ಮಂಗಳವಾರ, ನವೆಂಬರ್ 1, 2011

ಗಣಕಿಂಡಿ - ೧೨೮ (ಅಕ್ಟೋಬರ್ ೩೧, ೨೦೧೧)

ಅಂತರಜಾಲಾಡಿ

ಕೆಲಸ ಹುಡುಕುವ ಮುನ್ನ

ಯಾವುದಾದರೂ ಸರಿ, ಒಂದು ಕೆಲಸ ಸಿಕ್ಕಿದರೆ ಸಾಕು ಎನ್ನುವ ಕಾಲ ಈಗಿಲ್ಲ. ತಮ್ಮ ತಮ್ಮ ಆಸಕ್ತಿಗೆ ಸರಿಹೊಂದುವ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆದು. ಅದಕ್ಕೆ ಸರಿಯಾದ ಕಂಪೆನಿ ಹುಡುಕಬೇಕು. ಕಂಪೆನಿ ಸೇರುವ ಮುನ್ನ ಅಥವಾ ಕಂಪೆನಿಗೆ ಅರ್ಜಿ ಗುಜರಾಯಿಸುವ ಮುನ್ನ ಆ ಕಂಪೆನಿ ಬಗ್ಗೆ ಪೂರ್ತಿ ವಿವರ ತಿಳಿದಿದ್ದರೆ ಒಳ್ಳೆಯದು. ಕಂಪೆನಿಯ ಜಾಲತಾಣದಲ್ಲೇನೋ ಕಂಪೆನಿಯ ಬಗ್ಗೆ ವಿವರ ಇರುತ್ತದೆ. ಆದರೆ ಅದರ ಬಗ್ಗೆ ಅಲ್ಲಿ ಕೆಲಸ ಮಾಡಿದವರಿಂದ ಹಿಂಮಾಹಿತಿ (feedback) ಸಿಗುವುದಿಲ್ಲ. ಅಲ್ಲಿ ಕೆಲಸ ಮಾಡಿದವರನ್ನು ಪರಿಚಯ ಮಾಡಿಕೊಂಡು ಅವರಿಂದ ಮಾಹಿತಿ ತಿಳಿದುಕೊಳ್ಳುವುದು ಎಲ್ಲ ಸಂದರ್ಭಗಳಲ್ಲಿ ಅಸಾಧ್ಯ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಇರುವ ಜಾಲತಾಣ www.glassdoor.com. ಈ ಜಾಲತಾಣದಲ್ಲಿ ಕಂಪೆನಿಗಳ ವಿಮರ್ಶೆ ಮಾತ್ರವಲ್ಲ, ಅಲ್ಲಿ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳು, ಸಂಬಳ ಎಷ್ಟಿರಬಹುದು, ಇತ್ಯಾದಿ ಎಲ್ಲ ಮಾಹಿತಿಗಳಿವೆ.

ಡೌನ್‌ಲೋಡ್

ರೂಪಾಯಿ ಚಿಹ್ನೆ

ಭಾರತ ಸರಕಾರವು ನಮ್ಮ ರೂಪಾಯಿಗೆ ಒಂದು ಚಿಹ್ನೆಯನ್ನು ಘೋಷಿಸಿರುವುದು ತಿಳಿದಿರಬಹುದು. ಈ ಚಿಹ್ನೆ ಇತ್ತೀಚೆಗೆ ಬಂದಿರುವುದು. ಗಣಕದಲ್ಲಿ ಕೆಲಸ ಮಾಡುವ ವಿಂಡೋಸ್ ಕಾರ್ಯಾಚರಣೆಯ ವ್ಯವಸ್ಥೆಯ ಎಲ್ಲ ಆವೃತ್ತಿಗಳು ಈ ಚಿಹ್ನೆಯ ಘೋಷಣೆಗೆ ಮೊದಲೇ ಬಂದವುಗಳು. ಅದುದರಿಂದ ಗಣಕದಲ್ಲಿ ಸಹಜವಾಗಿ ರೂಪಾಯಿ ಚಿಹ್ನೆ ಇರುವುದಿಲ್ಲ. ಮೈಕ್ರೋಸಾಫ್ಟ್ ಕಂಪೆನಿ ವಿಂಡೋಸ್ ೭ ಕಾರ್ಯಾಚರಣ ವ್ಯವಸ್ಥೆಗೆ ರೂಪಾಯಿ ಸೇರಿಸಿದೆ. ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯೂ ತಮ್ಮ ಸಕಲಭಾರತಿ ಫಾಂಟ್‌ನಲ್ಲಿ ರೂಪಾಯಿ ಚಿಹ್ನೆ ಸೇರಿಸಿ ಬಿಡುಗಡೆ ಮಾಡಿದೆ. ಈ ಸಕಲಭಾರತಿ ಫಾಂಟ್‌ನಲ್ಲಿ ಕನ್ನಡ ಮತ್ತು ಇತರೆ ಭಾಷೆಯ ಅಕ್ಷರಗಳಿವೆ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳಲು bit.ly/IndRupee ಜಾಲತಾಣಕ್ಕೆ ಭೇಟಿ ನೀಡಿ. 

e - ಸುದ್ದಿ

ಎಲ್ಲವೂ ಸ್ಪರ್ಶಸಂವೇದಿ

ಇತ್ತೀಚೆಗೆ ಬರುತ್ತಿರುವ ಬಹುಪಾಲು ಮೊಬೈಲ್ ಫೋನ್‌ಗಳಲ್ಲಿ ಸ್ಪರ್ಶಸಂವೇದಿ ಪರದೆಗಳಿರುವುದನ್ನು (touchscreen) ಗಮನಿಸಿರಬಹುದು. ಬೆರಳಿನಲ್ಲಿ ಸ್ಪರ್ಶ ಮಾಡುವುದರ ಮೂಲಕ ಕೆಲಸಗಳನ್ನು ಮಾಡಬಹುದು. ಈ ಸ್ಪರ್ಶಸಂವೇದಿ ಪರದೆಗಳು ಮೊಬೈಲ್ ಮಾತ್ರವಲ್ಲ, ಟ್ಯಾಬ್ಲೆಟ್ ಗಣಕಗಳಲ್ಲಿ, ಬ್ಯಾಂಕ್‌ಗಳ ಎಟಿಎಂ ಯಂತ್ರಗಳಲ್ಲಿ, ಹೀಗೆ ಹಲವು ಕಡೆ ಬಳಕೆ ಆಗುತ್ತಿದೆ. ಇಂತಹ ಪರದೆಗಳು ವಿಶಿಷ್ಟ ವಸ್ತುವಿನಿಂದ ಮಾಡಿದವು ಆಗಿರುತ್ತವೆ. ಇತ್ತೀಚೆಗೆ ಮೈಕ್ರೋಸಾಫ್ಟ್ ಸಂಶೋಧನಾ ಪ್ರಯೋಗಶಾಲೆಯಿಂದ ಒಂದು ಸ್ವಾರಸ್ಯಕರ ಸಂಶೋಧನೆಯ ವರದಿಯಾಗಿದೆ. ಅವರು ಯಾವುದೇ ವಸ್ತುವನ್ನೂ ಸ್ಪರ್ಶಸಂವೇದಿಯಾಗಿ ಮಾಡುವ ತಂತ್ರಜ್ಞಾನವನ್ನು ಆವಿಷ್ಕರಿಸಿದ್ದಾರೆ. ಅದು ನಿಮ್ಮ ಅಂಗೈ ಕೂಡ ಆಗಿರಬಹುದು. ಇದಕ್ಕಾಗಿ ಲೇಸರ್ ಮತ್ತು ಕ್ಯಾಮರಾ ಬಳಸಿದ್ದಾರೆ. ಮುಂದೊಂದು ದಿನ ಮಾರುಕಟ್ಟೆಗೆ ಬರುವ ಫೋನ್ ಮೇಜಿಗೆ ಕೀಲಿಮಣೆಯನ್ನು ಪ್ರೊಜೆಕ್ಟ್ ಮಾಡುತ್ತದೆ ಮತ್ತು ನೀವು ಅದರ ಮೇಲೆ ಕೈಯಾಡಿಸಿದರೆ ಸಾಕು!

e- ಪದ

ದ್ವಿಮಾನ (binary) - ಎರಡೇ ಅಂಕೆಗಳಿರುವ ಸಂಖ್ಯಾಪದ್ಧತಿ. ನಾವು ಸಾಮಾನ್ಯವಾಗಿ ಬಳಸುವ ಎಣಿಕೆಯ ಸಂಖ್ಯಾಪದ್ಧತಿಯಲ್ಲಿ ೦ ಯಿಂದ ೯ ರ ತನಕ ಒಟ್ಟು ಹತ್ತು ಅಂಕೆಗಳಿವೆ. ಇದನ್ನು ದಶಮಾನ ಪದ್ಧತಿ ಎನ್ನುತ್ತಾರೆ. ದ್ವಿಮಾನ ಪದ್ಧತಿಯಲ್ಲಿ ೦ ಮತ್ತು ೧ -ಎರಡೇ ಅಂಕೆಗಳಿರುತ್ತವೆ. ಗಣಕಗಳ ಒಳಗೆ ಬಳಕೆಯಾಗುವುದು ಈ ಸಂಖ್ಯಾಪದ್ಧತಿಯಾಗಿದೆ.   

e - ಸಲಹೆ

ಪ್ರ: ಕರ್ನಾಟಕ ಚುನಾವಣಾ ಆಯೋಗದ ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಸೇರಿಸಬೇಕಾಗಿದೆ. ಅದಕ್ಕಾಗಿ ಯಾವುದಾದರು ಜಾಲತಾಣ ಇದೆಯೇ?   
ಉ: ಇದೆ. ನೋಡಿ - voterreg.kar.nic.in

ಕಂಪ್ಯೂತರ್ಲೆ

ಕೋಲ್ಯ ತನಗೆ ಲ್ಯಾಪ್‌ಟಾಪ್ ಮಾರಿದ ಕಂಪೆನಿಗೆ ಫೋನ್ ಮಾಡಿ ಹೇಳಿದ “ನನ್ನ ಹೆಂಡತಿ ಇಂಟರ್‌ನೆಟ್ ಮೂಲಕ ವ್ಯಾಪಾರ ಮಾಡುತ್ತ ಅದು ಕ್ರೆಡಿಟ್ ಕಾರ್ಡ್ ಕೇಳಿದಾಗ ನನ್ನ ಕ್ರೆಡಿಟ್ ಕಾರ್ಡನ್ನು ಲ್ಯಾಪ್‌ಟಾಪ್‌ನ ಕಾರ್ಡ್ ರೀಡರ್ ಒಳಗೆ ತೂರಿಸಿದ್ದಾಳೆ. ಅದನ್ನು ಈಗ ಹೊರಗೆ ತೆಗೆಯುವುದು ಹೇಗೆ?”   

3 ಕಾಮೆಂಟ್‌ಗಳು:

  1. ಗಣಕಿಂಡಿ ಸೊಗಸಾಗಿದೆ. ನಾನು ಇದರ ಫೀಡನ್ನುನೊಂದಾ ಯಿಸಿ ಕೊಂಡಿದ್ದೇನೆ .

    ನನ್ನ ಪ್ರಶ್ನೆ , ಸ್ಪರ್ಶ ಸಂವೇದಿ ಪರಧೆ ಎಂಬುದು ಬಳಕೆಯಲ್ಲಿ ಕ್ಲಿಷ್ಟಕರ ಅಂದುಕೊಳ್ಳುತ್ತೇನೆ . ಅದರ ಬದಲು , ಮುಟ್ಟುಪರಧೆ(ಮುಟ್ಟುವುದು + ಪರಧೆ) ಅಥವಾ ತಟ್ಟುಪರಧೆ (ತಟ್ಟುವುದು + ಪರಧೆ ) ಎಂದು ಬಳಸ ಬಹುದಲ್ಲವೇ? ನಿಮ್ಮಂಥವರಿಂದ ಬಳಸಲರ್ಹವಾದ ಹೊಸ ಕನ್ನಡಪದಗಳು ಬರಬೇಕೆನ್ನುವುದು ನನ್ನ ಅನಿಸಿಕೆ. ನೀವ್ ಏನು ಹೇಳ್ತೀರಿ ?

    ಧನ್ಯವಾದ
    ಶ್ರೀನಿವಾಸ

    ಪ್ರತ್ಯುತ್ತರಅಳಿಸಿ
  2. @Srinivasa Mahendrakar - ಧನ್ಯವಾದಗಳು. ಮುಟ್ಟುಪರದೆ ಅಥವಾ ತಟ್ಟುಪರದೆ ಅಡ್ಡಿಯಿಲ್ಲ. ಸ್ಪರ್ಶಸಂವೇದಿಪರದೆ ಎಂಬುದು ಅಸಂದಿಗ್ಧವಾಗಿ ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದನ್ನು ಸೂಚಿಸುತ್ತದೆ. ವಿಜ್ಞಾನದಲ್ಲಿ ಅಸಂದಿಗ್ಧ (unambiguous) ಬಹಳ ಮುಖ್ಯವಾಗುತ್ತದೆ. ಆದುದರಿಂದ ಅದನ್ನು ಬಳಸಿದ್ದೇನೆ. ಇದು ಬಳಸಲನರ್ಹವಾದ ಪದ ಎಂದರೆ ಟೀಕೆ ಸ್ವಲ್ಪ ತೀಕ್ಷ್ಣವಾಯಿತು ಎನ್ನಬಹುದೇನೋ?

    ಪ್ರತ್ಯುತ್ತರಅಳಿಸಿ