗಳನ್ನು ಪ್ರಯೋಗಾಲಯದಲ್ಲಿ ಮಾತ್ರ ಕಾಣಬಹದು. ಅವುಗಳ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಇಂತಹ ಕುತೂಹಲವನ್ನು ತಣಿಸುವ ಜಾಲತಾಣ www.periodicvideos.com. ಮೂಲವಸ್ತುಗಳ ಬಗ್ಗೆ ಮಾತ್ರವಲ್ಲ, ಇನ್ನೂ ಹಲವಾರು ಸ್ವಾರಸ್ಯಕರ ವೀಡಿಯೋಗಳು ಈ ಜಾಲತಾಣದಲ್ಲಿವೆ. ಭಾರತೀಯ ರಸಾಯನಶಾಸ್ತ್ರ ಎಂಬ ಒಂದೇ ಒಂದು ವೀಡಿಯೋದಲ್ಲಿ ಭಾರತಕ್ಕೆ ಇದು ತನಕ ಬಂದಿರುವ ಒಂದೇ ಒಂದು ವಿಜ್ಞಾನ ನೋಬೆಲ್ ಬಗ್ಗೆ ವಿವರಗಳಿವೆ.


ಡೌನ್‌ಲೋಡ್

ಮೌಸ್ ಗುದ್ದಾಟ ಬಿಡಿ

ಮೌಸ್ ಇಲ್ಲದ ಗಣಕ ಊಹಿಸುವುದೇ ಕಷ್ಟ. ಗಣಕದಲ್ಲಿ ಕೆಲಸ ಮಾಡುವಾಗ ಬೆರಳುಗಳಿಗೆ ಸುಲಭವಾಗಲಿ ಎಂದು ಮೌಸ್‌ನ ಆವಿಷ್ಕಾರವಾಯಿತು. ಆದರೂ ಕೆಲವೊಮ್ಮೆ ಮೌಸ್ ಕಿರಿಕಿರಿ ಉಂಟುಮಾಡುತ್ತದೆ. ಮತ್ತೆ ಮತ್ತೆ ಒಂದೇ ರೀತಿ ಬೆರಳುಗಳನ್ನು ಬಳಸುವುದರಿಂದ ಮುಂಗೈ ಮತ್ತು ಬೆರಳುಗಳಿಗೆ ನೋವಾಗುವ ಸಾಧ್ಯತೆಗಳಿವೆ. ಈ ರೀತಿ ನೋವಾಗುವುದನ್ನು ತಪ್ಪಿಸಬೇಕಾದರೆ ಮೌಸ್ ಬಳಸುವ ವಿಧಾನ ಬದಲಾಯಿಸಬೇಕು ಮಾತ್ರವಲ್ಲ ಮೌಸ್ ಬಳಸುವುದನ್ನೇ ಕಡಿಮೆ ಮಾಡಬೇಕು. ಆದರೆ ಮೌಸ್ ಇಲ್ಲದೆ ಗಣಕ ಬಳಸುವುದೆಂತು ಅನ್ನುತ್ತೀರಾ? ಮೌಸ್ ಇಲ್ಲದೆ ಕೇವಲ ಕೀಲಿಮಣೆ  ಬಳಸಿ ಮೌಸ್‌ನ ಎಲ್ಲ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ತಂತ್ರಾಂಶ MouseFIGHTER. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - www.mousefighter.com.

e - ಸುದ್ದಿ

ಗುಂಡೇಟಿನಿಂದ ಉಳಿಸಿದ ಫೋನು

ಹಿಮದ ಪ್ರಪಾತಕ್ಕೆ ಜಾರದಂತೆ ಒಬ್ಬಾತನನ್ನು ಬದುಕುಳಿಸಿದ ದೊಡ್ಡ ಗಾತ್ರದ ಫೋನು ಬಗ್ಗೆ ಇದೇ ಅಂಕಣದಲ್ಲಿ ವರದಿ ನೀಡಲಾಗಿತ್ತು. ಗುಂಡೇಟಿನಿಂದ ಒಬ್ಬಾತನನ್ನು ಫೋನೊಂದು ಬದುಕುಳಿಸಿದ ಕಥೆ ಈಗ ವರದಿಯಾಗಿದೆ. ಎದೆಯ ಭಾಗದಲ್ಲಿ ಅಂಟಿಸಿದ್ದ ಲೋಹದ ಬಿಲ್ಲೆಯಿಂದಾಗಿ ಗುಂಡೇಟಿನಿಂದ ಬದುಕುಳಿದ ಕಥೆಯನ್ನು ಖ್ಯಾತ ಹಿಂದಿ ಸಿನಿಮಾದಲ್ಲಿ ನೋಡಿದ ನೆನಪಿರಬಹುದು. ಈ ಕಥೆಯೂ ಅದೇ ರೀತಿ ಇದೆ. ಅಟ್ಲಾಂಟದ ಜಾನ್ ಗಾರ್ಬರ್ ಹೆಸರಿನ ವ್ಯಕ್ತಿ ರಾತ್ರಿಕ್ಲಬ್ಬೊಂದರಲ್ಲಿ ಸುರಕ್ಷಕನಾಗಿ ಕೆಲಸ ಮಾಡುತ್ತಿದ್ದ. ಅತಿಯಾಗಿ ಕುಡಿದಿದ್ದ ಕೆಲವು ಮಂದಿ ಆತನೊಡನೆ ಜಗಳ ಕಾದರು. ಕೊನೆಗೊಬ್ಬ ತನ್ನ ಪಿಸ್ತೂಲಿನಿಂದ ಆತನ ಎದೆಯ ಭಾಗಕ್ಕೆ ಗುಂಡು ಹೊಡೆದ. ಜಾನ್ ಧರಿಸಿದ್ದ ದಪ್ಪ ಕೋಟನ್ನು ಸೀಳಿ ಮುಂದುವರೆದ ಗುಂಡು ಆತನ ಅಂಗಿ ಕಿಸೆಯಲ್ಲಿದ್ದ ದಪ್ಪ ಫೋನಿನಿಂದಾಗಿ ತಡೆಹಿಡಿಯಲ್ಪಟ್ಟಿತು. ಈಗ ಆತನ ಕೋಟು ಮತ್ತು ಫೋನು ಎರಡಲ್ಲೂ ತೂತುಗಳಾಗಿವೆ. ಆತನ ಜೀವಕ್ಕೇನೂ ಅಪಾಯವಾಗಲಿಲ್ಲ. ಅಂಗಿಕಿಸೆಯಲ್ಲಿ ಫೋನು ಇಟ್ಟುಕೊಳ್ಳುವುದು ಒಳ್ಳೆಯದಲ್ಲ ಎನ್ನುವವರು ಈಗೇನಂತಾರೆ? 

e- ಪದ

ಆಪ್ (App) -ಇದು application ಎಂಬುದರ ಸಂಕ್ಷಿಪ್ತ ರೂಪ. ಗಣಕ, ಸ್ಮಾರ್ಟ್‌ಫೋನ್ ಅಥವಾ ಇನ್ಯಾವುದಾದರೂ ಮಾಹಿತಿ ತಂತ್ರಜ್ಞಾನ ಆಧಾರಿತ ಸಾಧನದಲ್ಲಿ ಕೆಲಸ ಮಾಡುವ ಆನ್ವಯಿಕ ತಂತ್ರಾಂಶ. ಈ ಪದವನ್ನು ೨೦೧೦ರ ಪದ ಎಂದು ಆಯ್ಕೆ ಮಾಡಲಾಗಿದೆ.

e - ಸಲಹೆ

ಪ್ರ: ಕರ್ನಾಟಕ ಲೋಕಾಯುಕ್ತರ ಜಾಲತಾಣದ ವಿಳಾಸ ಏನು?
ಉ: lokayukta.kar.nic.in  

ಕಂಪ್ಯೂತರ್ಲೆ

ಐದನೆಯ ತರಗತಿಯಲ್ಲಿ ಓದುತ್ತಿರುವ ಕೋಲ್ಯನ ಮಗನಿಗೆ ಶೇಕ್ಸ್‌ಪಿಯರ್ ಬಗ್ಗೆ ಪ್ರಬಂಧ ಬರೆದುಕೊಂಡು ಬರಲು ಶಾಲೆಯಲ್ಲಿ ಹೇಳಿದ್ದರು. ಆತ ಗೂಗ್‌ಲ್‌ನಲ್ಲಿ ಶೇಕ್ಸ್‌ಪಿಯರ್ ಎಂಬು ಟೈಪಿಸಿದಾಗ ಬಂದ ಮಾಹಿತಿಗಳನ್ನೆಲ್ಲ ಓದದೆ ನಕಲು ಮಾಡಿ ಒಂದು ವರ್ಡ್ ಫೈಲಿಗೆ ಅಂಟಿಸಿ ತೆಗೆದುಕೊಂಡು ಹೋಗಿ ಒಪ್ಪಿಸಿದ. ಅದರಲ್ಲಿ ಒಂದು ಕಡೆ “ನಾನು ಈ ಬರವಣಿಗೆಯನ್ನು ನನ್ನ ಪ್ರೇಯಸಿಯ ನೆನಪಿಗೆ ಮುಡಿಪಾಗಿ ನೀಡುತ್ತಿದ್ದೇನೆ” ಎಂದು ಇತ್ತು. 

ಸೋಮವಾರ, ಜನವರಿ 10, 2011

ಗಣಕಿಂಡಿ - ೦೮೬ (ಜನವರಿ ೧೦, ೨೦೧೧)

ಅಂತರಜಾಲಾಡಿ

ಗ್ರಹ ಹುಡುಕಿ

ನಮ್ಮ ಬ್ರಹ್ಮಾಂಡದಲ್ಲಿರುವ ಕೋಟ್ಯಾನುಕೋಟಿ ನಕ್ಷತ್ರಗಳಲ್ಲಿ ನಮ್ಮ ಸೂರ್ಯನಿಗೆ ಮಾತ್ರ ಗ್ರಹಗಳಿವೆ ಎಂದು ನಂಬಿದ್ದ ಕಾಲ ಇತ್ತು. ಬೇರೆ ನಕ್ಷತ್ರಗಳಿಗೂ ಗ್ರಹಗಳಿವೆ ಎಂದು ಈಗ ಪತ್ತೆಹಚ್ಚಲಾಗಿದೆ. ಈಗಾಗಲೆ ಸುಮಾರು ೫೦೦ಕ್ಕಿಂತ ಹೆಚ್ಚು ಅಂತಹ ಗ್ರಹಗಳನ್ನು ಕಂಡುಹುಡುಕಲಾಗಿದೆ. ಇಂತಹ ಗ್ರಹಗಳನ್ನು ಕಂಡುಹುಡುಕುವುದು ಸುಲಭವಲ್ಲ. ನಕ್ಷತ್ರದಿಂದ ಸೂಸುವ ಬೆಳಕನ್ನು ಮತ್ತು ಅದರ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಗ್ರಹಗಳು ಸುತ್ತುತ್ತಿವೆ ಎಂದು ತೀರ್ಮಾನಿಸಲಾಗುತ್ತದೆ. ಈ ಸಂಶೋಧನೆಗೆ ತುಂಬ ಸಮಯ ಮತ್ತು ತಾಳ್ಮೆ ಬೇಕು. ಇದಕ್ಕೆಂದೆ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ದೂರದರ್ಶಕಗಳಿಂದ ದೊರಕಿದ ಮಾಹಿತಿಯನ್ನು ಉಚಿತವಾಗಿ ಅಂತರಜಾಲದಲ್ಲಿ ಸೇರಿಸಿದ್ದಾರೆ. ಆಸಕ್ತರು ಈ ಮಾಹಿತಿಯನ್ನು ಬಳಸಿ ಮನೆಯಲ್ಲೇ ಕುಳಿತು ಗ್ರಹಗಳನ್ನು ಪತ್ತೆಹಚ್ಚಬಹುದು. ಹೀಗೆ ಗ್ರಹಗಳನ್ನು ಹುಡುಕಲೆಂದೇ ಮಾಹಿತಿ ನೀಡುವ ಜಾಲತಾಣ www.planethunters.org. ಇತ್ತೀಚೆಗೆ ಒಬ್ಬರು ಇಂತಹ ಮಾಹಿತಿ ಬಳಸಿ ತಮ್ಮ ಮನೆಯಲ್ಲೇ ಕುಳಿತು ನಾಲ್ಕು ಗ್ರಹಗಳನ್ನು ಪತ್ತೆಹಚ್ಚಿದ್ದಾರೆ.

ಡೌನ್‌ಲೋಡ್

ಯಾರಿಂದಾಯಿತು?

ಆಗಾಗ ಗಣಕವು ನೀಲಿ ಪರದೆ ಪ್ರದರ್ಶಿಸಿ ತಟಸ್ಥವಾಗುತ್ತಿದೆಯೆ? ಇಂತಹ ಸಮಸ್ಯೆಗೆ ಒಂದು ಪ್ರಮುಖ ಕಾರಣ ಯಾವುದೋ ತಂತ್ರಾಂಶವು ಬಳಸುತ್ತಿರುವ ಡ್ರೈವರ್ ತಂತ್ರಾಂಶ ಆಗಿರಬಹುದು. ಹಲವು ಸಾಧನಗಳನ್ನು ಬಳಸುವಾಗ ತಂತ್ರಾಂಶಗಳನ್ನು ಸರಿಯಾಗಿ ನವೀಕರಿಸಿಕೊಳ್ಳದಿದ್ದಾಗ ಇಂತಹ ತೊಂದರೆ ಕಂಡುಬರುತ್ತದೆ. ಯಾವ ಡ್ರೈವರ್ ಕೈಕೊಟ್ಟು ಗಣಕ ತಟಸ್ಥವಾಯಿತು ಎಂದು ಪತ್ತೆಹಚ್ಚಲು ಅನುವು ಮಾಡಿಕೊಡುವ ಒಂದು ಉಚಿತ ತಂತ್ರಾಂಶ WhoCrashed. ಇದರ ವಿಳಾಸ - http://bit.ly/gFU2Cy. ಗಣಕ ತಟಸ್ಥವಾದಾಗ ಅಥವಾ ತನ್ನಿಂದತಾನೆ ರಿಬೂಟ್ ಆದಾಗ ಅದು ಕೆಲವು ವರದಿಗಳನ್ನು ತಯಾರಿಸುತ್ತದೆ. ಈ ವರದಿಗಳನ್ನು ಗಣಕಪರಿಣತರಲ್ಲದವರಿಗೂ ಅರ್ಥವಾಗುವ ರೀತಿಗೆ ಪರಿವರ್ತಿಸಿ ಹೊಸ ವರದಿಯನ್ನು ಈ ತಂತ್ರಾಂಶ ನೀಡುತ್ತದೆ. 

e - ಸುದ್ದಿ

ಟಿವಿಯನ್ನು ಹಿಂದೆಹಾಕಿದ ಅಂತರಜಾಲ

ಅಮೆರಿಕದಲ್ಲಿ ಒಂದು ಸಮೀಕ್ಷೆ ನಡೆಸಲಾಯಿತು. ಅಮೆರಿಕದ ಯುವ ಜನತೆ ಸುದ್ದಿಗಳಿಗೆ ಟಿವಿಯ ಬದಲಿಗೆ ಅಂತರಜಾಲವನ್ನೆ ಹೆಚ್ಚು ಆಶ್ರಯಿಸುತ್ತಾರೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂತು. ೩೦ ವರ್ಷದ ಕೆಳಗಿನ ೬೫% ಜನರು ಸುದ್ದಿಗಳನ್ನು ತಿಳಿಯಲು ಅಂತರಜಾಲವನ್ನು ನಂಬಿದ್ದಾರೆ. ೫೨% ಜನರು ಮಾತ್ರ ಸುದ್ದಿಗಳಿಗೆ ಟಿವಿಯನ್ನು ಆಶ್ರಯಿಸಿದ್ದಾರೆ. ೨೦೦೭ನೆಯ ಇಸವಿಯಲ್ಲಿ ೩೪%ರಷ್ಟು ಜನರು ಮಾತ್ರ ಸುದ್ದಿಗಳಿಗೆ ಅಂತರಜಾಲವನ್ನು ಆಶ್ರಯಿಸಿದ್ದರು. ನಮ್ಮ ದೇಶದಲ್ಲೂ ಪ್ರಮುಖ ನಗರಗಳಲ್ಲಿ ಸುದ್ದಿಗಳಿಗೆ ಅಂತರಜಾಲವನ್ನು ಆಶ್ರಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸುದ್ದಿಮಾಧ್ಯಮದ ಮಂದಿ ಇದನ್ನು ಗಮನಿಸುತ್ತಿದ್ದೀರಾ?

e- ಪದ

ಪಾವತಿ ಮಹಾದ್ವಾರ (payment gateway) -ಅಂತರಜಾಲದ ಮೂಲಕ ವ್ಯಾಪಾರ ಮಾಡುವಾಗ ಸಾಮಾನ್ಯವಾಗಿ ವ್ಯಾಪಾರಿ ಜಾಲತಾಣವು ಹಣಸಂದಾಯದ ವಿಷಯಕ್ಕೆ ಬಂದಾಗ ಇನ್ನೊಂದು ಜಾಲತಾಣಕ್ಕೆ ನಿಮ್ಮನ್ನು ವರ್ಗಾಯಿಸುವುದನ್ನು ಗಮನಿಸಿರಬಹುದು. ಈ ಜಾಲತಾಣವೇ ಪಾವತಿ ಮಹಾದ್ವಾರ. ಇವುಗಳನ್ನು ಸಾಮಾನ್ಯವಾಗಿ ಅಂತರಜಾಲ ಬ್ಯಾಂಕ್‌ಗಳು ನಡೆಸುತ್ತವೆ. ಇವು ನಿಮ್ಮ ಕ್ರೆಡಿಟ್ ಕಾರ್ಡ್ ಅಥವಾ ಇನ್ಯಾವುದಾದರು ಅಂತರಜಾಲ ಹಣಸಂದಾಯದ ವಿಧಾನದ ಮೂಲಕ ನಿಮ್ಮ ಖಾತೆಯಿಂದ ವ್ಯಾಪಾರಿ ಜಾಲತಾಣಕ್ಕೆ ಹಣವನ್ನು ವರ್ಗಾಯಿಸುತ್ತವೆ.

e - ಸಲಹೆ

ಮೈಸೂರಿನ ಪ್ರಸನ್ನ ರಾವ್ ಅವರ ಪ್ರಶ್ನೆ: ನಾನು ಗಣಕದಲ್ಲಿ ಒಂದಕ್ಕಿಂತ ಹೆಚ್ಚು ವೈರಸ್ ನಿರೋಧಕ ತಂತ್ರಾಂಶಗಳನ್ನು ಬಳಸಬಹುದೇ?
ಉ: ಒಂದಕ್ಕಿಂತ ಹೆಚ್ಚು ವೈರಸ್ ನಿರೋಧಕ ತಂತ್ರಾಂಶಗಳನ್ನು ಬಳಸುವುದು ಒಳ್ಳೆಯದಲ್ಲ. ಕೆಲವು ತಂತ್ರಾಂಶಗಳು ಈ ರೀತಿ ಬಳಸಲು ನಿಮಗೆ ಬಿಡುವುದೂ ಇಲ್ಲ. 

ಕಂಪ್ಯೂತರ್ಲೆ

ಕೋಲ್ಯ ಒಂದು ಅತ್ಯಾಧುನಿಕ ಗಣಕ ನಿಯಂತ್ರಿತ ಕಾರು ಕೊಂಡುಕೊಂಡ. ಕಾರನ್ನು ಓಡಿಸಲು ಒಬ್ಬ ಡ್ರೈವರ್ ನೇಮಿಸಿಕೊಂಡ. ಕಾರು ಮಾತ್ರ ಹೊರಡಲಿಲ್ಲ. ಕೋಲ್ಯ ಡ್ರೈವರ್‌ಗೆ ಕೇಳಿದ “ಏನಾಯಿತು” ಎಂದು. “ಗಣಕಕ್ಕೆ ಡ್ರೈವರ್ ತಂತ್ರಾಂಶ ಹಾಕಬೇಕಾಗಿದೆ” ಎಂದು ಡ್ರೈವರ್ ಹೇಳಿದ. ಕೋಲ್ಯನಿಗೆ ವಿಪರೀತ ಕೋಪ ಬಂತು. “ನೀನೆ ಒಬ್ಬ ಡ್ರೈವರ್. ನಿನಗೊಬ್ಬ ಡ್ರೈವರ್ ಬೇಕೇ?” ಎಂದು ಗುರ್ರಾಯಿಸಿದ.

ಸೋಮವಾರ, ಜನವರಿ 3, 2011

ಗಣಕಿಂಡಿ - ೦೮೫ (ಜನವರಿ ೦೩, ೨೦೧೧)

ಅಂತರಜಾಲಾಡಿ

ಸಮುದಾಯ ನಿಘಂಟು

ಅಂತರಜಾಲದಲ್ಲಿ ಕನ್ನಡದ ಒಂದು ಸಮುದಾಯ ನಿಘಂಟು ಇದೆ. ಇದು ಕನ್ನಡದ ಮುಕ್ತ ವಿಶ್ವಕೋಶ ಅರ್ಥಾತ್ ವಿಕಿಪೀಡಿಯಾ ಬಳಗಕ್ಕೆ ಸೇರಿದೆ. ಸದ್ಯಕ್ಕೆ ಇದರಲ್ಲಿ ಸುಮಾರು ೮೪ ಸಾವಿರ ಪದಗಳಿವೆ. ಇದರಲ್ಲಿ ಇರುವ ಪದಗಳು ಒಂದು ವ್ಯವಸ್ಥಿತ ಚೌಕಟ್ಟಿಲ್ಲಿ ಇರುವಂತೆ ಕಂಡುಬರುವುದಿಲ್ಲ. ಅದಕ್ಕೆ ಪ್ರಮುಖ ಕಾರಣ ಇದರಲ್ಲಿ ಪದಗಳನ್ನು ಸೇರಿಸಿರುವವರು ಜನಸಾಮಾನ್ಯರು. ಯಾವುದೇ ನಿಗಂಟು ತಜ್ಞರಲ್ಲ. ಸರಕಾರ ನೇಮಿಸಿದ ಯಾವುದೇ ಸಮಿತಿಯೂ ಅಲ್ಲ. ಈ ನಿಘಂಟಿನ ಜಾಲತಾಣದ ವಿಳಾಸ - kn.wiktionary.org. ಅಲ್ಲಿಗೆ ನೀವೂ ಭೇಟಿ ನೀಡಿ. ಅಷ್ಟಕ್ಕೆ ನಿಲ್ಲಿಸಬೇಡಿ. ನೀವೂ ಈ ಜಾಲತಾಣಕ್ಕೆ ನಿಮ್ಮ ಕಾಣಿಕೆ ನೀಡಿ. ಅಂದ ಹಾಗೆ ಮುಕ್ತ ವಿಶ್ವಕೋಶ ವಿಕಿಪೀಡಿಯಾಕ್ಕೆ ಜನವರಿ ೧೫, ೨೦೧೧ಕ್ಕೆ ೧೦ ವರ್ಷ ತುಂಬುತ್ತಿದೆ. ಅದರ ಆಚರಣೆಗೆ ತಯಾರಿ ನಡೆಯುತ್ತಿದೆ. ನೀವೂ ಈ ಆಚರಣೆಯಲ್ಲಿ ಭಾಗವಹಿಸಬೇಕಾದರೆ ten.wikipedia.org ಜಾಲತಾಣದಲ್ಲಿ ಹೆಸರು ನೋಂದಾಯಿಸಿ.

ಡೌನ್‌ಲೋಡ್

ಕ್ಯಾಲೆಂಡರ್

ಕ್ಯಾಲೆಂಡರ್ ಅನ್ನು ಗೋಡೆಗೆ ತೂಗು ಹಾಕುವ ಕಾಲ ಕಳೆದು ಹೋಯಿತು. ಈಗ ಎಲ್ಲವೂ ಗಣಕದಲ್ಲೇ. ಕ್ಯಾಲೆಂಡರ್ ತಂತ್ರಾಂಶಗಳು ಹಲವಾರಿವೆ. ಅಂತಹ ಒಂದು ಉಚಿತ ತಂತ್ರಾಂಶ Rainlendar. ಇದನ್ನು ಬಳಸಿ ಯಾವ ಯಾವ ದಿನ, ಸಮಯಗಳಲ್ಲಿ ಯಾವ ಯಾವ ಕಾರ್ಯಗಳನ್ನು ಮಾಡಬೇಕಾಗಿದೆ, ಅಲಾರ್ಮ್, ಕಾರ್ಯಕ್ರಮಗಳ ಪಟ್ಟಿ ಎಲ್ಲ ದಾಖಲಿಸಬಹುದು. ಇದು ದೊರೆಯುವ ಜಾಲತಾಣ http://bit.ly/hhXklw. ಇಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳು ಲಭ್ಯ. ಎರಡರ ವ್ಯತ್ಯಾಸವನ್ನೂ ಅಲ್ಲೇ ಓದಿಕೊಳ್ಳಬಹುದು.

e - ಸುದ್ದಿ

ಐಫೋನ್ ಕಳ್ಳನನ್ನು ಹಿಡಿದ ಹೆಲಿಕಾಫ್ಟರ್

ಐಫೋನ್ ಕಳ್ಳನನ್ನು ಹೆಲಿಕಾಫ್ಟರ್ ಮೂಲಕ ಬೆಂಬತ್ತಿ ಸೆರೆಹಿಡಿದ ಕಥೆ ಕೇಳಿದ್ದೀರಾ? ಇದು ಆಸ್ಟ್ರೇಲಿಯದಿಂದ ವರದಿಯಾದ ಕಥೆ. ಮೆಲ್ಬೋರ್ನ್‌ನಲ್ಲಿ ಒಬ್ಬಾಕೆ ರಸ್ತೆ ಬದಿಯಲ್ಲಿ ಐಫೋನ್ ಹಿಡಿದುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಒಬ್ಬ ಕಳ್ಳ ಆಕೆಯ ಐಫೋನನ್ನು ಕಿತ್ತುಕೊಂಡು ಹೋದ. ಆಕೆಯ ದೂರನ್ನು ದಾಖಲಿಸಿಕೊಂಡ ಪೋಲೀಸರು ಸಮೀಪದಲ್ಲೇ ಹಾರಾಡುತ್ತಿದ್ದ ಪೋಲೀಸ್ ಹೆಲಿಕಾಫ್ಟರಿಗೆ ಆಕೆಯ ದೂರನ್ನು ವರ್ಗಾಯಿಸಿದರು. ಅದೃಷ್ಟಕ್ಕೆ ಐಫೋನಿನಲ್ಲಿದ್ದ ಜಿ.ಪಿ.ಎಸ್. ಸೌಲಭ್ಯ ಐಫೋನ್ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ವರದಿ ಮಾಡುತ್ತಿತ್ತು. ಹೆಲಿಕಾಫ್ಟರ್ ಮೂಲಕ ಪೋಲೀಸರು ಕಳ್ಳನ ಬೆಂಬತ್ತಿ ಅತನನ್ನು ಹಿಡಿದರು.

e- ಪದ

ಪೃಥಕ್ಕರಣ ಸಾಮರ್ಥ್ಯ (ರೆಸೊಲೂಶನ್ - resolution) - ಒಂದು ಚಿತ್ರದ ಸ್ಪಷ್ಟತೆಯ ಮಾಪನ. ಸಾಮಾನ್ಯವಾಗಿ ಗಣಕ ಪರದೆ (ಮೋನಿಟರ್) ಮತ್ತು ಮುದ್ರಕದಲ್ಲಿ ಚಿತ್ರವನ್ನು (ಗ್ರಾಫಿಕ್ಸ್) ಎಷ್ಟು ಸ್ಪಷ್ಟವಾಗಿ ಮೂಡಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ. ಚಿತ್ರವನ್ನು ಚಿಕ್ಕಚಿಕ್ಕ ಚುಕ್ಕಿಗಳನ್ನು ಮೂಡಿಸುವ ಮೂಲಕ ಪಡೆಯಲಾಗುತ್ತದೆ. ಈ ಚುಕ್ಕಿಗಳ ಸಂಖ್ಯೆ ಹೆಚ್ಚಿದ್ದಷ್ಟು ಚಿತ್ರ ಹೆಚ್ಚು ಸ್ಪಷ್ಟವಾಗಿ ಮೂಡುತ್ತದೆ. ಸಾಮಾನ್ಯವಾಗಿ ಗಣಕ ಪರದೆಯ ರೆಸುಲೂಶನ್ 800x600, 1024x768, ಇತ್ಯಾದಿ ಇರುತ್ತದೆ.

e - ಸಲಹೆ

ರಾಮಚಂದ್ರರ ಪ್ರಶ್ನೆ: ಗಣಕದ ಕಾನ್ಫಿಗರೇಶನ್ ತಿಳಿಯುವುದು ಹೇಗೆ?
ಉ: ಗಣಕದ ಪರದೆಯ ಮೇಲೆ ಕಾಣಿಸುವ My Computer ಐಕಾನ್ ಮೇಲೆ ಗಣಕದ ಮೌಸ್‌ನ ಬಲಗುಂಡಿಯನ್ನು ಕ್ಲಿಕ್ ಮಾಡಿ ನಂತರ Properties ಅನ್ನು ಆಯ್ಕೆ ಮಾಡಿ.

ಕಂಪ್ಯೂತರ್ಲೆ

ಕೋಲ್ಯನಲ್ಲಿಯಾರೋ “ನಿನ್ನ ಹೊಸ ವರ್ಷದ ರೆಸೊಲೂಶನ್ ಏನು” ಎಂದು ಕೇಳಿದಾಗ ಆತ “1024x768” ಎಂದು ಉತ್ತರಿಸಿದ.