ಸೋಮವಾರ, ನವೆಂಬರ್ 21, 2011

ಗಣಕಿಂಡಿ - ೧೩೧ (ನವಂಬರ್ ೨೧, ೨೦೧೧)

ಅಂತರಜಾಲಾಡಿ

ಉಚಿತ ಗಣಿತ

ಗಣಿತ ಎಂದರೆ ಕಬ್ಬಿಣದ ಕಡಲೆ ಎನ್ನುವವರು ಬಹುಮಂದಿ. ಗಣಿತ ಎಂದರೆ ಸುಲಲಿತ ಎನ್ನುವರೂ ಇದ್ದಾರೆ. ಗಣಿತವನ್ನು ಕಲಿಸಲು ನೂರಾರು ಜಾಲತಾಣಗಳಿವೆ. ಹೆಚ್ಚಿನವು ಇಂಗ್ಲಿಶಿನಲ್ಲಿವೆ. ಕನ್ನಡದಲ್ಲಿ? ಅದೂ ಇದೆ. ಹೌದು ಕನ್ನಡ ಭಾಷೆಯಲ್ಲಿ ಗಣಿತವನ್ನು ಹೇಳಿಕೊಡುವ ಜಾಲತಾಣ www.freeganita.com. ಇದು ಸಂಪೂರ್ಣ ಉಚಿತ. ಪ್ರೌಢಶಾಲೆಯ ಪಠ್ಯಪುಸ್ತಕದಲ್ಲಿರುವ ಕೆಲವು ಸಮಸ್ಯೆಗಳು, ಪರಿಹಾರಗಳು, ಇತರೆ ವಿಷಯಗಳು ಇಲ್ಲಿವೆ. ಜೊತೆಗೆ ಪಠ್ಯದಲ್ಲಿಲ್ಲದ ಕೆಲವು ವಿಷಯಗಳೂ ಇವೆ. ವಿದ್ಯಾರ್ಥಿಗಳಿಗೂ ಅಧ್ಯಾಪಕರುಗಳಿಗೂ ಉಪಯುಕ್ತ ಜಾಲತಾಣ. ಕೊಂಡುಕೊಳ್ಳಲು ಡಿವಿಡಿಯೂ ಲಭ್ಯವಿದೆ.

ಡೌನ್‌ಲೋಡ್

ಟಚ್‌ಪ್ಯಾಡ್ ನಿರ್ಬಂಧಿಸಿ

ಲ್ಯಾಪ್‌ಟಾಪ್ ಗಣಕಗಳಲ್ಲಿರುವ ಟಚ್‌ಪ್ಯಾಡ್ ತುಂಬ ಉಪಯುಕ್ತ ಸಾಧನ. ಇದನ್ನು ಮೌಸ್ ರೀತಿಯಲ್ಲಿ ಬಳಸಬಹುದು ಮಾತ್ರವಲ್ಲ ಬಹುಪಾಲು ಸಮಯ ಹಾಗೆಯೇ ಬಳಸಲಾಗುತ್ತದೆ. ಇದರ ಮೇಲೆ ಬೆರಳು ಅಥವಾ ಅಂಗೈ ಇಟ್ಟರೆ ಅದು ಅದನ್ನು ಅರ್ಥೈಸಿಕೊಂಡು ಕೆಲಸ ಮಾಡುತ್ತದೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರ್ಸರ್ ಅನ್ನು ತೆಗೆದುಕೊಂಡು ಹೋಗಲು ಇದನ್ನು ಬಳಸಬಹುದು. ಆದರೆ ಬೆರಳಚ್ಚು ಮಾಡುತ್ತಿರುವಾಗ ಕೈ ಅಥವಾ ಬೆರಳು ಇದಕ್ಕೆ ತಗುಲಿದರೆ ಕರ್ಸರ್ ಇನ್ನೆಲ್ಲಿಗೋ ಧುಮುಕಿ ತೊಂದರೆಯಾಗುತ್ತದೆ. ಪ್ರತ್ಯೇಕ ಮೌಸ್ ಇದ್ದರಂತೂ ಈ ಟಚ್‌ಪ್ಯಾಡ್‌ನ ಅಗತ್ಯವೇ ಇಲ್ಲ. ಈ ಟಚ್‌ಪ್ಯಾಡ್ ಅನ್ನು ತಾತ್ಕಲಿಕವಾಗಿ ನಿರ್ಬಂಧಿಸಲು ಅನುವು ಮಾಡಿಕೊಡುವ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ touchpad-blocker.com.

e - ಸುದ್ದಿ

ಬ್ಲಾಗಿಸಿದ್ದಕ್ಕೆ ಹತ್ಯೆ

ಮೆಕ್ಸಿಕೊದಲ್ಲಿ ಮಾದಕ ವಸ್ತುಗಳ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ. ಅದನ್ನು ಅವಲಂಬಿಸಿ ರಹಸ್ಯ ತಂಡಗಳು ಕೆಲಸ ಮಾಡುತ್ತಿವೆ. ಅವು ತುಂಬ ಅಪಾಯಕಾರಿ. ಮನುಷ್ಯರ ಜೀವದ ಜೊತೆ ಚೆಲ್ಲಾಡುವುದು ಅವರಿಗೆ ಅತಿ ಸಹಜ. ಇಂತಹ ತಂಡಗಳನ್ನು ವಿರೋಧಿಸಿ ಕೆಲಸ ಮಾಡುವ ಸ್ವಸಹಾಯ ಸಂಸ್ಥೆ, ವ್ಯಕ್ತಿಗಳೂ ಇದ್ದಾರೆ. ಅಂತಹ ಕೆಲವರು ಝೀಟ ಹೆಸರಿನ ತಂಡದ ಚಟುವಟಿಕೆಗಳನ್ನು ವರದಿ ಮಾಡಲೆಂದೇ ಒಂದು ಬ್ಲಾಗ್ ತಯಾರಿಸಿದ್ದರು. ಅದರಲ್ಲಿ ಆಗಾಗ ಸುದ್ದಿಗಳನ್ನು ನೀಡುತ್ತಿದ್ದರು. ಎಲ್ಲೆಲ್ಲಿ ಈ ತಂಡವು ಕೆಲಸ ಮಾಡುತ್ತಿದೆ, ಅದರ ಚಟುವಟಿಕೆಗಳೇನು, ಅದು ಎಷ್ಟು ಸಮಾಜ ವಿರೋಧಿ, ಎಂದೆಲ್ಲ ಬ್ಲಾಗ್ ಬರೆಯುತ್ತಿದ್ದರು. ಈ ರೀತಿ ಬ್ಲಾಗಿಸುತ್ತಿದ್ದ ನಾಲ್ಕು ಮಂದಿಯನ್ನು ಸಪ್ಟೆಂಬರ್ ತಿಂಗಳಿನಿಂದ ಕಳೆದ ವಾರದ ತನಕದ ಸಮಯದಲ್ಲಿ ಕೊಲ್ಲಲಾಗಿದೆ. ಪತ್ರಿಕೆಗಳಲ್ಲಿ ಗೂಂಡಾಗಳ ವಿರುದ್ಧ ಬರೆದು ಜೀವ ಕಳಕೊಂಡವರು ಹಲವರಿದ್ದಾರೆ. ಈಗ ಬ್ಲಾಗ್ ಬರೆದು ಜೀವ ಕಳಕೊಂಡವರ ಕಾಲ.

e- ಪದ

ಕೀಲಿ ಲೆಕ್ಕಿಗ (keylogger) - ಗಣಕದ ಕೀಲಿಮಣೆಯಲ್ಲಿ ಯಾವಯಾವ ಕೀಲಿಗಳನ್ನು ಒತ್ತಲಾಗುತ್ತಿದೆ ಎಂದು ದಾಖಲಿಸಿಟ್ಟುಕೊಳ್ಳುವ ತಂತ್ರಾಂಶ. ಸಾಮಾನ್ಯವಾಗಿ ಇಂತಹ ತಂತ್ರಾಂಶಗಳನ್ನು ಕಂಪೆನಿಗಳಲ್ಲಿ ತಮ್ಮ ಉದ್ಯೋಗಿಗಳು ಗಣಕದಲ್ಲಿ ಏನೇನು  ಮಾಡುತ್ತಿದ್ದಾರೆ ಎಂದು ಗೂಢಚರ್ಯೆ ನಡೆಸಲು ಬಳಸುತ್ತಾರೆ. ಇಂತಹ ತಂತ್ರಾಂಶಗಳನ್ನೊಳಗೊಂಡ ಗೂಢಚರ್ಯೆಯ ತಂತ್ರಾಂಶಗಳು ತುಂಬ ಅಪಾಯಕಾರಿ. ಅವು ಕೀಲಿಮಣೆಯಲ್ಲಿ ಒತ್ತಿದ ಎಲ್ಲ ಕೀಲಿಗಳನ್ನು ಅಂದರೆ ರಹಸ್ಯಪದ (ಪಾಸ್‌ವರ್ಡ್), ಬ್ಯಾಂಕಿಂಗ್ ಸಂಬಂಧಪಟ್ಟ ಎಲ್ಲ ಮಾಹಿತಿ, ಇತ್ಯಾದಿಗಳನ್ನು ಇನ್ಯಾರಿಗೋ ಇಮೈಲ್ ಮೂಲಕ ಕಳುಹಿಸುತ್ತವೆ. ಆದುದರಿಂದ ಉತ್ತಮ ವೈರಸ್ ನಿರೋಧಕ ತಂತ್ರಾಂಶವನ್ನು ಬಳಸಿ ನಿಮ್ಮ ಗಣಕದಲ್ಲಿ ಇಂತಹ ತಂತ್ರಾಂಶಗಳು ಇಲ್ಲ ಎಂದು ಆಗಾಗ ಖಾತರಿಸಿಕೊಳ್ಳುವುದು ಅತೀ ಅಗತ್ಯ.

e - ಸಲಹೆ

ಪ್ರ: ನನಗೆ ಅಟೋಕ್ಯಾಡ್ (AutoCAD) ಪೂರ್ತಿ ಆವೃತ್ತಿ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಎಲ್ಲಿ ಸಿಗುತ್ತದೆ?
ಉ: ಅದು ಉಚಿತ ತಂತ್ರಾಂಶ ಅಲ್ಲ. ಅದನ್ನು ಹಣ ನೀಡಿ ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಕೋಲ್ಯನ ಗಣಕಕ್ಕೆ ಏನೋ ತೊಂದರೆ ಆಗಿತ್ತು. ಪರಿಣತನಿಂದ ಪರೀಕ್ಷಿಸಿದ. ಆತ ಹೇಳಿದ - "ನಿನ್ನ ಕಂಪ್ಯೂಟರಿನಲ್ಲಿ worm ಇದೆ". ಅಕ್ಕಿಯಲ್ಲಿ ಹುಳವಾದಾಗ ಅಥವಾ ಹುಳ ಆಗದೆ ಇರಲಿ ಎಂದು ಅಕ್ಕಿ ಡಬ್ಬದೊಳಗೆ ಬೇವಿನ ಎಲೆಗಳನ್ನು ಹಾಕುವುದನ್ನು ತಿಳಿದಿದ್ದ ಕೋಲ್ಯ, ತನ್ನ ಗಣಕದೊಳಗೆ ಒಂದಿಷ್ಟು ಬೇವಿನ ಎಲೆಗಳನ್ನು ತುಂಬಿಸಿದ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ