ಸೋಮವಾರ, ಜೂನ್ 27, 2011

ಗಣಕಿಂಡಿ - ೧೧೦ (ಜೂನ್ ೨೭, ೨೦೧೧)

ಅಂತರಜಾಲಾಡಿ

ಡಿಜಿಟಲ್ ಫೋಟೋಗ್ರಫಿ

ಡಿಜಿಟಲ್ ಕ್ಯಾಮರಾಗಳು ಈಗೀಗ ಸರ್ವೇಸಾಮಾನ್ಯವಾಗಿವೆ. ಹಲವು ಗುಣವೈಶಿಷ್ಟ್ಯಗಳ ಕ್ಯಾಮರಾಗಳು ಎಲ್ಲರ ಕೈಗೆಟುಕುತ್ತಿವೆ. ಆದರೆ ಈ ಕ್ಯಾಮರಾಗಳನ್ನು ಬಳಸುವುದು ಹೇಗೆ? ಸುಮ್ಮನೆ ನೋಡಿ ಕ್ಲಿಕ್ ಮಾಡುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಕ್ಯಾಮರಾದಲ್ಲಿ ನೀಡಿರುವ ಎಲ್ಲ ಆಯ್ಕೆಗಳನ್ನು ಬಳಸುವುದು ಹೇಗೆ? ಈ ಅಪೆರ್ಚರ್, ಐಎಸ್‌ಓ, ಶಟ್ಟರ್ ಸ್ಪೀಡ್, ಇತ್ಯಾದಿ ಆಯ್ಕೆಗಳನ್ನು ಯಾವ ಸಂದರ್ಭದಲ್ಲಿ ಯಾವ ರೀತಿ ಬಳಸಬೇಕು? ಈ ಪ್ರಶ್ನೆಗಳು ಹೊಸತಾಗಿ ಕ್ಯಾಮರಾ ಕೊಂಡುಕೊಂಡ ಎಲ್ಲರ ಮನದಲ್ಲೂ ಮೂಡುವುದರಲ್ಲಿ ಆಶ್ಚರ್ಯವಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರರೂಪವಾಗಿ www.photoxels.com ಜಾಲತಾಣವಿದೆ. ಡಿಜಿಟಲ್ ಫೋಟೋಗ್ರಫಿ ಬಗ್ಗೆ ಸಂಪೂರ್ಣ ಅಜ್ಞಾನಿಯಿಂದ ಹಿಡಿದು ಪರಿಣತರ ತನಕ ಎಲ್ಲ ವರ್ಗದವರಿಗೂ ಉಪಯೋಗಿಯಾಗುವ ಲೇಖನಗಳು ಇಲ್ಲಿವೆ. 

ಡೌನ್‌ಲೋಡ್

ಸಮೀಕರಣ ರಚಿಸಿ

ಗಣಿತದ ಸಮೀಕರಣಗಳನ್ನು ಗಣಕದಲ್ಲಿ ಮೂಡಿಸುವುದು ಬಹು ಕಷ್ಟದ ಕೆಲಸ. ಮೈಕ್ರೋಸಾಫ್ಟ್ ವರ್ಡ್ ಇದ್ದಲ್ಲಿ ಅದಕ್ಕೆ ಸಮೀಕರಣಗಳನ್ನು ರಚಿಸಲು ಅನುವು ಮಾಡಿಕೊಡುವ equation editor ಎಂಬ ಹೆಚ್ಚುವರಿ ಸವಲತ್ತು ಲಭ್ಯವಿದೆ. ಆದರೆ ವರ್ಡ್ ತಂತ್ರಾಂಶವೇ ಇಲ್ಲದಿದ್ದಲ್ಲಿ? ಅಥವಾ ಸಮೀಕರಣ ರಚಿಸಲು ಒಂದು ಸರಳವಾದ ತಂತ್ರಾಂಶ ಬೇಕು ಎನ್ನುವವರು ನೀವೇ? ಹಾಗಿದ್ದಲ್ಲಿ ನಿಮಗಾಗಿ Math-o-mir ಎಂಬ ತಂತ್ರಾಂಶ ಲಭ್ಯವಿದೆ. ಇದು ಸಂಪೂರ್ಣ ಉಚಿತ. ಇದನ್ನು ಬಳಸಿ ಕ್ಲಿಷ್ಟವಾದ ಸಮೀಕರಣಗಳನ್ನು ರಚಿಸಿ ನಂತರ ಅದನ್ನು ಚಿತ್ರ ರೂಪದಲ್ಲಿ ಉಳಿಸಿಕೊಳ್ಳಬಹುದು. ಈ ತಂತ್ರಾಂಶ ಬೇಕಿದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ - bit.ly/kw7UwE.    
[ಈ ಕೊಂಡಿಯಲ್ಲಿ ದೋಷವಿದೆ ಎಂದು ಕೆಲವರು ಬರೆದಿದ್ದಾರೆ. ಅದು ಒಂದು ಎಚ್ಚರಿಕೆ ಮಾತ್ರ. ಅದನ್ನು ಕಡೆಗಣಿಸಿ ಮುಂದುವರೆಯಬಹುದು. ನೇರ ಕೊಂಡಿ ಬೇಕಿದ್ದವರಿಗೆ - http://gorupec.awardspace.com/mathomir.html]

e - ಸುದ್ದಿ

ನಿಮಗಿಷ್ಟಬಂದ ಡೊಮೈನ್ ಹೆಸರು

ಅಂತರಜಾಲತಾಣಗಳ ಹೆಸರುಗಳು ಸಾಮಾನ್ಯವಾಗಿ .com, .org, .net, .edu, .in, ಇತ್ಯಾದಿಯಾಗಿ ಕೊನೆಗೊಳ್ಳುವುದು ಗೊತ್ತಿರಬಹುದು. ಇವುಗಳು ಬೇಕಾಬಿಟ್ಟಿಯಾಗಿರಲು ಸಾಧ್ಯವಿಲ್ಲ. ಈ ಹೆಸರುಗಳನ್ನು ಒಂದು ಚೌಕಟ್ಟಿನಲ್ಲಿಡಲು ಒಂದು ಸಂಸ್ಥೆ (ICANN) ಇದೆ. ಅದು ಇತ್ತೀಚೆಗೆ ನಿಮಗಿಷ್ಟಬಂದ ಹೆಸರುಗಳನ್ನು ಇಟ್ಟುಕೊಳ್ಳುವ ಸ್ವಾತಂತ್ರ್ಯವನ್ನು ನೀಡಿದೆ. ಅಂದರೆ .phone, .car, .paper, ಇತ್ಯಾದಿಯಾಗಿ ಏನು ಬೇಕಾದರೂ ಇಟ್ಟುಕೊಳ್ಳಬಹುದು. ಉದಾಹರಣೆಗೆ www.kannadaprabha.newspaper. ಆದರೆ ಈ ಸ್ವಾತಂತ್ರ್ಯ ತುಂಬ ದುಬಾರಿ. ಪ್ರಾರಂಭದಲ್ಲಿ ೧,೮೫,೦೦೦ ಡಾಲರು ನೀಡಬೇಕು ಮತ್ತು ಪ್ರತಿ ವರ್ಷ ೨೫,೦೦೦ ಡಾಲರು ನೀಡಬೇಕು.
 
e- ಪದ

ಮೇಲ್ಮಟ್ಟದ ಡೊಮೈನ್ (top-level domain - TLD) - ಅಂತರಜಾಲತಾಣಗಳ ಹೆಸರುಗಳ ಕೊನೆಯಲ್ಲಿ ಬಳಸುವ ಡೊಮೈನ್‌ನ ಮೇಲ್ಮಟ್ಟದ ಹೆಸರು. ಉದಾಹರಣೆಗೆ www.kannadaprabha.com ಎಂಬಲ್ಲಿ .com ಎಂಬುದು ಟಿಎಲ್‌ಡಿ ಆಗಿದೆ. ಟಿಎಲ್‌ಡಿಗೆ ಉದಾಹರಣೆಗಳು - .com, .org, .net, .edu, .in, ಇತ್ಯಾದಿ.

e - ಸಲಹೆ

ಕೃಷ್ಣ ಅವರ ಪ್ರಶ್ನೆ: ನಮ್ಮ ಕಂಪ್ಯೂಟರ್ ಯು.ಪಿ.ಎಸ್. ಇದ್ದರು ಕರೆಂಟ್ ಹೋದಾಗ ರೀ ಸ್ಟಾರ್ಟ್ ಆಗುತ್ತದೆ ಯಾಕೆ?
ಉ: ನಿಮ್ಮ ಯು.ಪಿ.ಎಸ್. ಅನ್ನು ಪರಿಣತರಿಂದ ಪರಿಶೀಲಿಸಿ. ಯು.ಪಿ.ಎಸ್.ನ ಶಕ್ತಿ ಕಡಿಮೆ ಇರಬಹುದು ಅಥವಾ ಅದು ವಿದ್ಯುತ್ ನಿಲುಗಡೆಯಾದ ನಂತರ ತಾನು ವಿದ್ಯುತ್ ಸರಬರಾಜು ಪ್ರಾರಂಭಿಸಲು ತೆಗೆದುಕೊಳ್ಳುವ ಸಮಯಾವಧಿ ಜಾಸ್ತಿ ಇರಬಹುದು. ಈ ಸಮಯಾವಧಿ ಮೈಕ್ರೋಸೆಕೆಂಡುಗಳಲ್ಲಿರತಕ್ಕದ್ದು.

ಕಂಪ್ಯೂತರ್ಲೆ

ಇತ್ತೀಚೆಗೆ ಗೂಗಲ್‌ನವರು ತಮ್ಮ ಅನುವಾದ ಸೌಲಭ್ಯದ (translate.google.com) ಭಾಷೆಗಳಿಗೆ ಕನ್ನಡವನ್ನೂ ಸೇರಿಸಿದ್ದಾರೆ. ಸದ್ಯಕ್ಕೆ ಅದು ಉತ್ತಮವಾಗಿಲ್ಲ. ಅಲ್ಲಿನ ಅನುವಾದಗಳಿಗೆ ಕೆಲವು ಉದಾಹರಣೆಗಳು:
wooden tables = ಮರದ ಕೋಷ್ಟಕಗಳು
button state = ಗುಂಡಿಯನ್ನು ರಾಜ್ಯ
windows is hanging = ಕಿಟಿಕಿಗಳನ್ನು ನೇಣು ಇದೆ 
ಅಳಿಯ = Can be measured

ಬುಧವಾರ, ಜೂನ್ 22, 2011

ಗಣಕಿಂಡಿ - ೧೦೯ (ಜೂನ್ ೨೦, ೨೦೧೧)

ಅಂತರಜಾಲಾಡಿ

ಭೌತಶಾಸ್ತ್ರಜ್ಞರುಗಳಿಗೆ

ಭೌತಶಾಸ್ತ್ರದಲ್ಲಿ ಆಸಕ್ತಿಯಿರುವ ಎಲ್ಲರಿಗೂ ಒಂದು ಉಪಯುಕ್ತ ಜಾಲತಾಣ www.iop.org. ವಿದ್ಯಾರ್ಥಿಗಳಿಗೆ, ಅಧ್ಯಾಪಕರುಗಳಿಗೆ ಮತ್ತು ಭೌತಶಾಸ್ತ್ರದಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಈ ಜಾಲತಾಣದ ಪ್ರಯೋಜನ ಪಡೆದುಕೊಳ್ಳಬಹುದು. ಈ ಜಾಲತಾಣವು ಭೌತಶಾಸ್ತ್ರ ಸಂಸ್ಥೆಯ ಅಧಿಕೃತ ಜಾಲತಾಣ. ಆಸಕ್ತಿಯಿದ್ದಲ್ಲಿ ಈ ಸಂಸ್ಥೆಗೆ ಸದಸ್ಯರೂ ಆಗಬಹುದು. ಭೌತಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಮಾಹಿತಿ, ಲೇಖನಗಳ ಜೊತೆ ಹಲವು ವೀಡಿಯೋಗಳೂ ಇವೆ. ನಿಮ್ಮ ಶಾಲೆ ಯಾ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಯೋಗ ಪ್ರದರ್ಶನ ಮಾಡಬೇಕಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಹಲವು ಉದಾಹರಣೆಗಳು ಇಲ್ಲಿವೆ.

ಡೌನ್‌ಲೋಡ್

ಕಾರು ಓಡಿಸಿ

ಗಣಕದಲ್ಲಿ ಕಾರು ಓಡಿಸುವ ಹಾಗೂ ಓಟದ ಸ್ಪರ್ಧೆಯ ಆಟಗಳು ಹಲವಾರಿವೆ. ಅವುಗಳಲ್ಲಿ ಬಹುತೇಕ ದುಬಾರಿ ತಂತ್ರಾಂಶಗಳು. ಅದೇ ರೀತಿ ಉಚಿತ ತಂತ್ರಾಂಶಗಳೂ ಇವೆ. ಅಂತಹ ಒಂದು ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.wheelspinstudios.com/drivingspeed2. ಎಲ್ಲ ಆಟಗಳಂತೆ ಇದೂ ತುಂಬ ದೊಡ್ಡ ಗಾತ್ರದ್ದಾಗಿದೆ. ಡೌನ್‌ಲೋಡ್ ಮಾಡುವ ಮೊದಲು ಫೈಲ್ ಗಾತ್ರವನ್ನು ಗಮನಿಸಿಕೊಳ್ಳಿ. ಈ ಆಟವನ್ನು ಗಣಕದಲ್ಲಿ ಒಂಟಿಯಾಗಿ, ಗಣಕವನ್ನು ಎದುರಾಳಿಯಾಗಿಟ್ಟುಕೊಂಡು ಅಥವಾ ಅಂತರಜಾಲದ ಮೂಲಕ ಇತರೆ ಎದುರಾಳಿಗಳನ್ನು ಆಯ್ಕೆ ಮಾಡಿಕೊಂಡು ಆಡಬಹುದು. ಅಂತರಜಾಲ ಮೂಲಕ ಆಡಬೇಕಿದ್ದರೆ ಉತ್ತಮ ಬ್ರಾಡ್‌ಬ್ಯಾಂಡ್ ಸಂಪರ್ಕ ಬೇಕು. ಉತ್ತಮ ಮಟ್ಟದ ಗ್ರಾಫಿಕ್ಸ್ ಕಾರ್ಡ್ ಕೂಡ ಇರಬೇಕು.

e - ಸುದ್ದಿ

ಅಂತರಜಾಲ ಸಂಪರ್ಕ ಈಗ ಮೂಲಭೂತ ಹಕ್ಕು

ಅಂತರಜಾಲ ಸಂಪರ್ಕವು ಒಂದು ಮೂಲಭೂತ ಹಕ್ಕು ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಘೋಷಿಸಿದೆ. ಇದು ಬಹು ದೂರಗಾಮಿ ಪರಿಣಾಮ ಬೀರಲಿದೆ. ಇತ್ತೀಚೆಗೆ ಈಜಿಪ್ಟ್ ಮತ್ತು ಕೆಲವು ಮಧ್ಯ ಏಷಿಯಾ ದೇಶಗಳಲ್ಲಿ ನಡೆದ ಚಳವಳಿಗಳಲ್ಲಿ ಅಂತರಜಾಲವು ಪ್ರಮುಖ ಪಾತ್ರವಹಿಸಿದೆ. ಜನರು ಚಳವಳಿಯಲ್ಲಿ ಸೇರಲು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳನ್ನು ಬಳಸಿಕೊಂಡಿದ್ದರು. ಇದರಿಂದ ಕುಪಿತವಾದ ಅಲ್ಲಿನ ಸರಕಾರಗಳು ತಮ್ಮ ದೇಶದಲ್ಲಿ ಅಂತರಜಾಲ ಸಂಪರ್ಕವನ್ನು ನಿಷೇಧಿಸಿದ್ದರು. ಇಂತಹ ಘಟನೆಗಳು ಮರುಕಳಿಸಬಾರದು ಎಂದು ತೀರ್ಮಾನಿಸಿದ ವಿಶ್ವಸಂಸ್ಥೆ ಅಂತರಜಾಲ ಸಂಪರ್ಕವು ಪ್ರತಿಯೊಬ್ಬ ಮಾನವನ ಮೂಲಭೂತ ಹಕ್ಕು ಎಂದು ಘೋಷಿಸಿದೆ.
 
e- ಪದ

ಲಾಟೆಕ್ (LaTeX) - ಮುದ್ರಣ ಮತ್ತು ಪುಟವಿನ್ಯಾಸಕ್ಕೆ ಬಳಸುವ ಒಂದು ಕ್ರಮವಿಧಿ ಭಾಷೆ. ಇದು ಸಾಮಾನ್ಯವಾಗಿ ವಿಜ್ಞಾನಿ ಮತ್ತು ಗಣಿತಶಾಸ್ತ್ರಜ್ಞರ ಬಳಗದಲ್ಲಿ ಪ್ರಚಲಿತವಾಗಿದೆ. ಇದರಲ್ಲಿ ಪುಟವಿನ್ಯಾಸ ಮತ್ತು ವಿವಿಧ ನಮೂನೆಯ ಮುದ್ರಣದ ಪರಿಣಾಮಗಳನ್ನು ಪಡೆಯಲು ಆದೇಶಗಳನ್ನು ನಿಡಬೇಕಾಗುತ್ತದೆ. ಕೊನೆಗೆ ಅದು ಸುಂದರ ಪುಟವಾಗಿ ಮುದ್ರಣಕ್ಕೆ ತಯಾರಾಗಿ ಬರುತ್ತದೆ. ಇದು ಅತ್ಯಂತ ಶಕ್ತಿಶಾಲಿಯಾಗಿದೆ. ಎಷ್ಟು ಕ್ಲಿಷ್ಟವಾದ ಸಮೀಕರಣವಾದರೂ ಇದನ್ನು ಬಳಸಿ ಪಡೆಯಬಹುದಾಗಿದೆ. ಇದರ ಮೂಲ ಟೆಕ್ (TeX). ಇದನ್ನು ಕನ್ನಡ ಭಾಷೆಗೂ ಅಳವಡಿಸಲಾಗಿದೆ.

e - ಸಲಹೆ

ಮಹಾಲಿಂಗೇಶರ ಪ್ರಶ್ನೆ: ನಾನು ಮಸ್ಕತ್‌ನಿಂದ ತರಿಸಿದ ಲ್ಯಾಪ್ಟಾಪ್ ಬಳಸುತ್ತಿರುವೆ. ಅದರಲ್ಲಿ ವಿಂಡೋಸ್ ೭ ಇದೆ.  ಅದರಲ್ಲಿ ನನಗೆ ನುಡಿ ತಂತ್ರಾಂಶವನ್ನು ಬಳಸಲು ಆಗುತ್ತಿಲ್ಲ. ಯುನಿಕೋಡ್ ಆಯ್ಕೆಮಾಡಿಕೊಂಡು ಟೈಪ್ ಮಾಡಿ ಪೆನ್ ಡ್ರೈವ್ ನಲ್ಲಿ ಸೇವ್ ಮಾಡಿ ಬೇರೆ ಕಂಪ್ಯೂಟರ್‌ನಲ್ಲಿ ಹಾಕಿದಾಗ ಸರಿಯಾಗಿ ಓಪನ್ ಆಗುವುದಿಲ್ಲ. ನನ್ನ ಕೀಲಿಮಣೆಯಲ್ಲಿ ಇಂಗ್ಲಿಶ್ ಜೊತೆಗೆ ಅರೇಬಿಕ್ ಇರುವುದೇ ಹೀಗಾಗಲು ಕಾರಣವೇ ತಿಳಿಸಿ.
ಉ: ಅರೇಬಿಕ್ ಕೀಲಿಮಣೆಯಿದ್ದರೆ ತೊಂದರೆಯಿಲ್ಲ. ಅಷ್ಟೇಕೆ? ಪ್ರಪಂಚದ ಎಲ್ಲ ಭಾಷೆಯ ಕೀಲಿಮಣೆಗಳನ್ನು ಕೂಡ ನೀವು ಹಾಕಿಟ್ಟುಕೊಳ್ಳಬಹುದು. ಆದರೆ ಯಾವುದೇ ಒಂದು ಸಮಯದಲ್ಲಿ ಒಂದನ್ನು ಮಾತ್ರ ಚಾಲನೆಗೊಳಿಸಬಹುದು. ಅದುದರಿಂದ ಅದು ನಿಮ್ಮ ಸಮಸ್ಯೆಯಲ್ಲ. ವಿಂಡೋಸ್ ೭ ರಲ್ಲಿ (೬೪ ಬಿಟ್ ಆವೃತ್ತಿಯಲ್ಲಿ) ನುಡಿ ತಂತ್ರಾಂಶ ಸರಿಯಾಗಿ ಕೆಲಸ ಮಾಡುವುದಿಲ್ಲ. ನೀವು ವಿಂಡೋಸ್‌ನಲ್ಲೇ ಇರುವ ಕನ್ನಡ ಯುನಿಕೋಡ್ ಕೀಲಿಮಣೆಯನ್ನು ಬಳಸಬಹುದು.

ಕಂಪ್ಯೂತರ್ಲೆ

ಮೈಕ್ರೋಸಾಫ್ಟ್ ಸ್ಕೈಪನ್ನು ೮.೫ ಬಿಲಿಯನ್ ಕೊಟ್ಟು ಕೊಂಡುಕೊಂಡಿತು ಎಂಬುದನ್ನು ಪತ್ರಿಕೆಗಳಲ್ಲಿ ಓದಿದ ಕೋಲ್ಯ ಉದ್ಗರಿಸಿದ - “ಅವರೇಕೆ ಅದಕ್ಕೆ ದುಡ್ಡು ಕೊಟ್ಟು ಕೊಂಡುಕೊಂಡರು? ಅವರು ಅದನ್ನು ಬಿಟ್ಟಿಯಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಿತ್ತಲ್ಲ!” 

ಸೋಮವಾರ, ಜೂನ್ 13, 2011

ಗಣಕಿಂಡಿ - ೧೦೮ (ಜೂನ್ ೧೩, ೨೦೧೧)

ಅಂತರಜಾಲಾಡಿ

ಭ್ರಷ್ಟಾಚಾರ ನಿರ್ಮೂಲನ

ಇತ್ತೀಚಿನ ಎರಡು ವರ್ಷಗಳಲ್ಲಿ ಭ್ರಷ್ಟಾಚಾರದ್ದೇ ಮಾತು. ಭ್ರಷ್ಟಾಚಾರ ವಿರುದ್ಧ ನಡೆಯುತ್ತಿರುವ ಚಳವಳಿ ಎಲ್ಲರಿಗೂ ಗೊತ್ತು. ದೇಶದಲ್ಲಿ ಜನಲೋಕಪಾಲ ಕಾಯಿದೆ ತರಬೇಕು ಎಂದು ಅಣ್ಣಾ ಹಜಾರೆ ನಡೆಸುತ್ತಿರುವ ಚಳವಳಿ ಗೊತ್ತಿಲ್ಲದವರು ಇಲ್ಲ. ಈ ಜನಲೋಕಪಾಲ ಮಸೂದೆ ಎಂದರೆ ಏನು? ಈ ಕಾಯಿದೆಯನ್ನು ರೂಪಿಸುತ್ತಿರುವ ತಂಡ, ಕಾಯಿದೆಯ ರೂಪುರೇಷೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ, ಇತ್ತೀಚಿನ ಸುದ್ದಿ, ನೀವು ಸುದ್ದಿ ಮಾಧ್ಯಮದವರಾದರೆ ನಿಮಗೆ ಅಗತ್ಯ ಮಾಹಿತಿ, ಚಿತ್ರ, ಇತ್ಯಾದಿ ಎಲ್ಲ ದೊರಕುವ ಜಾಲತಾಣ  www.indiaagainstcorruption.org. ಕರಡು ಲೋಕಪಾಲ ಮಸೂದೆಯನ್ನು ಡೌನ್‌ಲೋಡ್ ಕೂಡ ಮಾಡಿಕೊಳ್ಳಬಹುದು. ಇನ್ನು ತಡವೇಕೆ? ನೀವೂ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಿ.

ಡೌನ್‌ಲೋಡ್

ಫ್ರಾಕ್ಟಲ್ ತಯಾರಿಸಿ

Fractal Forge ಎಂಬುದು ಒಂದು ಮುಕ್ತ ತಂತ್ರಾಂಶ. ಇದನ್ನು ಬಳಸಿ ಹಲವು ವಿಧದ ಫ್ರಾಕ್ಟಲ್‌ಗಳನ್ನು ಮಾಡಬಹುದು. ಫ್ರಾಕ್ಟಲ್ ಎಂದರೆ ಏನು ಎಂದು ಕೇಳುತ್ತಿದ್ದೀರಾ? ಉತ್ತರ ಇದೇ ತಂತ್ರಾಂಶದ ಸಹಾಯ ಕಡತದಲ್ಲಿ ಇದೆ. ಈ ಕ್ಲಿಷ್ಟ ಗಣಿತಶಾಸ್ತ್ರ ನಿಮಗೆ ಅರ್ಥವಾಗುವುದಿಲ್ಲವೇ? ಚಿಂತಿಸಬೇಡಿ. ಅದರಿಂದ ದೊರೆಯುವ ಅದ್ಭುತ ವಿನ್ಯಾಸಗಳನ್ನು ನೋಡಿ ಆನಂದಿಸಿ. ನಿಮ್ಮ ಗೆಳೆಯರಿಗೆ ಒಂದು ವೈeನಿಕ ಶುಭಾಶಯ ಪತ್ರ ಕಳುಹಿಸಲು ಈ ವಿನ್ಯಾಸಗಳನ್ನು ಬಳಸಿ. ಈ ತಂತ್ರಾಂಶದ ತಾಣಸೂಚಿ: uberto.fractovia.org. ಮೂರು ಆಯಾಮದ ಫ್ರಾಕ್ಟಲ್‌ಗಳನ್ನು ತಯಾರಿಸಬೇಕೇ? ಹಾಗಿದ್ದರೆ www.chaospro.de ಜಾಲತಾಣಕ್ಕೆ ಭೇಟಿ ನಿಡಿ ಅಲ್ಲಿ ದೊರೆಯುವ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಿ.


e - ಸುದ್ದಿ

ಬಾಂಬ್ ಬದಲು ಕೇಕ್

ಸರಕಾರದ ಜಾಲತಾಣಗಳಿಗೆ ಅದರಲ್ಲೂ ಮುಖ್ಯವಾಗಿ ಸೇನೆ, ಸುರಕ್ಷೆ, ಸಂಶೋಧನಾ ಕೇಂದ್ರ -ಇತ್ಯಾದಿಗಳ ಜಾಲತಾಣಗಳಿಗೆ ಹ್ಯಾಕರ್‌ಗಳು ಮತ್ತು ಆತಂಕವಾದಿಗಳು ದಾಳಿ ಇಟ್ಟು ಅವುಗಳನ್ನು ಕೆಡಿಸುವುದು, ಆ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ದಾಖಲಿಸುವುದು ಆಗಾಗ ನಡೆಯುತ್ತದೆ. ಈ ಬಗ್ಗೆ ಪತ್ರಿಕೆಗಳಲ್ಲಿ ಓದಿಯೇ ಇರುತ್ತೀರಿ. ಆದರೆ ಇದು ವಿರುದ್ಧ ಕಥೆ. ಅಲ್‌ಖೈದದವರು ಇಂಗ್ಲಿಶ್ ಭಾಷೆಯಲ್ಲಿ ಒಂದು ಜಾಲತಾಣ ನಿರ್ಮಿಸಿ ಸುಲಭದಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂಬ ವಿವರಣೆಯನ್ನು ಅದರಲ್ಲಿ ದಾಖಲಿಸಿದ್ದರು. ಬ್ರಿಟಿಶ್ ಗುಪ್ತಚಾರಿಕೆ ಸಂಸ್ಥೆಯವರು ಅದಕ್ಕೆ ದಾಳಿ ಇಟ್ಟು ಅದನ್ನು ಕೆಡಿಸಿ ಬಾಂಬ್ ಬದಲಿಗೆ ಕೇಕ್ ತಯಾರಿಸುವುದು ಹೇಗೆ ಎಂಬ ವಿವರವನ್ನು ಹಾಕಿ ಇಟ್ಟಿದ್ದರು.
 
e- ಪದ


ಸೈಬರ್‌ಸ್ಕ್ವಾಟಿಂಗ್ (cybersquatting) - ಇದಕ್ಕೆ ಇನ್ನೊಂದು ಹೆಸರು ಡೊಮೈನ್ ಸ್ಕ್ವಾಟಿಂಗ್ (domain squatting). ಇನ್ನೊಂದು ಕಂಪೆನಿ ಅಥವಾ ಸಂಸ್ಥೆಯ ಹೆಸರಿನಲ್ಲಿ ಜಾಲತಾಣ ಹೆಸರನ್ನು ನೋಂದಾಯಿಸಿ ಇಟ್ಟುಕೊಳ್ಳುವುದು. ಉದಾಹರಣೆಗೆ xyz ಹೆಸರಿನ ಒಂದು ಖ್ಯಾತ ಕಂಪೆನಿ ಇದೆ ಎಂದಿಟ್ಟುಕೊಳ್ಳಿ. ಆ ಕಂಪೆನಿ ತನ್ನ ಹೆಸರಿನಲ್ಲಿ ಇನ್ನೂ ತನ್ನ ಜಾಲತಾಣದ ಹೆಸರನ್ನು (ಡೊಮೈನ್ ನೇಮ್) ನೋಂದಾಯಿಸಿಕೊಂಡಿಲ್ಲ ಎಂದು ಅರಿತವರೊಬ್ಬರು ಆ ಹೆಸರನ್ನು (xyz.com) ನೋಂದಾಯಿಸಿ ಇಟ್ಟುಕೊಳ್ಳುವುದು. ಇದರ ಹಿಂದಿನ ಉದ್ದೇಶ ಮುಂದೊಂದು ದಿನ ಅದೇ ಕಂಪೆನಿಗೆ ಆ ಹೆಸರನ್ನು ಅತಿ ಹೆಚ್ಚು ಹಣಕ್ಕೆ ಮಾರುವುದು.  ಜಾಗತಿಕ ಬೌದ್ಧಿಕ ಹಕ್ಕುಸ್ವಾಮ್ಯ ಸಂಸ್ಥೆ (World Intellectual Property Organization - WIPO) ಪ್ರಕಾರ ಇದು ಅಪರಾಧ. ಹಲವು ಕಂಪೆನಿಗಳವರು ನ್ಯಾಯಾಲಯದ ಮೂಲಕ ತಮ್ಮ ಡೊಮೈನ್ ಹೆಸರು ತಮ್ಮದಾಗಿಸಿಕೊಂಡಿದ್ದಾರೆ.

e - ಸಲಹೆ

ದುಂಡಪ್ಪನವರ ಪ್ರಶ್ನೆ: ನನ್ನ ಗಣಕ ಹದಿನೈದು ನಿಮಿಷ ಕೆಲಸ ಮಾಡಿ ತನ್ನಿಂದತಾನೆ ಆಫ್ ಆಗುತ್ತದೆ. ಇದಕ್ಕೇನು ಕಾರಣ?
ಉ: ಬಹುಶಃ ನಿಮ್ಮ ಗಣಕದ ಒಳಗೆ ಇರುವ ಸಿಪಿಯು ಬಿಸಿ ಆಗುತ್ತಿರಬೇಕು. ಅದರ ಮೇಲಿನ ಫ್ಯಾನ್ ಕೆಲಸ ಮಾಡುತ್ತಿದೆಯೋ ಪರೀಕ್ಷಿಸಿ. ಗಣಕಕ್ಕೆ ಸರಿಯಾಗಿ ಗಾಳಿ ಓಡಾಡುತ್ತಿರಬೇಕು. ಪ್ಲಾಸ್ಟಿಕ್ ಕವರ್ ಹಾಕಿ ಬಳಸಬೇಡಿ. ಇನ್ನೂ ಒಂದು ಕಾರಣ ಇರುವ ಸಾಧ್ಯತೆ ಇದೆ. ಮೆಮೊರಿ ಚಿಪ್‌ಗಳು ಸಡಿಲವಾಗಿರಬಹುದು. ಅದನ್ನೂ ಪರೀಕ್ಷಿಸಿ ನೋಡಿ.  

ಕಂಪ್ಯೂತರ್ಲೆ

ಕೋಲ್ಯನ ಮಗ ಜಾಲತಾಣವೊಂದರಲ್ಲಿ ತನ್ನ ಹೆಸರನ್ನು ನೋಂದಾಯಿಸುತ್ತಿದ್ದ. ಅಲ್ಲಿ ಸರ್‌ನೇಮ್ ಎಂದಿದ್ದಲ್ಲಿ ತನ್ನ ಉಪಾಧ್ಯಾಯರ ಹೆಸರನ್ನು ನಮೂದಿಸಿದ.

ಮಂಗಳವಾರ, ಜೂನ್ 7, 2011

ಗಣಕಿಂಡಿ - ೧೦೭ (ಜೂನ್ ೦೬, ೨೦೧೧)

ಅಂತರಜಾಲಾಡಿ

ಕೋಪಿಷ್ಠ ಹಕ್ಕಿಗಳು

ಆಪಲ್ ಐಫೋನ್ ಮತ್ತು ಆಂಡ್ರೋಯಿಡ್ ಫೋನ್‌ಗಳಲ್ಲಿ ತುಂಬ ಜನಪ್ರಿಯವಾದ ಆಟ Angry Birds. ಇದು ಈಗ ಮೊಬೈಲ್ ತಂತ್ರಾಂಶ ಮಾರುಕಟ್ಟೆಯಲ್ಲಿ ಮಾರಾಟದ ದಾಖಲೆಯಲ್ಲಿ ಮೊದಲನೆಯ ಸ್ಥಾನದಲ್ಲಿದೆ. ನಿಮ್ಮಲ್ಲಿ ಐಫೋನ್ ಅಥವಾ ಆಂಡ್ರೋಯಿಡ್ ಫೋನ್ ಇದ್ದಲ್ಲಿ ಅದನ್ನು ಮಾರುಕಟ್ಟೆಯಿಂದ ಕೊಂಡುಕೊಳ್ಳಬಹುದು ಅಥವಾ ಉಚಿತ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಬರಿಯ ಆಟವಲ್ಲ. ಇದರಲ್ಲಿ ಸ್ವಲ್ಪ ವಿಜ್ಞಾನವೂ ಇದೆ. ಒಂದು ಕವಣೆಯನ್ನು ಬಳಸಿ ಅದರ ವೇಗ, ಕೋನ ಬದಲಿಸಿ, ಹಕ್ಕಿಗಳನ್ನು ಎಸೆದು ಹಂದಿಗಳನ್ನು ಕೊಲ್ಲಬೇಕು. ಇದನ್ನು ನಿಮ್ಮ ಗಣಕದಲ್ಲೇ ಆಡಬೇಕೇ? ಅದೂ ಉಚಿತವಾಗಿ? ಹಾಗಿದ್ದರೆ ನೀವು chrome.angrybirds.com ಜಾಲತಾಣಕ್ಕೆ ಭೇಟಿ ನಿಡಬೇಕು. ಇದು ಕ್ರೋಮ್ ಬ್ರೌಸರ್‌ನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ೯ ಹಾಗೂ ಫೈರ್‌ಫಾಕ್ಸ್ ೪ ರಲ್ಲೂ ಕೆಲಸ ಮಾಡುತ್ತದೆ. ಆದರೆ ಕ್ರೋಮ್‌ನಷ್ಟು ಚೆನ್ನಾಗಿ ಅಲ್ಲ. ಇತ್ತೀಚೆಗೆ ಇದನ್ನು ಕ್ರೋಮ್‌ಗೆ ಸೇರಿಸಿಕೊಂಡು ಅಂತರಜಾಲ ಸಂಪರ್ಕ ಇಲ್ಲದಿದ್ದಾಗಲೂ ಆಡುವ ಸವಲತ್ತು ನೀಡಿದ್ದಾರೆ. ಎಚ್ಚರಿಕೆ. ಇದು ನಿಮ್ಮನ್ನು ಒಂದು ಚಟವಾಗಿ ಅಂಟಿಕೊಂಡುಬಿಡಬಹುದು.

ಡೌನ್‌ಲೋಡ್

ಕಡತ ರಿಪೇರಿ ಮಾಡಿ

ಗಣಕದಲ್ಲಿ ಒಂದು ಕಡತ ತಯಾರಿ ಮಾಡುತ್ತಿದ್ದೀರಿ. ಅದಕ್ಕಾಗಿ ಮೈಕ್ರೋಸಾಫ್ಟ್ ವರ್ಡ್ ಅಥವಾ ಎಕ್ಸೆಲ್ ಬಳಸುತ್ತಿದ್ದೀರಿ. ಆಗ ಇದ್ದಕ್ಕಿದ್ದಂತೆ ವಿದ್ಯುಚ್ಛಕ್ತಿ ಕೈಕೊಡುತ್ತದೆ. ನಿಮ್ಮಲ್ಲಿ ಯುಪಿಎಸ್ ಇಲ್ಲ. ಆಗ ಏನಾಗುತ್ತದೆ? ಗಣಕ ಇದ್ದಕ್ಕಿದ್ದಂತೆ ನಿಂತುಹೋಗುವುದರಿಂದ ಹೆಚ್ಚಿನಂಶ ನೀವು ಕೆಲಸ ಮಾಡುತ್ತಿದ್ದ ಕಡತ ಕೆಟ್ಟುಹೋಗುವ ಸಾದ್ಯತೆ ಇದೆ. ಆಗಾಗ ಕಡತವನ್ನು ಉಳಿಸುತ್ತಾ ಇರು ಎಂದು ಆಯ್ಕೆ ಮಾಡಿಕೊಂಡಿದ್ದಲ್ಲಿ ಸುಮಾರು ಮಾಹಿತಿ ಸಿಗುವ ಸಾಧ್ಯತೆ ಇದೆ. ಹಾಗಿಲ್ಲದಿದ್ದಲ್ಲಿ ಕಡತ ಕೆಟ್ಟಿದ್ದರೆ ಅದನ್ನು ಸರಿಮಾಡಲು ಒಂದು ತಂತ್ರಾಂಶ ಉಚಿತವಾಗಿ ಲಭ್ಯವಿದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಲು ನೀವು ಭೇಟಿ ನೀಡಬೇಕಾದ ಜಾಲತಾಣ  www.filerepair1.com. ವರ್ಡ್ ಮತ್ತು ಎಕ್ಸೆಲ್ ಮಾತ್ರವಲ್ಲ, ಇನ್ನೂ ಹಲವಾರು ನಮೂನೆಯ ಫೈಲ್‌ಗಳನ್ನು ಇದು ರಿಪೇರಿ ಮಾಡಬಲ್ಲುದು.

e - ಸುದ್ದಿ

ನಿಮ್ಮ ಮುಖಕ್ಕೆ ಸರಿಹೊಂದುವ ನಾಯಿ

ನಿಮ್ಮ ಮುಖಕ್ಕೆ ಸರಿಹೊಂದುವ ಹೆಣ್ಣು/ಗಂಡನ್ನು ನೋಡಿ ಮದುವೆ ಆಗುವುದು ಗೊತ್ತು ತಾನೆ? ಅದನ್ನೇ ಗಣಕ ಬಳಸಿಯೂ ಮಾಡಬಹುದು. ಅದಕ್ಕಾಗಿ ತಂತ್ರಾಂಶಗಳೂ ಇವೆ. ಹಲವು ಅಂತರಜಾಲತಾಣಗಳೂ ಇವೆ. ಅಂತಹ ಜಾಲತಾಣದಲ್ಲಿ ನಿಮ್ಮ ಫೋಟೋ ನೀಡಿದರೆ ಅದು ನಿಮ್ಮ ಮುಖಕ್ಕೆ ಸರಿಹೊಂದುವ ಬಾಳಸಂಗಾತಿಯನ್ನು ಹುಡುಕಿ ಕೊಡುತ್ತದೆ. ಅದೇನೋ ಸರಿ. ಆದರೆ ನಿಮ್ಮ ಮುಖಕ್ಕೆ ಸರಿಹೊಂದುವ ನಾಯಿ ಕೊಳ್ಳುವುದು ಗೊತ್ತೆ? ಅದಕ್ಕಾಗಿ ನೀವು www.doggelganger.co.nz  ಜಾಲತಾಣಕ್ಕೆ ಭೇಟಿ ನೀಡಬೇಕು. ಆ ಜಾಲತಾಣದಲ್ಲಿ ನೀವು ನಿಮ್ಮ ಫೋಟೋ ನೀಡಬಹುದು ಅಥವಾ ನಿಮ್ಮ ಗಣಕದಲ್ಲಿ ಕ್ಯಾಮರಾ ಇದ್ದರೆ ಅದರ ಮೂಲಕ ಫೋಟೋವನ್ನು ಅದುವೇ ತೆಗೆದುಕೊಳ್ಳುತ್ತದೆ. ನಂತರ ನಿಮ್ಮ ಮುಖಕ್ಕೆ ಸರಿಹೊಂದುವ ನಾಯಿಯ ಮಾಹಿತಿ ನೀಡುತ್ತದೆ. ಆದರೆ ನಾಯಿ ಮಾತ್ರ ನ್ಯೂಝೀಲಂಡಿನಲ್ಲಿ ಸಿಗುತ್ತದೆ.
 
e- ಪದ

ಟೈಪೋಸ್ಕ್ವಾಟ್ಟಿಂಗ್ (Typosquatting) - ಖ್ಯಾತ ಜಾಲತಾಣಗಳ ವಿಳಾಸವನ್ನು ಬೆರಳಚ್ಚು ಮಾಡುವಾಗ ತಪ್ಪಾದರೆ ದೊರೆಯುವ ಜಾಲತಾಣ ವಿಳಾಸಗಳನ್ನು ನೋಂದಣಿ ಮಾಡಿಟ್ಟುಕೊಳ್ಳುವುದು. ಉದಾಹರಣೆಗೆ google.com ಎಲ್ಲರಿಗೂ ಗೊತ್ತು. ಕೆಲವೊಮ್ಮೆ ಅದನ್ನು ಬೆರಳಚ್ಚು ಮಾಡುವಾಗ goggle ಎಂದಾಗುತ್ತದೆ. ಇದನ್ನು ಮೊದಲೇ ಊಹಿಸಿ goggle.com ಎಂಬ ಜಾಲತಾಣವನ್ನು ನೋಂದಾಯಿಸಿಕೊಳ್ಳವುದು. ಅನಂತರ ಅದಕ್ಕೆ ಬರುವ ವೀಕ್ಷಕರನ್ನು ಬೇರೆಡೆಗೆ ಹಾದಿ ತಪ್ಪಿಸುವುದು.

e - ಸಲಹೆ

ಪ್ರ: ನನಗೆ ಗೂಗ್ಲ್ ವಿ-ಅಂಚೆ (gmail) ಯಲ್ಲಿರುವ ಪತ್ರಗಳನ್ನು ನನ್ನ ಗಣಕಕ್ಕೆ ಡೌನ್‌ಲೋಡ್ ಮಾಡಿಟ್ಟುಕೊಳ್ಳಬೇಕು ಮತ್ತು ಗಣಕದಿಂದಲೇ ಜಿಮೈಲ್ ಮೂಲಕ ವಿ-ಅಂಚೆ ಕಳುಹಿಸಬೇಕು. ಅದಕ್ಕೆ ಏನು ಮಾಡಬೇಕು?
ಉ: ನಿಮ್ಮ ಗಣಕದಲ್ಲಿ ಯಾವುದಾದರೂ ವಿ-ಅಂಚೆಯ ತಂತ್ರಾಂಶ ಇರಬೇಕು. ಉದಾ -ಮೈಕ್ರೋಸಾಫ್ಟ್ ಔಟ್‌ಲುಕ್, ವಿಂಡೋಸ್ ಲೈವ್ ಮೈಲ್, ಥಂಡರ್‌ಬರ್ಡ್, ಇತ್ಯಾದಿ. ಔಟ್‌ಲುಕ್ ತುಂಬ ಚೆನ್ನಾಗಿದೆ. ಆದರೆ ಅದು ಉಚಿತವಲ್ಲ. ವಿಂಡೋಸ್ ಲೈವ್ ಮೈಲ್ ಉಚಿತ. ಅದನ್ನು bit.ly/iJYE4G ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಜಿಮೈಲ್‌ನಲ್ಲಿ POP/IMAP ಆಯ್ಕೆ ಮಾಡಿಕೊಳ್ಳಬೇಕು. ಪೂರ್ತಿ ವಿವರ ಜಿಮೈಲ್ ಜಾಲತಾಣದಲ್ಲಿದೆ.  

ಕಂಪ್ಯೂತರ್ಲೆ

ಕೋಲ್ಯನ ೬ ವರ್ಷದ ಮಗಳಿಗೆ ಗಣಕದ ಡೆಸ್ಕ್‌ಟಾಪ್‌ನಲ್ಲಿ ಮೈಕ್ರೋಸಾಫ್ಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಚಿತ್ರಿಕೆ (ಐಕಾನ್) ಕಾಣಸಿಗಲಿಲ್ಲ. ಆಕೆ ಅಪ್ಪನಿಗೆ ಕೇಳಿದಳು -“ಯಾಕೆ ನನ್ನ ಕಂಪ್ಯೂಟರಿನಿಂದ ಇಂಟರ್‌ನೆಟ್ಟನ್ನು ಡಿಲೀಟ್ ಮಾಡಿದೆ?”