ಮಂಗಳವಾರ, ನವೆಂಬರ್ 8, 2011

ಗಣಕಿಂಡಿ - ೧೨೯ (ನವಂಬರ್ ೦೭, ೨೦೧೧)

ಅಂತರಜಾಲಾಡಿ

ಕನ್ನಡದಲ್ಲಿ ಕಂಪ್ಯೂಟರ್

ಮನೆಮನೆಗಳಲ್ಲಿ ಗಣಕ ಸ್ಥಾಪನೆಯಾಗಿರುವ ಈ ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಗಣಕ ಬಳಸುವ ಬಗ್ಗೆ ಮಾಹಿತಿ ಎಷ್ಟು ಲಭ್ಯವಿದೆ? ಉತ್ತರ ಅಷ್ಟೇನೂ ಆಶಾದಾಯಕವಾಗಿಲ್ಲ. ಕೆಲವೇ ಕೆಲವು ಮಂದಿ ಕನ್ನಡ ಭಾಷೆಯಲ್ಲಿ ಮಾಹಿತಿ ತಂತ್ರಜ್ಞಾನ (ಗಣಕ, ಅಂತರಜಾಲ, ಮೊಬೈಲ್, ಇತ್ಯಾದಿ) ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಅಂತಹ ಒಂದು ಜಾಲತಾಣ www.compuinkannada.co.cc. ಈ ಜಾಲತಾಣದಲ್ಲಿ ಗಣಕ ಎಂದರೇನು, ಅದನ್ನು ಬಳಸುವುದು ಹೇಗೆ, ಕೆಲವು ಉಪಯುಕ್ತ ಸಲಹೆ ಸೂಚನೆಗಳು ಇವೆ. ಹಾಗೆಯೇ ಕೆಲವು ಉಚಿತ ತಂತ್ರಾಂಶಗಳೂ ಇವೆ. ಮಾಹಿತಿ ತಂತ್ರಜ್ಞಾನ ಎಷ್ಟು ಅಗಾಧವಾಗಿ ಬೆಳೆದಿದೆಯೆಂದರೆ ಅದರ ಬಗ್ಗೆ ಸಮಗ್ರ ಮಾಹಿತಿ ನೀಡಲು ಇಂತಹ ಸಾವಿರಾರು ಜಾಲತಾಣಗಳು ಬೇಕಾಗಿವೆ.

ಡೌನ್‌ಲೋಡ್

ಪದ

ಗಣಕದಲ್ಲಿ ಬೆರಳಚ್ಚು ಮಾಡಿ ಆ ಮಾಹಿತಿಯನ್ನು ಉಳಿಸುವುದು, ಸ್ವಲ್ಪ ಮಟ್ಟಿನ ವಿನ್ಯಾಸ ಮಾಡುವುದು (ದಪ್ಪ, ಅಡಿಗೆರೆ, ಓರೆ, ಇತ್ಯಾದಿ), ಇಂತಹ ಎಲ್ಲ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ತಂತ್ರಾಂಶಕ್ಕೆ ಪದಸಂಸ್ಕಾರಕ (wordprocessor) ಎಂದು ಹೆಸರು. ಇಂತಹ ತಂತ್ರಾಂಶಗಳು ಹಲವಾರಿವೆ. ಕನ್ನಡದಲ್ಲಿ ಪದಸಂಸ್ಕರಣೆ ಮಾಡಲು ಅನುವು ಮಾಡಿಕೊಡುವ ತಂತ್ರಾಂಶಗಳೂ ಹಲವಾರಿವೆ. ಇಂತಹ ಒಂದು ತಂತ್ರಾಂಶ “ಪದ”. ಇದು ದೊರೆಯುವ ಜಾಲತಾಣ www.pada.co.in. ಇದು ವಿಂಡೋಸ್ ಮಾತ್ರವಲ್ಲ ಲಿನಕ್ಸ್‌ನಲ್ಲೂ ಕೆಲಸ ಮಾಡುತ್ತದೆ. ಒಂದು ಬಹುಮುಖ್ಯ ಸಂಗತಿಯೆಂದರೆ ಇದು ಯುನಿಕೋಡ್‌ನಲ್ಲಿ ಕೆಲಸ ಮಾಡುತ್ತದೆ. ಇದನ್ನು ಕೇವಲ ಕೀಲಿಮಣೆಯ ತಂತ್ರಾಂಶವಾಗಿಯೂ ಬಳಸಬಹುದು. ಅಂದರೆ ಇದನ್ನು ಚಾಲನೆಯಲ್ಲಿಟ್ಟುಕೊಂಡು ಮೈಕ್ರೋಸಾಫ್ಟ್ ವರ್ಡ್‌ನಂತಹ ತಂತ್ರಾಂಶಗಳಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಬಹುದು. ಇದರಲ್ಲಿ ನೀಡಿರುವ ಇನ್ನೊಂಡದು ಸವಲತ್ತೆಂದರೆ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳ ನಡುವೆ ಲಿಪ್ಯಂತರ ಮಾಡುವುದು. ಈ ತಂತ್ರಾಂಶ ಸದ್ಯಕ್ಕೆ ವಿಂಡೋಸ್‌ನ ೩೨ ಬಿಟ್ ಆವೃತ್ತಿಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ.

e - ಸುದ್ದಿ

ಅಪ್ಪ ಮಗಳಿಗೆ ಹೊಡೆದರೆ?

೧೬ ವರ್ಷದೊಳಗಿನ ಮಗಳಿಗೆ ಅಪ್ಪ ಹೊಡೆಯುವುದು, ಅದೂ ತಪ್ಪು ಮಾಡಿದಾಗ, ಅಂತಹ ಅಪರಾಧವಲ್ಲ ಎಂದು ನೀವೆಲ್ಲ ಹೇಳಬಹುದು. ಹಾಗೆಂದು ಅಮೆರಿಕಾದ ಒಬ್ಬ ನ್ಯಾಯಾಧೀಶರೂ ಹೇಳಿಕೊಳ್ಳಬಹುದು. ಆದರೆ ಇಲ್ಲಿ ಹೊಡೆದಿದ್ದು ಒಬ್ಬ ನ್ಯಾಯಾಧೀಶರೇ. ಮಗಳು ಅಂತರಜಾಲದಿಂದ ಕೃತಿಚೌರ್ಯ ಮಾಡಿ ಸಂಗೀತ, ಚಲನಚಿತ್ರಗಳನ್ನು ಡೌನ್‌ಲೋಡ್ ಮಾಡಿದ್ದಕ್ಕೆ ಅಪ್ಪ ವಿಧಿಸಿದ ಶಿಕ್ಷೆ ಎಂದರೆ ಬೆಲ್ಟ್ ಮೂಲಕ ಹಲವು ಬಾರಿ ಹೊಡೆತ. ಇದು ನಡೆದುದು ಏಳು ವರ್ಷಗಳ ಹಿಂದೆ. ಈಗ ಆ ಹುಡುಗಿಗೆ ೨೩ ವರ್ಷ ಪ್ರಾಯ. ಆಕೆ ಅಕಸ್ಮಾತ್ ಆ ಪ್ರಕರಣವನ್ನು ವೀಡಿಯೋ ಮಾಡಿಟ್ಟುಕೊಂಡಿದ್ದಳು. ಈಗ ಆಕೆಯ ಅಪ್ಪ ಮತ್ತೊಮ್ಮೆ ನ್ಯಾಯಾಧೀಶರಾಗಲು ಚುನಾವಣೆಗೆ ನಿಂತಿದ್ದಾರೆ. ಮಗಳು ತನಗೆ ಅಪ್ಪ ಹೊಡೆಯುತ್ತಿರುವ ವೀಡಿಯೋವನ್ನು ಅಂತರಜಾಲದಲ್ಲಿ ಹಾಕಿದ್ದಾಳೆ. ಇಂತಹ ಕ್ರೂರಿ ಅಪ್ಪನನ್ನು ಮತ್ತೊಮ್ಮೆ ನ್ಯಾಯಾಧೀಶರನ್ನಾಗಿ ಚುನಾಯಿಸಬೇಡಿ ಎಂದು ಜನರನ್ನು ಕೇಳಿಕೊಳ್ಳುತ್ತಿದ್ದಾಳೆ.

e- ಪದ


ಕಚಡಾತಂತ್ರಾಂಶ (crapware) - ತನ್ನ ಗುಣಮಟ್ಟಕ್ಕಿಂತಲೂ ಅತಿಹೆಚ್ಚು ಗಾತ್ರಕ್ಕೆ (ಕು)ಖ್ಯಾತವಾದ ತಂತ್ರಾಂಶ. ಸಾಮಾನ್ಯವಾಗಿ ಗಣಕ ಕೊಳ್ಳುವಾಗ ಹೆಚ್ಚು ಬಿಲ್ ಮಾಡಲಿಕ್ಕೋಸ್ಕರ ಹಲವಾರು ಅನಗತ್ಯ ಹಾಗೂ ತುಂಬ ಸ್ಥಳವನ್ನು ಮತ್ತು ಮೆಮೊರಿಯನ್ನು ಆಕ್ರಮಿಸಿಕೊಳ್ಳುವ ತಂತ್ರಾಂಶಗಳನ್ನು ಗಣಕದಲ್ಲಿ ಸೇರಿಸುವ ಪರಿಪಾಠ ಕೆಲವರಿಗಿದೆ. ಇವುಗಳನ್ನೆಲ್ಲ ಕಚಡಾತಂತ್ರಾಂಶಗಳ ಪಟ್ಟಿಗೆ ಸೇರಿಸಬಹುದು.  

e - ಸಲಹೆ

ಯೋಗೇಶರ ಪ್ರಶ್ನೆ: ನನಗೆ ಪ್ರಕಾಶಕ ತಂತ್ರಾಂಶ ಬೇಕು. ಎಲ್ಲಿ ಸಿಗುತ್ತದೆ?
ಉ: ಅದು ತುಂಬ ಹಳೆಯ ತಂತ್ರಾಂಶ. ಈಗ ಅದು ಲಭ್ಯವಿಲ್ಲ. ಅಂತರಜಾಲದಲ್ಲಿ ಕೆಲವು ಜಾಲತಾಣಗಳಲ್ಲಿ ಸಿಗಬಹುದು. ಆದರೆ ಅದು ಅಧಿಕೃತವಲ್ಲ. ಅಷ್ಟೆಲ್ಲ ಕಸರತ್ತು ಮಾಡಿ ಅದು ನಿಮಗೆ ದೊರೆತರೂ ಈಗಿನ ವಿಂಡೋಸ್ ಆವೃತ್ತಿಗಳಲ್ಲಿ ಅದು ಕೆಲಸ ಮಾಡುವುದು ಅನುಮಾನ.

ಕಂಪ್ಯೂತರ್ಲೆ

ಕೋಲ್ಯ ಕಚೇರಿಗೆ ಹೋದಾಗ ಆತನ ಬಾಸ್ ಗುರ್ರಾಯಿಸಿದ “ಯಾಕೆ ಆಫೀಸಿಗೆ ಬರುತ್ತಿದ್ದೀಯಾ? ನಿನಗೆ ಇಮೈಲ್ ಓದುವ ಅಭ್ಯಾಸ ಇಲ್ಲವಾ? ನಾನು ನಿನ್ನನ್ನು ಕೆಲಸದಿಂದ ತೆಗೆದು ಹಾಕಿದ್ದೇನೆ ಎಂದು ಮೂರು ವಾರಗಳ ಹಿಂದೆಯೇ ನಿನಗೆ ಇಮೈಲ್ ಮಾಡಿದ್ದೆನಲ್ಲಾ?”   

2 ಕಾಮೆಂಟ್‌ಗಳು:

  1. >> ವಿಂಡೋಸ್ ಮಾತ್ರವಲ್ಲ ಲಿನಕ್ಸ್‌ನಲ್ಲೂ ಕೆಲಸ ಮಾಡುತ್ತದೆ
    >> ಈ ತಂತ್ರಾಂಶ ಸದ್ಯಕ್ಕೆ ವಿಂಡೋಸ್‌ನ ೩೨ ಬಿಟ್ ಆವೃತ್ತಿಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ

    Confused!

    ಪ್ರತ್ಯುತ್ತರಅಳಿಸಿ
  2. ೧. ನನ್ನಲ್ಲಿ ಲಿನಕ್ಸ್ ಇಲ್ಲದ ಕಾರಣ ನಾನು ಇದನ್ನು ಲಿನಕ್ಸ್‌ನಲ್ಲಿ ಪ್ರಯತ್ನಿಸಿ ನೋಡಲಿಲ್ಲ.
    ೨. ನಾನು ಬಳಸುತ್ತಿರುವುದು ವಿಂಡೋಸ್೭, ೬೪ ಬಿಟ್ ಆವೃತ್ತಿ. ಅದರಲ್ಲಿ ಇದು ಕೆಲಸ ಮಾಡಲಿಲ್ಲ. ೩೨ ಬಿಟ್ ವಿಂಡೋಸ್‌ಗಳಲ್ಲಿ (ವಿಂಡೋಸ್ ಎಕ್ಸ್‌ಪಿ, ವಿಸ್ತ, ೭) ಇದು ಕೆಲಸ ಮಾಡುತ್ತದೆ.

    ಪ್ರತ್ಯುತ್ತರಅಳಿಸಿ