ಸೋಮವಾರ, ಅಕ್ಟೋಬರ್ 24, 2011

ಗಣಕಿಂಡಿ - ೧೨೭ (ಅಕ್ಟೋಬರ್ ೨೪, ೨೦೧೧)

ಅಂತರಜಾಲಾಡಿ

ಪರ್ಯಾಯ

ಗಣಕದಲ್ಲಿ ಕೆಲಸ ಮಾಡಬೇಕಾದರೆ ಉಪಯುಕ್ತ ತಂತ್ರಾಂಶಗಳು ಅತೀ ಅಗತ್ಯ. ದಿನನಿತ್ಯದ ಬಳಕೆಗೆ ಎಲ್ಲ ಅಗತ್ಯ ತಂತ್ರಾಂಶಗಳನ್ನು ಹಣ ಕೊಟ್ಟು ಕೊಂಡುಕೊಂಡರೆ ಬಹುಶಃ ಎರಡು ಲಕ್ಷ ರೂಪಾಯಿಯನ್ನು ದಾಟಬಹುದು. ನಾವು ಅಷ್ಟು ಹಣ ಕೊಟ್ಟೇ ಇಲ್ಲವಲ್ಲ ಎಂದು ಆಶ್ಚರ್ಯ ಪಡಬೇಡಿ. ಬಹುಪಾಲು ಸಂದರ್ಭಗಳಲ್ಲಿ ನೀವು ಕೊಂಡ ಗಣಕದ ಜೊತೆ ಅದನ್ನು ಮಾರಿದವರು ಅಗತ್ಯದ ತಂತ್ರಾಂಶಗಳನ್ನು ಚೌರ್ಯ ಮಾಡಿ ಇನ್‌ಸ್ಟಾಲ್ ಮಾಡಿರುತ್ತಾರೆ. ಇದು ಕಾನೂನು ಪ್ರಕಾರ ತಪ್ಪು. ಹಾಗಿದ್ದರೆ ಉಚಿತ ತಂತ್ರಾಂಶಗಳೇ ಇಲ್ಲವೇ? ಇವೆ. ಬೇಕಾದಷ್ಟಿವೆ. ನಿಮಗೆ ಅಗತ್ಯವಿರುವ ದುಬಾರಿ ವಾಣಿಜ್ಯಕ ತಂತ್ರಾಂಶಕ್ಕೆ ಪರ್ಯಾಯ ತಂತ್ರಾಂಶ ಹುಡುಕಬೇಕಿದ್ದಲ್ಲಿ alternativeto.net ಜಾಲತಾಣಕ್ಕೆ ಭೇಟಿ ನೀಡಿ.

ಡೌನ್‌ಲೋಡ್

ಫೋಟೋಗಳನ್ನು ಒಂದುಗೂಡಿಸಿ

ಕೆಲವು ಸಂದರ್ಭಗಳಲ್ಲಿ ನಾವು ಫೋಟೋ ತೆಗೆಯುವ ವಸ್ತು ಅಥವಾ ಸ್ಥಳದ ಮೇಲೆ ಬೇಳಕು ಎಲ್ಲ ಜಾಗದಲ್ಲೂ ಒಂದೇ ರೀತಿಯಾಗಿರುವುದಿಲ್ಲ. ಆಗ ನಾವು ಯಾವುದಾದರೂ ಒಂದು ಜಾಗದ ಮೇಲೆ ಕೇಂದ್ರೀಕರಿಸಿ ಆ ಜಾಗದಲ್ಲಿರುವ ಬೆಳಕಿಗೆ ಅನುಗುಣವಾಗಿ ಶಟ್ಟರ್ ವೇಗ, ಅಪೆರ್ಚರ್ ಇತ್ಯಾದಿ ಆಯ್ಕೆ ಮಾಡಿಕೊಂಡು ಫೋಟೋ ತೆಗೆಯುತ್ತೇವೆ. ಹಾಗೆ ಮಾಡುವುದರಿಂದ ಏನಾಗುತ್ತದೆಯೆಂದರೆ ಕೆಲವು ಭಾಗ ಕಪ್ಪಾಗಿ ಮತ್ತು ಇನ್ನು ಕೆಲವು ಭಾಗ ಅತಿ ಬಿಳುಪಾಗಿ ಬರುತ್ತದೆ. ಈ ಸಮಸ್ಯೆಗೆ ಒಂದು ಪರಿಹಾರವಿದೆ. ಒಂದೇ ವಸ್ತುವಿನ ಫೋಟೋವನ್ನು ಹಲವು ಅಪೆರ್ಚರ್ ಆಯ್ಕೆಗಳಲ್ಲಿ ತೆಗೆದು ಅನಂತರ ಗಣಕದಲ್ಲಿ ಅವುಗಳನ್ನು ಸೂಕ್ತ ತಂತ್ರಾಂಶ ಬಳಸಿ ಜೋಡಿಸುವುದು. ಇಂತಹ ಫೋಟೋಗ್ರಾಫಿಗೆ ಹೈ ಡೈನಾಮಿಕ್ ರೇಂಜ್ (HDR) ಫೋಟೋ ಎಂದು ಕರೆಯುತ್ತಾರೆ. ಹೀಗೆ ಮಾಡಲು ಅನುವು ಮಾಡಿಕೊಡುವ ಒಂದು ಉಚಿತ ತಂತ್ರಾಂಶ Fusion ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - fusion.ns-point.com.

e - ಸುದ್ದಿ

ಕೊಂಡಿ ನೀಡುವುದು ಅಪರಾಧವಲ್ಲ

ಅಂತರಜಾಲದಲ್ಲಿ ಇರುವ ಲೇಖನಗಳಲ್ಲಿ ಯಾವುದಕ್ಕೆ ಬೇಕಾದರೂ ಇನ್ನೊಂದು ಜಾಲತಾಣದಿಂದ ಕೊಂಡಿ ನೀಡಬಹುದು. ಇದನ್ನು ಪ್ರತಿಯೊಂದು ಜಾಲತಾಣವೂ ಮಾಡುವುದನ್ನು ಎಲ್ಲರೂ ಗಮನಿಸಿದ್ದೀರಿ. ಅಷ್ಟು ಮಾತ್ರವಲ್ಲ ಈ ಸೌಲಭ್ಯವನ್ನು ಬಳಸಿಯೂ ಇದ್ದೀರಿ. ನಿಮ್ಮ ಜಾಲತಾಣದಿಂದ ಇನ್ನೊಂದು ಜಾಲತಾಣಕ್ಕೆ ಕೊಂಡಿ ನೀಡಿದ್ದೀರಿ. ಆ ಜಾಲತಾಣದಲ್ಲಿ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧ ಏನೇನೋ ಬರೆಯಲಾಗಿದೆ. ಹೀಗಿರುವಾಗ ಆ ವ್ಯಕ್ತಿ ಅಥವಾ ಸಂಸ್ಥೆ ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದೇ? ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ನಿಂದನೆಯ ಲೇಖನವನ್ನು ನೀವು ಬರೆದಿಲ್ಲ. ಆ ಜಾಲತಾಣಕ್ಕೆ ನಿಮ್ಮ ಜಾಲತಾಣದಿಂದ ಕೊಂಡಿ ನೀಡಿದ್ದೀರಿ ಅಷ್ಟೆ. ಹೀಗೆ ಮಾಡುವುದು ಅಪರಾಧವಾಗುವುದಿಲ್ಲ ಎಂದು ಇತ್ತೀಚೆಗೆ ಕೆನಡಾದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ.

e- ಪದ

ಬ್ಲಾಟ್‌ವೇರ್ (bloatware) - ಅಗತ್ಯಕ್ಕಿಂತ ಹೆಚ್ಚು ಗುಣವೈಶಿಷ್ಷ್ಯಗಳನ್ನು ಹೊಂದಿರುವ ಮತ್ತು ಅದರಿಂದಾಗಿ ಅತಿ ಹೆಚ್ಚು ಮೆಮೊರಿ ಹಾಗೂ ಹಾರ್ಡ್‌ಡಿಸ್ಕ್ ಜಾಗವನ್ನು ಆಕ್ರಮಿಸುವ ತಂತ್ರಾಂಶ. ಇತ್ತೀಚೆಗೆ ಗಣಕಗಳಲ್ಲಿ ಅಧಿಕ ಮೆಮೊರಿ ಮತ್ತು ಹಾರ್ಡ್‌ಡಿಸ್ಕ್ ಸಹಜವಾಗಿದೆ. ಅಂತೆಯೇ ಅಗತ್ಯಕ್ಕಿಂತ ಹೆಚ್ಚು ಸವಲತ್ತುಗಳನ್ನು ನೀಡಿ ಹೆಚ್ಚು ಜಾಗವನ್ನು ಆಕ್ರಮಿಸುವ ತಂತ್ರಾಂಶಗಳೂ ತಯಾರಾಗಿವೆ. 

e - ಸಲಹೆ

ಪ್ರ: ನನ್ನ ಜಿಮೈಲ್‌ನಲ್ಲಿ ಜಾಗ ಇಲ್ಲದಾಗಿದೆ. ಏನು ಮಾಡಬೇಕು?
ಉ: ಅನಗತ್ಯ ಇಮೈಲ್‌ಗಳನ್ನು ಅಳಿಸಿ ಹಾಕಿ. ಗಣಕದಲ್ಲಿ ಯಾವುದಾದರೂ ಇಮೈಲ್ ಗ್ರಾಹಕ ತಂತ್ರಾಂಶವನ್ನು (ಉದಾ- ವಿಂಡೋಸ್ ಲೈವ್ ಮೈಲ್, ಮೈಕ್ರೋಸಾಫ್ಟ್ ಔಟ್‌ಲುಕ್, ಥಂಡರ್‌ಬರ್ಡ್, ಇತ್ಯಾದಿ) ಇನ್‌ಸ್ಟಾಲ್ ಮಾಡಿಕೊಂಡು ಜಿಮೈಲ್‌ನಿಂದ ಇಮೈಲ್‌ಗಳನ್ನು ಅದಕ್ಕೆ ಇಳಿಸಿಕೊಳ್ಳಿ.  

ಕಂಪ್ಯೂತರ್ಲೆ

ಬ್ಲಾಗಿಗರ ಹಾಡು

ಎಲ್ಲ ಓದಲಿ ಎಂದು ನಾನು ಬ್ಲಾಗಿಸುವುದಿಲ್ಲ
ಬ್ಲಾಗಿಸುವುದು ಅನಿವಾರ್ಯ ಕರ್ಮ ನನಗೆ
ಓದುವವರಿಹರೆಂದು ನಾ ಬಲ್ಲೆ ಅದರಿಂದ
ಬ್ಲಾಗಿಸುವೆನು ಕೀ ಕುಟ್ಟಿ ಎಂದಿನಂತೆ
ಯಾರು Alt-F4 ಒತ್ತಿದರು ನನಗಿಲ್ಲ ಚಿಂತೆ
-    ಗಣಕಜ್ಞ

ಮಂಗಳವಾರ, ಅಕ್ಟೋಬರ್ 18, 2011

ಗಣಕಿಂಡಿ - ೧೨೬ (ಅಕ್ಟೋಬರ್ ೧೭, ೨೦೧೧)

ಅಂತರಜಾಲಾಡಿ

ಭಾರತದಲ್ಲಿ ಮಾತ್ರ

“ನಿಮ್ಮ ಜೀವಕ್ಕೆ ಬೆಲೆ ಇಲ್ಲದಿರಬಹುದು ಆದರೆ ಪೆಟ್ರೋಲ್ ತುಂಬ ದುಬಾರಿ. ಇಲ್ಲಿ ಧೂಮಪಾನ ಮಾಡಬೇಡಿ” -ಇದು ಪೆಟ್ರೋಲ್ ಬಂಕ್ ಒಂದರ ಮುಂದೆ ಇರುವ ಫಲಕ. ಇನ್ನೊಂದು ಉದಾಹರಣೆ -ಒಬ್ಬಾಕೆ ತನ್ನ ಚಿಕ್ಕ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಆಕೆಯ ಹೆಗಲಲ್ಲಿ ಒಂದು ಬುಟ್ಟಿ ಇದೆ. ಆ ಬುಟ್ಟಿಯಲ್ಲಿ ಆಕೆಯ ಮುದ್ದಿನ ನಾಯಿ ಇದೆ. ಅಂದರೆ ಆಕೆ ನಾಯಿಯನ್ನು ಹೊತ್ತುಕೊಂಡು ಹೋಗುತ್ತಿದ್ದಾಳೆ ಮತ್ತು ಅದೇ ಸಮಯದಲ್ಲಿ ತನ್ನ ಮಗುವನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಇವೆಲ್ಲ ಎಲ್ಲಿ ಎನ್ನುತ್ತೀರಾ? ನಮ್ಮದೇ ಭಾರತ ದೇಶದಲ್ಲಿ ಸ್ವಾಮಿ. ಹೌದು ಇದಕ್ಕೆ ಎಲ್ಲಿದೆ ಪುರಾವೆ ಎನ್ನುತ್ತೀರಾ? ಬನ್ನಿ. onlyinindia.in ಜಾಲತಾಣಕ್ಕೆ ಭೇಟಿ ನೀಡಿ.

ಡೌನ್‌ಲೋಡ್

ವಿದ್ಯುನ್ಮಾನ ನಕ್ಷೆ ತಯಾರಿಸಿ

ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಲಕರಣೆಗಳನ್ನು ತಯಾರಿಸುವಲ್ಲಿ ಅವುಗಳ ವಿನ್ಯಾಸ ನಕ್ಷೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ವಿದ್ಯುನ್ಮಾನ ಯಂತ್ರದ ಒಳಗೆ ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್ ಇರುವುದನ್ನು ಗಮನಿಸಿರಬಹುದು. ಇವುಗಳನ್ನು ತಯಾರಿಸಲು ಅವುಗಳ ವಿನ್ಯಾಸ ನಕ್ಷೆ (ಸರ್ಕ್ಯುಟ್ ಡಯಾಗ್ರಾಮ್) ಬೇಕಾಗುತ್ತದೆ. ಈ ನಕ್ಷೆಯಲ್ಲಿ ಆ ಸಲಕರಣೆಯಲ್ಲಿ ಬಳಸುವ ಎಲ್ಲ ವಿದ್ಯುನ್ಮಾನ ಅಂಗಗಳ ನಕ್ಷೆ ಮತ್ತು ಅವುಗಳನ್ನು ಜೋಡಿಸುವ ರೇಖೆಗಳಿರುತ್ತವೆ. ಉದಾಹರಣೆಗೆ ಟ್ರಾನ್‌ಸಿಸ್ಟರ್, ಡಯೋಡ್, ಕೆಪಾಸಿಟರ್, ಇತ್ಯಾದಿ. ಈ ವಿನ್ಯಾಸ ನಕ್ಷೆ ತಯಾರಿಸುವುದು ಪರಿಣತರಿಂದ ಮಾತ್ರ ಸಾಧ್ಯ. ನೀವು ಇಲೆಕ್ಟ್ರಾನಿಕ್ಸ್ ಇಂಜಿನಿಯರ್ ಆಗಿದ್ದಲ್ಲಿ ನಿಮಗೆ ಈ ನಕ್ಷೆ ತಯಾರಿಸುವುದು ದಿನನಿತ್ಯದ ಕೆಲಸವಾಗಿರುತ್ತದೆ. ಇಂತಹ ನಕ್ಷೆಗಳನ್ನು ಗಣಕ ಬಳಸಿ ತಯಾರಿಸಲು ಹಲವು ದುಬಾರಿ ತಂತ್ರಾಂಶಗಳು ಲಭ್ಯವಿವೆ. ಅಂತೆಯೇ ಒಂದು ಸರಳ ಉಚಿತ ತಂತ್ರಾಂಶವೂ ಲಭ್ಯವಿದೆ. ಅದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - www.circuit-diagram.org.

e - ಸುದ್ದಿ

ಶೌಚಾಲಯ ಹಂಚಿಕೊಳ್ಳಲು ತಂತ್ರಾಂಶ

ಯಾವುದೋ ಒಂದು ನಗರದ ಮಧ್ಯದಲ್ಲಿದ್ದೀರಿ. ಬಾತ್‌ರೂಮ್ ಬಳಸಬೇಕಾಗಿದೆ. ಸ್ವಚ್ಛ ಟಾಯ್‌ಲೆಟ್ ಬೇಕಾಗಿದೆ. ಏನು ಮಾಡುವುದು? ಸುಲಭ್ ಇದೆಯಲ್ಲ ಎನ್ನುತೀರಾ? ಆದರೆ ಸುಲಭ್ ಸ್ವಚ್ಛ ಇರುತ್ತದೆ ಎಂದು ಏನು ಗ್ಯಾರಂಟಿ? ಇಷ್ಟಕ್ಕೂ ಸುಲಭ್ ಇರುವುದು ಭಾರತದಲ್ಲಿ ಮಾತ್ರ. ಅಮೆರಿಕದಲ್ಲಿ? ಹೀಗೆ ಮಾಡಿದರೆ ಹೇಗೆ? ನಿಮ್ಮ ಮನೆಯಲ್ಲಿರುವ ಬಾತ್‌ರೂಮನ್ನೇ ಸ್ವಲ್ಪ ಶುಲ್ಕಕ್ಕೆ ಬಾಡಿಗೆಗೆ ನೀಡಿದರೆ ಹೇಗೆ? ಹೌದು. ಅಂತಹ ಒಂದು ತಂತ್ರಾಂಶ ತಯಾರಾಗಿದೆ. ತಮ್ಮ ಮನೆಯ ಬಾತ್‌ರೂಮನ್ನು ಬಾಡಿಗೆಗೆ ನೀಡಲು ಸಿದ್ಧರಿರುವವರು ಈ ತಂತ್ರಾಂಶ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಬಾತ್‌ರೂಮ್ ಅಗತ್ಯ ಇರುವವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಇದೇ ತಂತ್ರಾಂಶ ಮೂಲಕ ತಾವಿರುವ ಸ್ಥಳಕ್ಕೆ ಹತ್ತಿರದಲ್ಲಿರುವ ಶೌಚಾಲಯ ಯಜಮಾನರನ್ನು ಸಂಪರ್ಕಿಸಿ ಅವರು ಒಪ್ಪಿದರೆ ಹಣ ನೀಡಿ ಬಾತ್‌ರೂಮ್ ಬಳಸಬಹುದು! ಈ ತಂತ್ರಾಂಶದ ಜಾಲತಾಣ - cloo-app.com.

e- ಪದ

ಫರ್ಮ್‌ವೇರ್ (firmware) - ತಂತ್ರಾಂಶ ಅಡಕವಾಗಿರುವ ಯಂತ್ರಾಂಶ. ಗಣಕ ಮತ್ತು ಹಲವು ರೀತಿಯ ಡಿಜಿಟಲ್ ಇಲೆಕ್ಟ್ರಾನಿಕ್ಸ್ ಆಧಾರಿತ ಯಂತ್ರಗಳಲ್ಲಿ ಮೈಕ್ರೋಪ್ರಾಸೆಸರ್ (ಸೂಕ್ಷ್ಮ ಸಂಸ್ಕಾರಕ) ಇರುತ್ತದೆ. ಇಂತಹ ಕೆಲವು ಪ್ರಾಸೆಸರ್‌ಗಳಲ್ಲಿ ಅದರಲ್ಲೇ ಅಡಕವಾಗಿರುವ ಮೆಮೊರಿ ಕೂಡ ಇರುತ್ತದೆ. ಇಂತಹ ಮೆಮೊರಿಗಳಲ್ಲಿ ಆ ಯಂತ್ರದ ಕೆಲವು ಕೆಲಸಗಳನ್ನು ಮಾಡಲು ಅಗತ್ಯ ತಂತ್ರಾಂಶವನ್ನು ಕೂಡ ಸೇರಿಸುತ್ತಾರೆ. ಇದನ್ನೇ ಫರ್ಮ್‌ವೇರ್ ಎನ್ನುತ್ತಾರೆ.

e - ಸಲಹೆ

ಜೋಕರ್ ಗಂಗ ಅವರ ಪ್ರಶ್ನೆ: ಧ್ವನಿ ಇಲ್ಲದ ಆದರೆ ಸಂಗೀತ ಉಪಕರಣಗಳು ಮಾತ್ರ ಇರುವ (ಆರ್ಕೆಸ್ಟ್ರಾದಲ್ಲಿ ಬಳಸುವಂತಹದ್ದು) ಕನ್ನಡದ ಆಡಿಯೋ ಸಿ.ಡಿ.ಗಳು ಎಲ್ಲಿ ಸಿಗುತ್ತವೆ?
ಉ: ಇವುಗಳಿಗೆ ಕರಾಓಕೆ (karaoke) ಸಿ.ಡಿ. ಎನ್ನುತ್ತಾರೆ. ಇಂತಹ ಕನ್ನಡದ ಸಿ.ಡಿ. ಬೇಕಿದ್ದರೆ shopping.totalkannada.com ನೋಡಿ.

ಕಂಪ್ಯೂತರ್ಲೆ

ಕೋಲ್ಯ ಉವಾಚ: ಅವನತ್ರ ಐಪಾಡು ಇವನತ್ರ ಐಪೋಡು, ಇಲ್ದೋನ್ದು ನಾಯಿಪಾಡು.

ಸೋಮವಾರ, ಅಕ್ಟೋಬರ್ 10, 2011

ಗಣಕಿಂಡಿ - ೧೨೫ (ಅಕ್ಟೋಬರ್ ೧೦, ೨೦೧೧)

ಅಂತರಜಾಲಾಡಿ

ನಿರುಪಯುಕ್ತ ಸಂಶೋಧನೆಗಳು

ಜನರಿಗೆ ಅತಿ ಉಪಯುಕ್ತ ಸಂಶೋಧನೆಗಳು ಮತ್ತು ಅವುಗಳಿಗಾಗಿ ಜನರು ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಳ್ಳುವುದು ಗೊತ್ತು ತಾನೆ? ಅಮೆರಿಕದಲ್ಲಿ ಎಲ್ಲ ರೀತಿಯ ಸಂಶೋಧನೆಗಳಿಗೆ ಪೇಟೆಂಟ್ ಪಡೆದಿಟ್ಟುಕೊಳ್ಳುವುದು ಹಲವರಿಗೆ ಹವ್ಯಾಸವಾಗಿದೆ. ಮುಂದೆಂದೋ ಯಾರೋ ಮಾಡಬಹುದಾದ ಸಂಶೋಧನೆಗಳ ಆಲೋಚನೆಗಳಿಗೂ ಪೇಟೆಂಟ್ ಪಡೆದಿಟ್ಟುಕೊಂಡು ಅದರಿಂದ ಮಿಲಿಯಗಟ್ಟಳೆ ಹಣ ಮಾಡಿಕೊಂಡವರೂ ಇದ್ದಾರೆ. ಅದೇನೋ ಸರಿ. ಆದರೆ ಎಲ್ಲ ಪೇಟೆಂಟ್‌ಗಳು ನಿಜವಾಗಿಯೂ ಉಪಯುಕ್ತವೇ? ಅಮೆರಿಕದಲ್ಲಿ ನೋಂದಣಿಯಾಗುವ ಸಾವಿರಾರು ಪೇಟೆಂಟ್‌ಗಳಲ್ಲಿ ಸಂಪೂರ್ಣ ನಿರುಪಯುಕ್ತ ಎನ್ನಿಸುವಂತಹವೂ ಹಲವಾರಿವೆ. ಅಂತಹ ಪೇಟೆಂಟ್‌ಗಳಿಗೆಂದೇ ಇರುವ ಜಾಲತಾಣ www.totallyabsurd.com. ಇಲ್ಲಿರುವವೆಲ್ಲ ಅಮೆರಿಕದಲ್ಲಿ ನಿಜವಾಗಿ ಪಡೆದಿಕೊಂಡಿರುವ ಪೇಟೆಂಟ್‌ಗಳಲ್ಲಿ ನಿರುಪಯುಕ್ತ ಅನ್ನಿಸುವವುಗಳ ಯಾದಿಯೇ ಆಗಿರುತ್ತದೆ. ಒಂದು ಉದಾಹರಣೆ -ನಾಯಿಗೊಂದು ಛತ್ರಿ.

ಡೌನ್‌ಲೋಡ್


ಯುಎಸ್‌ಬಿಗಾಗಿ ತಂತ್ರಾಂಶಗಳು

ಇತ್ತೀಚೆಗೆ ಯುಎಸ್‌ಬಿ ಡ್ರೈವ್‌ಗಳು ತುಂಬ ಜನಪ್ರಿಯವಾಗುತ್ತಿವೆ. ಅಂತೆಯೇ ಯುಎಸ್‌ಬಿಯಿಂದಲೇ ಚಲಾಯಿಸಬಲ್ಲ ತಂತ್ರಾಂಶಗಳೂ ಲಭ್ಯವಾಗುತ್ತಿವೆ. ಇವುಗಳ ಅನುಕೂಲವೇನೆಂದರೆ ಇವುಗಳನ್ನು ಚಲಾಯಿಸಲು ಗಣಕದಲ್ಲಿ ಇನ್‌ಸ್ಟಾಲ್ ಮಾಡಬೇಕಾಗಿಲ್ಲ. ದಿನಕ್ಕೊಂದು ಸೈಬರ್‌ಕೆಫೆಯಲ್ಲಿ ಗಣಕ ಬಳಸುವವರಿಗಂತೂ ಇವು ತುಂಬ ಉಪಯುಕ್ತ. ಉದಾಹರಣೆಗೆ ನೀವು ದೃಷ್ಟಿಶಕ್ತಿ ವಂಚಿತರು ಮತ್ತು ನಿಮಗೆ ಪರದೆಯಲ್ಲಿ ಮೂಡಿಬಂದ ಅಕ್ಷರಗಳನ್ನು ಓದುವ ತಂತ್ರಾಂಶ ಬೇಕಾಗಿರುತ್ತದೆ. ಅದನ್ನು ನೀವು ಭೇಟಿ ನೀಡುವ ಪ್ರತಿಯೊಂದು ಸೈಬರ್‌ಕೆಫೆಯಲ್ಲೂ ಇನ್‌ಸ್ಟಾಲ್ ಮಾಡಲು ಆಗುವುದಿಲ್ಲ. ಯುಎಸ್‌ಬಿಯಿಂದಲೇ ಚಲಾಯಿಸಬಲ್ಲ ಉಚಿತ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡುವ ಜಾಲತಾಣ www.portablefreeware.com.

e - ಸುದ್ದಿ

ಸ್ಟೀವ್ ಜಾಬ್ಸ್ ಅಂತ್ಯಕ್ರಿಯೆಯಲ್ಲಿ ಪ್ರತಿಭಟನೆಯ ಘೋಷಣೆ ಐಫೋನ್ ಮೂಲಕ

ಆಪಲ್ ಕಂಪೆನಿಯ ಸ್ಥಾಪಕ ಮಾತ್ರವಲ್ಲ ತಂತ್ರಜ್ಞಾನ ಕ್ಷೇತ್ರದಲ್ಲಿಯೇ ಅಭೂತಪೂರ್ವವಾದ ಕ್ರಾಂತಿಯನ್ನು ಮಾಡಿದ ಸ್ಟೀವ್ ಜಾಬ್ಸ್ ಇತ್ತೀಚೆಗೆ ನಿಧನರಾದುದು ನಿಮಗೆಲ್ಲ ತಿಳಿದಿರಬಹುದು. ಅವರ ಆಪಲ್ ಕಂಪೆನಿಯ ಒಂದು ಕ್ರಾಂತಿಕಾರಕ ಉತ್ಪಾದನೆ ಐಫೋನ್. ಈಗ ಮುಖ್ಯ ವಿಷಯಕ್ಕೆ ಬರೋಣ. ಅಮೆರಿಕದಲ್ಲಿ ವೆಸ್ಟ್‌ಬೊರೊ ಎಂಬ ಚರ್ಚ್ ಇದೆ. ದೇವರು ಅಮೆರಿಕವನ್ನು ಶಿಕ್ಷಿಸುತ್ತಿದ್ದಾನೆ ಯಾಕೆಂದರೆ ಅಮೆರಿಕವು ಪಾಪವನ್ನು ಮತ್ತು ಪಾಪಿಗಳನ್ನು ಸಹಿಸುತ್ತಿದೆ ಎಂದು ಅವರು ನಂಬಿದವರು. ಇರಾಕ್ ಯುದ್ಧದಲ್ಲಿ ಮಡಿದವರ ಅಂತ್ಯಕ್ರಿಯೆಯಲ್ಲಿ ಪ್ರತಿಭಟಿಸಿ ಇವರು ಪ್ರಖ್ಯಾತಿ ಪಡೆದಿದ್ದರು. ಸ್ಟೀವ್ ಜಾಬ್ಸ್ ಅವರ ಅಂತ್ಯಕ್ರಿಯೆಯಲ್ಲೂ ಪ್ರತಿಭಟಿಸುವುದಾಗಿ ವೆಸ್ಟ್‌ಬೊರೊ ಸದಸ್ಯರು ಹೀಗೆಂದು ಘೋಷಿಸಿದ್ದರು -“ಅವರಲ್ಲಿ ಅದ್ಭುತವಾದ ಪ್ಲಾಟ್‌ಫಾರಂ ಇತ್ತು ಆದರೆ ಸ್ಟೀವ್ ಜಾಬ್ಸ್ ದೇವರನ್ನು ವೈಭವೀಕರಿಸಿರಲಿಲ್ಲ. ಆತ ಪಾಪಿ. ಆದುದರಿಂದ ವೆಸ್ಟ್‌ಬೊರೊ ಅವರ ಅಂತ್ಯಕ್ರಿಯೆಯಲ್ಲಿ ಪ್ರತಿಭಟಿಸುತ್ತದೆ”. ವೆಸ್ಟ್‌ಬೊರೊ ಸದಸ್ಯರು ತಮ್ಮ ಈ ಘೋಷಣೆಯನ್ನು ಮಾಡಿದ್ದು ಟ್ವಿಟ್ಟರ್ ಮೂಲಕ ಐಫೋನ್ ಬಳಸಿ!
 
e- ಪದ

ತಂತ್ರಾಂಶ (software) - ಗಣಕವನ್ನು ನಡೆಸಲು ಬೇಕಾದ ಅತಿ ಮುಖ್ಯವಾದ ಆದೇಶ, ಸೂಚನೆ, ಕ್ರಮವಿಧಿಗಳು, ಇತ್ಯಾದಿ. ಒಂದು ಸಂಗೀತ ಉಪಕರಣವನ್ನು ಯಂತ್ರಾಂಶಕ್ಕೆ (hardware) ಹೋಲಿಸಬಹುದಾದರೆ ಅದರಲ್ಲಿ ನುಡಿಸುವ ಸಂಗೀತವನ್ನು ತಂತ್ರಾಂಶಕ್ಕೆ ಹೋಲಿಸಬಹುದು. ಯಂತ್ರಾಂಶ ಕಣ್ಣಿಗೆ ಕಾಣಿಸುವಂತಹದು. ತಂತ್ರಾಂಶ ಕಣ್ಣಿಗೆ ಕಾಣಿಸಲಾರದ್ದು.

e - ಸಲಹೆ

ಜಿತೇಂದ್ರ ಪಾಟೀಲರ ಪ್ರಶ್ನೆ: ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಬಳಸುವ ಸಮೀಕರಣಗಳನ್ನು (Excel formulas) ತಿಳಿಸುವ ಜಾಲತಾಣ ಇದೆಯೇ?
ಉ: www.excelformula.net ನೋಡಿ.

ಕಂಪ್ಯೂತರ್ಲೆ

ಇನ್ನಷ್ಟು ಗಣಕ (ತ)ಗಾದೆಗಳು:
·    ವೈರಸ್‌ನ್ನು ಅಳಿಸಿಹಾಕು ಅಂದರೆ ಇಡಿ ಹಾರ್ಡ್‌ಡಿಸ್ಕನ್ನೇ ಅಳಿಸಿ ಸ್ವಚ್ಛ ಮಾಡಿದನಂತೆ. 
·    ಮನೆ ಸ್ವಚ್ಛವಾಗಿದೆಯೆಂದರೆ ಗಣಕ ಕೆಟ್ಟು ಹೋಗಿದೆ ಎಂದು ಅರ್ಥ.
·    ಗಣಕದಲ್ಲಿ ಎಷ್ಟು ಸ್ಕ್ರೂ ಇಲ್ಲವಾಗಿದೆಯೇ ಅಷ್ಟು ಸಲ ಅದನ್ನು ಬಿಚ್ಚಲಾಗಿದೆ ಎಂದು ಅರ್ಥ.

ಸೋಮವಾರ, ಅಕ್ಟೋಬರ್ 3, 2011

ಗಣಕಿಂಡಿ - ೧೨೪ (ಅಕ್ಟೋಬರ್ ೦೩, ೨೦೧೧)

ಅಂತರಜಾಲಾಡಿ

ಆಟ ಆಡೋಣ ಬನ್ನಿ

ಆಟ ಆಡುವುದು ಯಾರಿಗೆ ಇಷ್ಟವಿಲ್ಲ? ಗಣಕದಲ್ಲಿ ಆಡಬಲ್ಲ ಆಟಗಳು ಸಾವಿರಾರಿವೆ. ಅವುಗಳಲ್ಲಿ ಬಹುಪಾಲು ತುಂಬ ದೊಡ್ಡ ಗಾತ್ರದಾಗಿರುತ್ತವೆ ಮತ್ತು ಹಣ ನೀಡಿ ಕೊಂಡುಕೊಳ್ಳಬೇಕಾಗಿರುತ್ತವೆ. ಅಂತರಜಾಲದ ಮೂಲಕವೇ ಆಡಬಲ್ಲ ಆಟಗಳ ಜಾಲತಾಣಗಳೂ ಹಲವಾರಿವೆ. ಅಂತಹ ಒಂದು ಜಾಲತಾಣ www.brizy.com. ಇಲ್ಲಿರುವ ಆಟಗಳೆಲ್ಲ ಅಡೋಬಿಯವರ ಫ್ಲಾಶ್ ತಂತ್ರಾಂಶವನ್ನು ಬಳಸುತ್ತವೆ. ಸಾಮಾನ್ಯವಾಗಿ ಎಲ್ಲರ ಗಣಕಗಳಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಫ್ಲಾಶ್ ಇನ್‌ಸ್ಟಾಲ್ ಆಗಿರುತ್ತದೆ. ಈ ಜಾಲತಾಣದಲ್ಲಿರುವ ಆಟಗಳನ್ನು ಹಲವು ವಿಷಯಾಧಾರಿತವಾಗಿ ವಿಂಗಡಿಸಲಾಗಿದೆ.

ಡೌನ್‌ಲೋಡ್

ಆಂದೋಲನ ಲೇಖ

ಭೌತಶಾಸ್ತ್ರದ ಪ್ರಯೋಗಶಾಲೆಗಳಲ್ಲಿ ಅಂದೋಲನ ಲೇಖಿ (Oscilloscope) ಸಾಮಾನ್ಯವಾಗಿ ಕಾಣಸಿಗುವ ಒಂದು ಸಾಧನ. ಇದನ್ನು ಬಳಸಿ ವಿದ್ಯುತ್ ತರಂಗಗಳ ಆವರ್ತಸಂಖ್ಯೆ, ವೋಲ್ಟ್, ಕರೆಂಟ್, ಇತ್ಯಾದಿಗಳನ್ನು ಅಳೆಯಬಹುದು. ಇದು ಬೆಲೆಬಾಳುವ ಸಾಧನ ಮಾತ್ರವಲ್ಲ ಇದನ್ನು ಬಳಸಲು ಪರಿಣತರಿಂದ ಮಾತ್ರ ಸಾಧ್ಯ. ಇದೀಗ ಗಣಕದಲ್ಲೇ ಆಸಿಲೋಸ್ಕೋಪನ್ನು ಅನುಕರಿಸುವ Visual Analyser ಎಂಬ ಉಚಿತ ತಂತ್ರಾಂಶ ಲಭ್ಯವಾಗಿದೆ. ಇದನ್ನು ಬಳಸಿ ಗಣಕದ ಆಡಿಯೋ ಕಾರ್ಡ್, ಮೈಕ್ರೋಫೋನ್ ಮೂಲಕವೇ ಧ್ವನಿ ತರಂಗಗಳನ್ನು ಊಡಿಸಿ ಅವುಗಳನ್ನು ವಿಶ್ಲೇಷಿಸಬಹುದು. ಉದಾಹರಣೆಗೆ ಭೌತಶಾಸ್ತ್ರದಲ್ಲಿ ಅತಿ ಸಾಮಾನ್ಯವಾಗಿ ಮಾಡುವ ಒಂದು ಪ್ರಯೋಗವೆಂದರೆ ಬೇರೆ ಬೇರೆ ಟ್ಯೂನಿಂಗ್ ಫೋರ್ಕ್‌ಗಳನ್ನು ಬಳಸಿ ಬೇರೆ ಬೇರೆ ಆವರ್ತ ಸಂಖ್ಯೆಯ ಧ್ವನಿ ತರಂಗಗಳನ್ನು ಹೊರಡಿಸುವುದು. ಈ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡಿರುವ ಲ್ಯಾಪ್‌ಟಾಪ್‌ನ ಮೈಕ್ರೋಫೋನ್ ಮುಂದೆ ಧ್ವನಿ ಹೊರಡಿಸುತ್ತಿರುವ ಟ್ಯೂನಿಂಗ್ ಫೋರ್ಕ್ ಹಿಡಿದರೆ ಅದು ಯಾವ ಆವರ್ತ ಸಂಖ್ಯೆಯ ಧ್ವನಿಯನ್ನು ಹೊರಡಿಸುತ್ತಿದೆ ಎಂದು ಅದು ಹೇಳುತ್ತದೆ. ಹಾಡುಗಾರರು ತಮ್ಮ ಶ್ರುತಿ ಶುದ್ಧಿಯನ್ನು ವೃದ್ಧಿಗೊಳಿಸಲು ಈ ತಂತ್ರಾಂಶವನ್ನು ಬಳಸಬಹುದು. ಈ ತಂತ್ರಾಂಶ www.sillanumsoft.org ಜಾಲತಾಣದಲ್ಲಿ ಲಭ್ಯ.

e - ಸುದ್ದಿ

ನಿಸ್ತಂತು ಸಂಕೇತ ಮೂಲಕ ನಿಮ್ಮ ಓಡಾಟ ಪತ್ತೆ

ಗಣಕ ಮತ್ತು ಮೊಬೈಲ್ ಫೋನ್‌ಗಳಲ್ಲಿ ಬಳಸುವ ವೈಫೈ (ನಿಸ್ತಂತು) ಸಂಕೇತಗಳ ಶಕ್ತಿ ಮನುಷ್ಯರ ಓಡಾಟದಿಂದ ಏರುಪೇರಾಗುತ್ತದೆ ಎಂಬುದನ್ನು ವಿಜ್ಞಾನಿಯೊಬ್ಬರು ಸಂಶೋಧನೆ ಮಾಡುತ್ತ ಪತ್ತೆಹಚ್ಚಿದರು. ಇದೇನು ಅಂತಹ ಮಹತ್ವದ ಸುದ್ದಿಯಲ್ಲ ಎನ್ನಿಸಬಹುದು. ಆದರೆ ಈಗ ಇನ್ನೊಬ್ಬ ವಿಜ್ಞಾನಿ ಇದೇ ತತ್ತ್ವವನ್ನಾಧರಿಸಿ ಮನೆಯೊಳಗಿರುವ ಮನುಷ್ಯರು ಎಲ್ಲೆಲ್ಲ ಓಡಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬಹುದು ಎಂದು ತಿಳಿಸಿದ್ದಾರೆ. ಅಂದರೆ ಗೂಢಚರ್ಯೆ ಮಾಡುವವರು ಮನೆಯೆ ಹೊರಗೆ ಒಂದು ವೈಫೈ ಜಾಲವನ್ನು ನಿರ್ಮಿಸಿ ಮನೆಯೊಳಗಿನ ಮಂದಿ ಎಲ್ಲೆಲ್ಲಿ ಓಡಾಡುತ್ತಿದ್ದಾರೆ ಎಂದು ಪತ್ತೆಹಚ್ಚಬಹುದು.   
 
e- ಪದ

ಯಂತ್ರಾಂಶ (hardware) - ಗಣಕದಲ್ಲಿ ಕಣ್ಣಿಗೆ ಕಾಣಿಸುವ ಎಲ್ಲ ಯಂತ್ರಭಾಗಗಳು. ಸಾಮಾನ್ಯವಾಗಿ, ಗಣಕದ ಮದರ್‌ಬೋರ್ಡ್, ಸಿಪಿಯು, ಕೀಲಿಮಣೆ, ಮೌಸ್, ಪರದೆ -ಇವೆಲ್ಲ ಯಂತ್ರಾಂಶಗಳು.

e - ಸಲಹೆ

ಇಕಬಾಲ್ ಮುಲ್ಲಾ ಅವರ ಪ್ರಶ್ನೆ: ನಾನು ಖಾಸಗಿ ಕಂಪನಿಯೊಂದರಲ್ಲಿ ಟೈಪಿಸ್ಟ (ಗಣಕ ಯಂತ್ರ) ನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬಿಡುವಿನ ವೇಳೆಯಲ್ಲಿ ಫ್ರೀ ಇದ್ದಾಗ ಗಣಕ ಯಂತ್ರದ ಮೇಲೆ ಬೇರೆ ಕೆಲಸ ಮಾಡಲು ನಿರ್ಧರಿಸಿದ್ದೇನೆ ನನಗೆ ಯಾವುದಾದರೊಂದು ವೆಬ್‌ಸೈಟ್‌ನ ಮಾಹಿತಿ ನೀಡಬೇಕಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
ಉ: www.freelanceindia.com ಜಾಲತಾಣ ನೋಡಿ. 

ಕಂಪ್ಯೂತರ್ಲೆ

ಈ ಜಗತ್ತಿನಲ್ಲಿರುವ ಅತ್ಯಂತ ಸುಂದರ ವ್ಯಕ್ತಿ ಯಾರೆಂದು ತಿಳಿಯಬೇಕೇ? ಹಾಗಿದ್ದರೆ whoisthecutest.com ಜಾಲತಾಣಕ್ಕೆ ಭೇಟಿ ನಿಡಿ.