ಸೋಮವಾರ, ಜುಲೈ 25, 2011

ಗಣಕಿಂಡಿ - ೧೧೪ (ಜುಲೈ ೨೫, ೨೦೧೧)

ಅಂತರಜಾಲಾಡಿ

ಬಿಳಿಹಲಗೆ

ಶಾಲೆಗಳಲ್ಲಿ ಬಳಸುವ ಕರಿಹಲಗೆ ಗೊತ್ತು. ಅಂತೆಯೇ ಕಚೇರಿಗಳಲ್ಲಿ, ವಿಚಾರಸಂಕಿರಣಗಳಲ್ಲಿ ಬಳಸುವ ಬಿಳಿಹಲಗೆ ಗೊತ್ತು ತಾನೆ? ನೀವು ಬೆಂಗಳೂರಿನಲ್ಲಿ, ನಿಮ್ಮ ಸಹೋದ್ಯೋಗಿ ಅಥವಾ ಸ್ನೇಹಿತ ಅಮೇರಿಕದಲ್ಲಿ, ಮತ್ತೊಬ್ಬ ಜಪಾನ್‌ನಲ್ಲಿ ಕುಳಿತುಕೊಂಡು ಅಂತರಜಾಲವನ್ನು ಬಳಸಿ ವಿಚಾರಗೋಷ್ಠಿ ಮಾಡುವ ಸವಲತ್ತುಗಳು ಹಲವಾರಿವೆ. ಹೆಚ್ಚಿನವು ಪಠ್ಯದ ಮೂಲಕ ಅಥವಾ ಮಾತನಾಡುವ ಮೂಲಕ, ಇನ್ನೂ ಕೆಲವು ಕ್ಯಾಮರಾ ಬಳಸಿ ವೀಡಿಯೋ ಚಾಟ್ ಮಾಡುವ ಸವಲತ್ತುಗಳನ್ನು ನೀಡುತ್ತವೆ. ನೀವು ಯಾವುದೋ ವಿಷಯದ ಬಗ್ಗೆ ಚರ್ಚಿಸುವಾಗ ಚಿತ್ರಗಳ ಮೂಲಕ, ಗೆರೆಗಳ ಮೂಲಕ ಒಬ್ಬರಿಗೊಬ್ಬರಿಗೆ ವಿವರಿಸಬೇಕಾದಾಗ ಏನು ಮಾಡುತ್ತೀರಿ? ಆಗ ನಿಮ್ಮ ಸಹಾಯಕ್ಕೆ ಬರುವುದು ಅಂತರಜಾಲ ಮೂಲಕ ಸಹಯೋಗಿ ಬಳಕೆ ಮಾಡಬಹುದಾದ ಬಿಳಿಹಲಗೆ. ಅಂತಹ ಒಂದು ಉಚಿತ ಸೌಲಭ್ಯ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.dabbleboard.com. ಇದರಲ್ಲಿ ಉಚಿತ ಮತ್ತು ವಾಣಿಜ್ಯಕ ಎಂಬ ಎರಡು ಆವೃತ್ತಿಗಳಿವೆ.

ಡೌನ್‌ಲೋಡ್

ಪದಬಂಧ ರಚಿಸಿ

ಪದಬಂಧ ಯಾರಿಗೆ ಗೊತ್ತಿಲ್ಲ? ಎಲ್ಲ ಪತ್ರಿಕೆ ಮ್ಯಾಗಝೀನ್‌ಗಳಲ್ಲಿ ಪದಬಂಧ ಕಂಡುಬರುತ್ತದೆ. ಇವುಗಳನ್ನು ಬಿಡಿಸುವುದು ಒಳ್ಳೆಯ ಹವ್ಯಾಸ ಕೂಡ. ಇಂಗ್ಲಿಶ್ ಭಾಷೆಯಲ್ಲಿ ಪದಬಂಧ ರಚಿಸಬೇಕೇ? ಅಂದರೆ ಹಲವು ಸುಳಿವುಗಳನ್ನು ನೀಡಬೇಕಾಗಿದೆ, ಅವುಗಳಲ್ಲಿ ಅಡ್ಡ ಮತ್ತು ನೀಟ ಯಾವುದು, ಉತ್ತರದ ಪದದಲ್ಲಿ ಎಷ್ಟು ಅಕ್ಷರಗಳಿವೆ, ಇತ್ಯಾದಿ ಮಾಹಿತಿ ನೀಡಿ ಅದಕ್ಕೆ ಸರಿಹೊಂದುವ ಪದಬಂದ ರಚಿಸಬೇಕಾಗಿದೆ. ಇದು ಅಷ್ಟು ಸುಲಭವಲ್ಲ. ತುಂಬ ಕಸರತ್ತು ಮಾಡಬೇಕಾದ ಕೆಲಸ. ಆದರೆ ನಿಮ್ಮಲ್ಲಿ EclipseCrossword ಇದ್ದರೆ ಸುಲಭದಲ್ಲಿ ಇಂಗ್ಲಿಶ್ ಭಾಷೆಯ ಪದಬಂಧ ರಚಿಸಬಹುದು. ಈ ಉಚಿತ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿನೀಡಬೇಕಾದ ಜಾಲತಾಣ www.eclipsecrossword.com. ಕನ್ನಡದಲ್ಲಿ ಪದಬಂಧ ರಚಿಸುವ ತಂತ್ರಾಂಶವನ್ನು ಯಾರೂ ತಯಾರಿಸಿದಂತಿಲ್ಲ.  

e - ಸುದ್ದಿ

ಗೂಗಲ್ ಲಾಬ್ ಅವಸಾನ

ಗೂಗಲ್‌ನವರು ಹಲವು ಉಚಿತ ಸಲತ್ತುಗಳನ್ನು ನೀಡಿದ್ದಾರೆ. ಅವುಗಳಲ್ಲಿ ಹೆಚ್ಚಿನವುಗಳು ಅವರ ಪ್ರಯೋಗಶಾಲೆಯಿಂದ ಬಂದವುಗಳು. ಇವುಗಳನ್ನು www.googlelabs.com ಜಾಲತಾಣದಲ್ಲಿ ಉಚಿತವಾಗಿ ನೀಡಿದ್ದಾರೆ. ಅವುಗಳನ್ನು ಹಲವು ವಿಧಗಳಲ್ಲಿ ಬಳಸಬಹುದು -ಜಾಲತಾಣದಲ್ಲಿಯೇ, ಡೌನ್‌ಲೋಡ್ ಮಾಡಿಕೊಂಡು, ನಮ್ಮ ಪ್ರೋಗ್ರಾಮ್‌ನಲ್ಲಿ, ಇತ್ಯಾದಿ. ಈ ಎಲ್ಲ ಸವಲತ್ತುಗಳು ಸದ್ಯದಲ್ಲಿಯೇ ಅಲಭ್ಯವಾಗಲಿವೆ. ಗೂಗಲ್ ಲಾಬ್ ಅನ್ನು ಸದ್ಯದಲ್ಲಿಯೇ ಮುಚ್ಚುವುದಾಗಿ ಗೂಗಲ್ ಹೇಳಿಕೆ ನೀಡಿದೆ. ಬಳಕೆದಾರರು ಈಗಲೇ ಅಗತ್ಯವಿರುವವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಒಳಿತು.  
 
e- ಪದ

ಕಲಿಕಾರಂಜನೆ (edutainment) - ಗಣಕಾಧಾರಿತ ಶಿಕ್ಷಣದಲ್ಲಿ ರೂಢಿಯಲ್ಲಿರುವ ಪದ. ಇದು education (ಕಲಿಕೆ) ಮತ್ತು entertainment (ಮನರಂಜನೆ) ಎಂಬ ಪದಗಳ ಸಂಕ್ಷಿಪ್ತ ರೂಪ. ಕಲಿಕೆ ಮತ್ತು ಮನರಂಜನೆಯನ್ನು ಜೊತೆ ಜೊತೆಗೆ ನೀಡುವುದೇ ಇದರ ವಿಶೇಷತೆ. ಶಿಕ್ಷಣವು ಮನರಂಜನಾತ್ಮಕವಾಗಿರಲು ಇದು ಸಹಾಯ ಮಾಡುತ್ತದೆ. ಬಹುಮಾಧ್ಯಮ ಅರ್ಥಾತ್ ಪಠ್ಯ, ಚಿತ್ರ, ಧ್ವನಿ, ಚಲನಚಿತ್ರ, ಅನಿಮೇಶನ್ ಇತ್ಯಾದಿಗಳ ಬಳಕೆ ಇಲ್ಲಿ ಆಗುತ್ತದೆ.

e - ಸಲಹೆ

ಮೈಸೂರಿನ ಆದರ್ಶ ಭಾರದ್ವಾಜರ ಪ್ರಶ್ನೆ: ನನ್ನ ಇಂಟರ್‌ನೆಟ್ ಸಂಪರ್ಕ ತುಂಬ ನಿಧಾನವಾಗಿದೆ. ಡೌನ್‌ಲೋಡ್ ಮಾಡಲು ತುಂಬ ಸಮಯ ಹಿಡಿಯುತ್ತದೆ. ಡೌನ್‌ಲೋಡ್ ವೇಗ ಹೆಚ್ಚಿಸಲು ಯಾವುದಾದರು ತಂತ್ರಾಂಶ ಇದೆಯೇ?
ಉ: ಇದೆ. ನೀವು  www.speedbit.com/dap ಜಾಲತಾಣದಿಂದ Download Accelerator ತಂತ್ರಾಂಶವನ್ನು ಡೌನ್‌ಲೋಡ್ ಮಾಡಿ ಬಳಸಬಹುದು.

ಕಂಪ್ಯೂತರ್ಲೆ

ಗಣಕ (ತ)ಗಾದೆ:
  • ಪೆನ್ನಿಗೊಂದು ಕಾಲ ಕೀಬೋರ್ಡಿಗೊಂದು ಕಾಲ.
  • ಈಗೀಗ ಜನರು ಪೆನ್ನಿಗಿಂತ ಕೀಬೋರ್ಡನ್ನೇ ಜಾಸ್ತಿ ಬಳಸುತ್ತಿದ್ದಾರೆ ಯಾಕೆಂದರೆ ಪೆನ್ನಿನಲ್ಲಿ backspace ಇಲ್ಲ.

ಮಂಗಳವಾರ, ಜುಲೈ 19, 2011

ಗಣಕಿಂಡಿ - ೧೧೩ (ಜುಲೈ ೧೮, ೨೦೧೧)

ಅಂತರಜಾಲಾಡಿ

ಯಾವುದು ಹೇಗೆ?

ಕಾರಿನ ಶಕ್ತಿಚಾಲಿತ ಸ್ಟಿಯರಿಂಗ್ ಹೇಗೆ ಕೆಲಸ ಮಾಡುತ್ತದೆ? ದೂರದರ್ಶಕ ಮತ್ತು ಸೂಕ್ಷ್ಮದರ್ಶಕಗಳು ಹೇಗೆ ಕೆಲಸ ಮಾಡುತ್ತವೆ? ಹೀಗೆ ದಿನನಿತ್ಯ ನಾವು ಕಾಣುವ, ಕೇಳುವ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಕುತೂಹಲ ಕೆಲವರಿಗೆ ಇರುತ್ತದೆ. ಮಕ್ಕಳ ಮಟ್ಟಿಗಂತೂ ಇದು ಸತ್ಯ. ಮಕ್ಕಳು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡುತ್ತಿದ್ದೀರಾ? ಅಥವಾ ಎಲ್ಲ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೂ ಇದೆಯೇ? ಹಾಗಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣ www.howstuffworks.com. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಹೀಗೆ ವಿಜ್ಞಾನದ ಹಲವು ವಿಭಾಗಗಳು, ತಂತ್ರಜ್ಞಾನದ ಹಲವು ವಿಭಾಗಗಳು, ಖಗೋಳಶಾಸ್ತ್ರ - ಹೀಗೆ ಎಲ್ಲ ವಿಭಾಗಗಳು ಇಲ್ಲಿವೆ. ಇದುತನಕ ವಿಜ್ಞಾನಕ್ಕೆ ವಿವರಿಸಲು ಅಸಾಧ್ಯವಾದ ಕೆಲವು ಕೌತುಕಗಳೂ ಇಲ್ಲಿವೆ. ಯಂತ್ರಗಳು ಕೆಲಸ ಮಾಡುವ ವಿಧಾನವನ್ನು ವಿವರಿಸುವ ಚಿತ್ರಸಂಚಲನೆಗಳು (ಅನಿಮೇಶನ್) ಖಂಡಿತ ನೋಡಲೇಬೇಕಾದವುಗಳು. 

ಡೌನ್‌ಲೋಡ್

ಧ್ವನಿ ತಂತ್ರಜ್ಞರಾಗಿ

ನಿಮ್ಮ ಗಣಕದಲ್ಲೇ ಒಂದು ಅತ್ಯಂತ ಶಕ್ತಿಶಾಲಿಯದ ಪರಿಣತರೂ ಮೆಚ್ಚುವಂತಹ ಧ್ವನಿ ಸ್ಟುಡಿಯೋ ಸ್ಥಾಪಿಸಬೇಕೇ? ಹಾಗಿದ್ದರೆ ನಿಮಗೆ ಬೇಕು DarkWave Studio. ಇದು ಸಂಪೂರ್ಣ ಉಚಿತ ಮತ್ತು ಮುಕ್ತ ತಂತ್ರಾಂಶ. ಹಲವು ಟ್ರ್ಯಾಕ್‌ಗಳಲ್ಲಿ ಹಲವು ಬೇರೆ ಬೇರೆ ಸಂಗೀತ ಉಪಕರಣಗಳನ್ನು ಮತ್ತು ಗಾಯಕರ ಧ್ವನಿಗಳನ್ನು ಧ್ವನಿಮುದ್ರಣ ಮಾಡಿಕೊಂಡು ನಂತರ ಎಲ್ಲವನ್ನು ವ್ಯವಸ್ಥಿತವಾಗಿ ಒಟ್ಟು ಮಾಡಿ ಉತ್ತಮ ಸಂಗೀತ ತಯಾರಿಸಲು ಇದು ಅನುವು ಮಾಡಿಕೊಡುತ್ತದೆ. ಹಲವು ಸಂಗೀತ ಪರಿಣಾಮ ಮತ್ತು ಬದಲಾವಣೆಗಳನ್ನೂ ಇದು ಒದಗಿಸಿಕೊಡುತ್ತದೆ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/p2knZL.   

e - ಸುದ್ದಿ

ಸೂಪರ್ನೋವಾ ಸ್ಫೋಟ ಪತ್ತೆಗೆ ಟ್ವಿಟ್ಟರ್

ಇತ್ತೀಚೆಗೆ ಟ್ವಿಟ್ಟರ್ ಬಳಕೆ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸುತ್ತಿದೆ. ಟ್ವಿಟ್ಟರ್‌ನಲ್ಲಿ ಒಬ್ಬ ಚಿಕ್ಕ ಸಂದೇಶ ದಾಖಲಿಸುತ್ತಾನೆ. ಇನ್ನೊಬ್ಬ ಅದನ್ನು ಹಿಂಬಾಲಿಸುತ್ತಾನೆ. ಅದು ಹಾಗೆ ಬೆಳೆಯುತ್ತದೆ. ಅದಕ್ಕೆ ಒಬ್ಬ ಉತ್ತರಿಸುತ್ತಾನೆ, ಮತ್ತೊಬ್ಬ ಅದರ ಮೇಲೆ ಕ್ರಮ ಕೈಗೊಳ್ಳುತ್ತಾನೆ -ಹೀಗೆ ಸಾಗುತ್ತದೆ. ಅಮೇರಿಕಾದಲ್ಲೊಬ್ಬ ಹವ್ಯಾಸಿ ಖಗೋಳಶಾಸ್ತ್ರಜ್ಞರು ಎಂ೫೧ ಗ್ಯಾಲಕ್ಸಿಯಲ್ಲಿ ಸೂಪರ್ನೋವ ಸ್ಫೋಟವಾಗುತ್ತಿರುವುದನ್ನು ಗಮನಿಸಿದರು. ಕೂಡಲೆ ಅವರು ಅದರ ಬಗ್ಗೆ ಟ್ವೀಟ್ ಮಾಡಿದರು. ಅದನ್ನು ಹವಾಯಿ ದ್ವೀಪದಲ್ಲಿರುವ ಪ್ರಪಂಚದ ಅತಿದೊಡ್ಡ ದೂರದರ್ಶಕವನ್ನು ನಿಯಂತ್ರಿಸುವ ವಿಜ್ಞಾನಿ ಓದಿದರು. ಕೂಡಲೆ ತಮ್ಮ ದೂರದರ್ಶಕವನ್ನು ಸೂಪರ್ನೋವ ಸ್ಫೋಟದ ದಿಕ್ಕಿಗೆ ತಿರುಗಿಸಿದರು. ಹೀಗೆ ಸೂಪರ್ನೋವ ಸ್ಫೋಟವನ್ನು ದಾಖಲಿಸಲು ಟ್ವಿಟ್ಟರ್ ಸಹಾಯ ಮಾಡಿದಂತಾಯಿತು.
 
e- ಪದ

ಚಿತ್ರಸಂಚಲನೆ (ಅನಿಮೇಶನ್ - animation) - ಒಂದಾದ ಮೇಲೆ ಒಂದು ಚಿತ್ರಗಳನ್ನು ವೇಗವಾಗಿ ಪರದೆಯ ಮೇಲೆ ಮೂಡಿಸಿ ಚಲನೆಯ ಭಾವನೆಯನ್ನು ಮೂಡಿಸುವ ವಿಧಾನ. ಟಾಮ್ ಮತ್ತು ಜೆರ್ರಿ ಕಾರ್ಟೂನ್ ನೋಡದವರಾರು? ಇದನ್ನು ಚಿತ್ರಸಂಚಲನೆಯ ವಿಧಾನದಿಂದ ತಯಾರಿಸಿದ್ದಾರೆ. ಹಿಂದಿನ ಕಾಲದಲ್ಲಿ ಎಲ್ಲ ಚಿತ್ರಗಳನ್ನು ಮನುಷ್ಯರೇ ಬೇರೆ ಬೇರೆ ಹಾಳೆಗಳಲ್ಲಿ ಚಿತ್ರಿಸಿ ಚಿತ್ರಸಂಚಲನೆ ತಯಾರು ಮಾಡುತ್ತಿದ್ದರು. ಈಗ ಗಣಕ ಮತ್ತು ಸೂಕ್ತ ತಂತ್ರಾಂಶ ಬಳಸುತ್ತಾರೆ.

e - ಸಲಹೆ


ಕೆಂಗೇರಿಯ ಅರುಣ ಅವರ ಪ್ರಶ್ನೆ: ನಾನು ನಡೆಸುವ ತರಗತಿಯನ್ನು ಬೇರೆ ಬೇರೆ ಸ್ಥಳಗಳಿಂದ ಅಂತರಜಾಲ ಮೂಲಕ ನೋಡಲು ಅನುವು ಮಾಡಿಕೊಡುವ ಜಾಲತಾಣ ಅಥವಾ ತಂತ್ರಾಂಶ ಯಾವುದಾದರೂ ಇದೆಯೇ?
ಉ: ಇವುಗಳನ್ನು ನೋಡಿ - www.digitalsamba.com, www.livestream.com, www.ustream.tv

ಕಂಪ್ಯೂತರ್ಲೆ

ಉದ್ಯೋಗದ ಸಂದರ್ಶನಕ್ಕೆ ಅಭ್ಯರ್ಥಿಯಾಗಿ ಬಂದ ಕೋಲ್ಯನಿಗೆ ಪ್ರಶ್ನೆ ಕೇಳಲಾಯಿತು -“ನಿನಗೆ ಕೆಲಸ ಯಾಕೆ ಬೇಕು?”. ಕೋಲ್ಯ ಉತ್ತರಿಸಿದ - “ಫೇಸ್‌ಬುಕ್‌ನಲ್ಲಿ status update ಮಾಡಲು”.

ಸೋಮವಾರ, ಜುಲೈ 11, 2011

ಗಣಕಿಂಡಿ - ೧೧೨ (ಜುಲೈ ೧೧, ೨೦೧೧)

ಅಂತರಜಾಲಾಡಿ

ನವಪದವೀಧರರಿಗೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಪಡೆದುಕೊಳ್ಳುವುದು ಎಲ್ಲ ನವಪದವೀಧರರ ಆಸೆ. ಅದರಲ್ಲೂ ಇಂಜಿನಿಯರಿಂಗ್ ಪದವೀಧರರ ಮಟ್ಟಿಗೆ ಇದು ಅಪ್ಪಟ ಸತ್ಯ. ಹೆಚ್ಚಿನ ಕಂಪೆನಿಗಳು ಇಂಜಿನಿಯರಿಂಗ್ ಕಾಲೇಜುಗಳಿಗೇ ನೇರವಾಗಿ ಕ್ಯಾಂಪಸ್‌ನಲ್ಲೇ ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ. ಆದರೆ ಎಲ್ಲ ಕಾಲೇಜುಗಳಿಗೆ ಎಲ್ಲ ಕಂಪೆನಿಗಳು ಹೋಗುವುದಿಲ್ಲ. ಎಲ್ಲರಿಗೂ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲಸ ಸಿಗುವುದೂ ಇಲ್ಲ. ಬಿಸಿಎ, ಬಿಎಸ್‌ಸಿ, ಎಂಸಿಎ ಕಾಲೇಜುಗಳಿಗೂ ಹೋಗುವ ಕಂಪೆನಿಗಳ ಸಂಖ್ಯೆ ತುಂಬ ಕಡಿಮೆ. ಹಾಗಿದ್ದರೆ ಈ ಎಲ್ಲ ಪದವೀಧರರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೇ ಕೆಲಸ ಪಡೆಯಬೇಕಿದ್ದರೆ ಏನು ಮಾಡಬೇಕು? ಇಂತಹವರಿಗಾಗಿಯೇ ಒಂದೆರಡು ಜಾಲತಾಣಗಳಿವೆ. ಅಲ್ಲಿ ನೋಂದಾಯಿಸಿಕೊಂಡು ನೇಮಕಾತಿ ಪರೀಕ್ಷೆ ತೆಗೆದುಕೊಳ್ಳಬೇಕು. ಉತ್ತಮ ಅಂಕ ಬಂದರೆ ಆ ಜಾಲತಾಣದಲ್ಲಿ ನೋಂದಾಯಗೊಂಡ ಕಂಪೆನಿಗಳು ಈ ಪದವೀಧರರನ್ನು ಸಂದರ್ಶನ ನಡೆಸಿ ನೇಮಕಾತಿ ಮಾಡಿಕೊಳ್ಳುತ್ತವೆ. ಈ ಜಾಲತಾಣಗಳು www.myamcat.com ಮತ್ತು www.elitmus.com.

ಡೌನ್‌ಲೋಡ್

ರಾಸಾಯನಿಕ ತೂಕ

ಎಲ್ಲ ರಾಸಾಯನಿಕ ವಸ್ತುಗಳಿಗೂ ಒಂದು ಸೂತ್ರವಿದೆ. ಈ ಸೂತ್ರದ ಪ್ರಕಾರ ಅದರ ತೂಕ ನಿರ್ಧಾರವಾಗುತ್ತದೆ. ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಈ ರಾಸಾಯನಿಕ ತೂಕ ಲೆಕ್ಕಹಾಕುವುದು ಒಂದು ತಲೆನೋವಿನ ಕೆಲಸ. ಉದಾಹರಣೆಗೆ ಇಂಗಾಲದ ಡೈಆಕ್ಸೈಡಿನ ತೂಕ ೪೪.೦೧. ಪ್ರತಿ ಅಣುವಿನಲ್ಲೂ ಇರುವ ಪರಮಾಣುಗಳ ತೂಕ ಒಟ್ಟು ಮಾಡಿದರೆ ಅಣುವಿನ ತೂಕ ಸಿಗುತ್ತದೆ. ಲೆಕ್ಕಹಾಕಬೇಕಾದರೆ ಎಲ್ಲ ಮೂಲವಸ್ತುಗಳ ಪರಮಾಣು ತೂಕದ ಕೋಷ್ಟಕ ಕೈಯಲ್ಲಿರಬೇಕು. ಇದಕ್ಕೆಲ್ಲ ಒಂದು ಸುಲಭ ಪರಿಹಾರ FormulaWeight2011 ಎಂಬ ಉಚಿತ ತಂತ್ರಾಂಶ. ಈ ತಂತ್ರಾಂಶ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/rh1kFG.
    
e - ಸುದ್ದಿ

ಫೇಸ್‌ಬುಕ್ ಸಹಾಯಕ್ಕೆ

ಗಂಡ ಇನ್ನೊಂದು ಹುಡುಗಿಯ ಸಹವಾಸ ಮಾಡುವುದನ್ನು, ಮಾಡಬಯಸುವುದನ್ನು ಫೇಸ್‌ಬುಕ್ ಮೂಲಕ ಪತ್ತೆಹಚ್ಚಿದ ಹಲವು ಘಟನೆಗಳು ವಿದೇಶದಿಂದ ವರದಿಯಾಗಿವೆ. ಆ ಬಗ್ಗೆ ಇದೇ ಅಂಕಣದಲ್ಲಿ ಪ್ರಸ್ತಾವಿಸಿಯೂ ಆಗಿತ್ತು. ಈಗ ಅಂತಹುದೇ ಘಟನೆ ನಮ್ಮದೇ ದೇಶದ ಕೊಯಂಬತ್ತೂರಿನಿಂದ ವರದಿಯಾಗಿದೆ. ಮಹಾಲಕ್ಷ್ಮಿ ಎಂಬಾಕೆ ಕಾರ್ತಿಕೇಯನ್ ಎಂಬಾತನನ್ನು ಮದುವೆಯಾಗಿದ್ದಳು. ಒಂದು ಮಗುವಾದ ನಂತರ ಅವರ ನಡುವೆ ವಿರಸ ಬಂದು ಬೇರೆಬೇರೆಯಾಗಿ ಜೀವಿಸುತ್ತಿದ್ದರು. ಆತ ಎಲ್ಲಿದ್ದಾನೆ ಎಂದು ಆಕೆಗೆ ಸುಳಿವಿರಲಿಲ್ಲ. ಆತ ಗುಟ್ಟಾಗಿ ಇನ್ನೊಂದು ವಿವಾಹ ಮಾಡಿಕೊಳ್ಳಲು ಏರ್ಪಾಡು ನಡೆಸಿದ್ದ. ಆಕೆಗೆ ಅದರ ಸುಳಿವು ಸಿಕ್ಕಿತು. ಇತರೆ ಹೆಂಗಸರು ಮಾಡಿದಂತೆ ಆಕೆಯೂ ಹುಡುಗಿಯ ಹೆಸರಿನಲ್ಲಿ ಖಾತೆ ತೆರೆದು ಆತನನನ್ನು ಖೆಡ್ಡಾಕ್ಕೆ ಬೀಳಿಸಿದಳು. ಆತ ಇನ್ನೊಂದು ಮದುವೆಯಾಗಿ ದುಬಾಯಿಗೆ ಹಾರುವ ಯೋಜನೆ ಹಾಕಿದ್ದ. ಎಲ್ಲ ಮಣ್ಣುಪಾಲಾಯಿತು.
 
e- ಪದ

ಮ್ಯಾಕ್ ವಿಳಾಸ (MAC address) - ಇದು Media Access Control address  ಎಂಬುದರ ಕಿರುರೂಪ. ಒಂದು ಗಣಕಜಾಲದ ಪ್ರತಿ ಸಂಧಿಜಾಗವನ್ನೂ ನಿರೂಪಿಸುವ ವಿಳಾಸ. ಸಾಮಾನ್ಯವಾಗಿ ಗಣಕವನ್ನು ಗಣಕಜಾಲಕ್ಕೆ  ಸೇರಿಸಲು ಅಡಾಪ್ಟರ್ ಬಳಸುತ್ತಾರೆ. ಈ ಅಡಾಪ್ಟರ್ ಮೂಲಕ ಕೇಬಲ್ ಮೂಲಕ ಗಣಕಜಾಲಕ್ಕೆ ಸಂಪರ್ಕ ಮಾಡಿಕೊಳ್ಳಬಹುದು. ನಿಸ್ತಂತು (ವಯರ್‌ಲೆಸ್) ವಿಧಾನದ ಮೂಲಕವೂ ಜಾಲಕ್ಕೆ ಸೇರಿಕೊಳ್ಳಬಹುದು. ಅದಕ್ಕೂ ಒಂದು ಅಡಾಪ್ಟರ್ ಇರುತ್ತದೆ. ಈ ಅಡಾಪ್ಟರ್‌ನ ವಿಳಾಸವೇ ಮ್ಯಾಕ್ ವಿಳಾಸ. ನಿಸ್ತಂತು ವಿಧಾನದಲ್ಲಿ ಜಾಲಕ್ಕೆ ಸೇರಿಕೊಳ್ಳಬೇಕಿದ್ದಲ್ಲಿ ಹಲವು ಕಂಪೆನಿಗಳಲ್ಲಿ ಈ ಮ್ಯಾಕ್ ವಿಳಾಸ ಸರ್ವರ್‌ನಲ್ಲಿ ನಮೂದಾಗಿದ್ದರೆ ಮಾತ್ರ ಸೇರಿಕೊಳ್ಳಬಹುದು ಎಂಬ ನಿಯಮವನ್ನು ರೂಪಿಸಿರುತ್ತಾರೆ.

e - ಸಲಹೆ

ಮಂಗಳೂರಿನ ರವಿ ಅವರ ಪ್ರಶ್ನೆ: ಮೊಬೈಲ್ನಲ್ಲಿ ನುಡಿ ಅಥವಾ ಬರಹಗಳನ್ನು ಟೈಪ್ ಮಾಡಿ ಆನಂತರ ಅದನ್ನು ಗಣಕಯಂತ್ರಕ್ಕೆ ವರ್ಗಾಯಿಸಿ ನುಡಿ ಕಡತವನ್ನು ಮಾಡಲು ಸಾಧ್ಯವೇ? ಯಾವ ಮೊಬೈಲ್ನಲ್ಲಿ ಈ ವ್ಯವಸ್ಥೆ ಇದೆ? ಕನ್ನಡದಲ್ಲಿ ಇದು ಸಾಧ್ಯವಾದರೆ ಕೆಲವು ಬರಹಗಾರರಿಗೆ ಅನುಕೂಲವಾಗುತ್ತದೆ. ದಯವಿಟ್ಟು ಈ ಬಗ್ಗೆ ಮಾಹಿತಿ ಕೊಡಿ.
ಉ: ಸದ್ಯಕ್ಕೆ ಅಂತಹ ಸವಲತ್ತು ಇಲ್ಲ.

ಕಂಪ್ಯೂತರ್ಲೆ

ಜೀವನ ಫೇಸ್‌ಬುಕ್‌ನಂತೆ. ಎಲ್ಲರೂ ನಿಮ್ಮ ಕಷ್ಟವನ್ನು ಕೇಳಿಸಿಕೊಳ್ಳುತ್ತಾರೆ, ಅದನ್ನು ಇಷ್ಟಪಡುತ್ತಾರೆ, ಅದರ ಬಗ್ಗೆ ಕಮೆಂಟ್ ಮಾಡುತ್ತಾರೆ, ಆದರೆ ನಿಮ್ಮ ಕಷ್ಟವನ್ನು ಯಾರೂ ಪರಿಹರಿಸುವುದಿಲ್ಲ. ಯಾಕೆಂದರೆ ಎಲ್ಲರೂ ತಮ್ಮ ತಮ್ಮ ಸ್ಥಿತಿಯನ್ನು ಪೇಸ್‌ಬುಕ್‌ನಲ್ಲಿ ದಾಖಲಿಸುವದರಲ್ಲಿ ಬ್ಯುಸಿ ಆಗಿದ್ದಾರೆ.

ಸೋಮವಾರ, ಜುಲೈ 4, 2011

ಗಣಕಿಂಡಿ - ೧೧೧ (ಜುಲೈ ೦೪, ೨೦೧೧)

ಅಂತರಜಾಲಾಡಿ

ಜನಲೋಕಪಾಲ ವಿಧೇಯಕ ತನ್ನಿ


ಎಲ್ಲೆಲ್ಲೂ ತುಂಬಿರುವ ಭ್ರಷ್ಟಾಚಾರದಿಂದ ರೋಸಿಹೋಗಿದ್ದೀರಿ ತಾನೆ? ಭ್ರಷ್ಟಾಚಾರ ವಿರುದ್ಧ ಅಣ್ಣಹಜಾರೆ ಮಾಡುತ್ತಿರುವ ಚಳವಳಿಯೂ ಗೊತ್ತು ತಾನೆ? ಈ ಚಳವಳಿಯಲ್ಲಿ ನೀವೂ ಧುಮುಕಲು ಸಮಯವಿಲ್ಲವೇ? ಅಡ್ಡಿಯಿಲ್ಲ. ಜನಲೋಕಪಾಲ ವಿಧೇಯಕ ತನ್ನಿ ಎಂದು ಕನಿಷ್ಠ ನಿಮ್ಮ ಸಂಸದರಿಗೆ ಒತ್ತಾಯಿಸಬಹುದಲ್ಲವೇ? ಹೌದು, ಆದರೆ ಹೇಗೆ ಎನ್ನುತ್ತೀರಾ? nocorruption.in ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮ ಸಂಸದರ ಇಮೈಲ್ ವಿಳಾಸ ಪತ್ತೆಹಚ್ಚಿ. ಅದೇ ಜಾಲತಾಣದಲ್ಲಿ ನೀಡಿರುವ ಪತ್ರದ ಮಾದರಿಯಲ್ಲಿ ನಿಮ್ಮ ಸಂಸದರಿಗೆ ಇಮೈಲ್ ಮಾಡಿ. ಕೆಲವು ಸಂಸದರ ಇಮೈಲ್ ವಿಳಾಸದಲ್ಲಿ ತಪ್ಪು ಇರಬಹುದು. ಸರಿಯಾದ ವಿಳಾಸ ತಿಳಿದಿದ್ದಲ್ಲಿ ಅದನ್ನು ತಿದ್ದಲೂ ನೀವು ನೆರವಾಗಬಹುದು.


ಡೌನ್‌ಲೋಡ್

ಫಾಂಟ್ ಪಟ್ಟಿ

ನಿಮ್ಮ ಗಣಕದಲ್ಲಿ ನೂರಾರು ಅಥವಾ ಇನ್ನೂ ಹೆಚ್ಚು ಫಾಂಟ್‌ಗಳಿರಬಹುದು. ಸಾಮಾನ್ಯವಾಗಿ ಡಿಟಿಪಿ ಮಾಡುವವರ ಗಣಕಗಳಲ್ಲಿ ಇದು ಸಹಜ. ಆದರೆ ಬೇರೆಬೇರೆ ಫಾಂಟ್‌ಗಳಲ್ಲಿ ಪಠ್ಯ ಹೇಗೆ ಕಾಣುತ್ತದೆ ಎಂದು ತಿಳಿಯಬೇಕಲ್ಲ? ವಿಂಡೋಸ್‌ನಲ್ಲಿಯೇ ಇರುವ ಸವಲತ್ತು ಅಷ್ಟೇನೂ ಚೆನ್ನಾಗಿಲ್ಲ. ಅದರಲ್ಲೂ ಕನ್ನಡ ಯುನಿಕೋಡ್ ಬೆಂಬಲಿತ ಓಪನ್‌ಟೈಪ್ ಫಾಂಟ್‌ಗಳ ಹೆಸರು ಮಾತ್ರ ತೋರಿಸುತ್ತದೆ. ಅದರಲ್ಲಿ ಕನ್ನಡ ಯುನಿಕೋಡ್ ಪಠ್ಯ ಹೇಗೆ ಕಾಣುತ್ತದೆ ಎಂದು ತೋರಿಸುವುದಿಲ್ಲ. ಗಣಕದಲ್ಲಿರುವ ಎಲ್ಲ ಫಾಂಟ್‌ಗಳನ್ನು ಹೆಸರು ಮತ್ತು ಅದರಲ್ಲಿ ಪಠ್ಯ ಮೂಡಿಬರುವ ರೀತಿಯನ್ನು ತೋರಿಸುವ ತಂತ್ರಾಂಶ FontViewOK. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ bit.ly/kidTA7. ಇದು ಕನ್ನಡ ಯುನಿಕೋಡ್ ಪಠ್ಯವನ್ನು ಕೂಡ ತೋರಿಸುತ್ತದೆ.

e - ಸುದ್ದಿ

ಕೆಲಸ ಕಳಕೊಂಡ ಉದ್ಯೋಗಿ...

ಅಮೇರಿಕದ ಬಾಲ್ಟಿಮೋರ್ ನಗರದ ಕಂಪೆನಿಯೊಂದರಲ್ಲಿ ಉದ್ಯೋಗಿಯೊಬ್ಬನನ್ನು ೨೦೦೯ರಲ್ಲಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಆದರೆ ಆತ ಮಾಮೂಲಿ ಉದ್ಯೋಗಿಯಾಗಿರಲಿಲ್ಲ. ಕಂಪೆನಿಯ ಗಣಕಗಳ ಉಸ್ತುವಾರಿ ನೋಡಿಕೊಳ್ಳುವವನಾಗಿದ್ದ. ಅಂದರೆ ಕಂಪೆನಿಯ ಗಣಕಜಾಲಕ್ಕೆ ಹೇಗೆ ಪ್ರವೇಶಿಸುವುದೆಂದು ಆತನಿಗೆ ತಿಳಿದಿತ್ತು. ಕೆಲಸದಿಂದ ತೆಗೆದುಹಾಕಿದ್ದ ಕಂಪೆನಿಯ ಮಖ್ಯಸ್ಥರ ಮೇಲೆ ಸೇಡು ತೀರಿಸಿಕೊಳ್ಳಲು ಆತ ಸೂಕ್ತ ಸಮಯಾವಕಾಶಕ್ಕೆ ಕಾದಿದ್ದ. ಒಮ್ಮೆ ಕಂಪೆನಿಯ ಒಂದು ಬಹು ಮುಖ್ಯ ಸಭೆಯಲ್ಲಿ ಕಂಪೆನಿಯ ಮುಖ್ಯಸ್ಥ ಪವರ್‌ಪಾಯಿಂಟ್ ಪ್ರೆಸೆಂಟೇಶನ್ ಮಾಡುತ್ತಿದ್ದ. ಅದೇ ಸಮಯಕ್ಕೆ ಕಾದಿದ್ದ ಈತ ದೂರನಿಯಂತ್ರಣದಿಂದ ಮುಖ್ಯಸ್ಥನ ಪ್ರೆಸೆಂಟೇಶನ್‌ನ ಸ್ಲೈಡ್‌ಗಳ ಮಧ್ಯೆ ಅಶ್ಲೀಲ ಸ್ಲೈಡ್‌ಗಳನ್ನು ತುರುಕಿಸಿದ್ದ. ಎಲ್ಲರ ಮುಂದೆ ಪ್ರೆಸೆಂಟೇಶನ್ ಮಾಡುವಾಗ ಮುಖ್ಯಸ್ಥನ ಇರಿಸುಮುರಿಸು ಹೇಗಾಗಿರಬೇಕು? ಈತ ಈಗ ಕಾರಾಗೃಹದಲ್ಲಿದ್ದಾನೆ.
 
e- ಪದ

ಅಂಕೀಯ ಪ್ರಮಾಣಪತ್ರ (digital certificate) - ವಿದ್ಯುನ್ಮಾನ ದಾಖಲೆ (ದಸ್ತಾವೇಜು, ಇಮೈಲ್) ಕಳುಹಿಸುವಾಗ ಸುರಕ್ಷೆಗಾಗಿ ಲಗತ್ತಿಸುವ ವಿದ್ಯುನ್ಮಾನ ಪ್ರಮಾಣಪತ್ರ. ದಾಖಲೆ ಕಳುಹಿಸುತ್ತಿರುವವರು ನಿಜವಗಿಯೂ ಅದೇ ವ್ಯಕ್ತಿ ಎಂದು ತಿಳಿಸುವ ಗುರುತು ಚೀಟಿ ಎಂದೂ ಕರೆಯಬಹುದು. ಇದನ್ನು ಹಣ ಕೊಟ್ಟು ಕೊಂಡುಕೊಳ್ಳಬೇಕು. ದಾಖಲೆಯನ್ನು ಕಳುಹಿಸುವಾತ ತನ್ನ ವೈಯಕ್ತಿಕ ಕೀಲಿ ಬಳಸಿ ಗೂಢಲಿಪೀಕರಿಸಿ (encryption) ಕಳುಹಿಸುತ್ತಾನೆ. ಓದುವವರು ಅಂತರಜಾಲದ ಮೂಲಕ ಈ ಕೀಲಿಗೆ ಸರಿಹೊಂದುವ ಇನ್ನೊಂದು ಕೀಲಿಯನ್ನು ಪಡೆದು ತನ್ನ ಗಣಕದಲ್ಲಿ ಸ್ಥಾಪಿಸಿ ದಾಖಲೆಯನ್ನು ಓದಬಹುದು. ತೆರಿಗೆ ದಾಖಲೆಗಳನ್ನು ಅಂತರಜಾಲದ ಮೂಲಕ ನೀಡುವಾಗ ಲಕ್ಕಪತ್ರ ಪರಿಶೀಲಕರು ಇದೇ ವಿಧಾನವನ್ನು ಬಳಸುತ್ತಾರೆ. 

e - ಸಲಹೆ

ತುರುವೇಕೆರೆಯ ಉಷಾಶ್ರೀನಿವಾಸ್ ಅವರ ಪ್ರಶ್ನೆ: ನಾನು ವಿಂಡೋಸ್ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಂನಲ್ಲಿ ಆಫೀಸ್ ೨೦೦೭ ನಲ್ಲಿ ಗಣಿತದ ಸಮೀಕರಣಗಳನ್ನು ಟೈಪ್ ಮಾಡಿ ಅದನ್ನು ಪೇಜ್‌ಮೇಕರ್ ೭ ಗೆ ಕಾಪಿ ಮಾಡಲು ಸಾಧ್ಯವಾಗುತ್ತಿಲ್ಲ. ಪೇಜ್ ಮೇಕರ್ ೭ ನಲ್ಲಿ ಗಣಿತದ ಸಮೀಕರಣಗಳನ್ನು ಟೈಪ್ ಮಾಡಲು ಸಾಧ್ಯವಿಲ್ಲವೇ? ದಯಮಾಡಿ ತಿಳಿಸಿ. ಅಥವಾ ಆಫೀಸ್ ೨೦೦೭ನಿಂದ ಹೇಗೆ ಕಾಪಿ ಮಾಡಿಕೊಳ್ಳಬಹುದು ತಿಳಿಸಿ.
ಉ: ಪೇಜ್‌ಮೇಕರ್‌ಗೆ ಸಮೀಕರಣಗಳನ್ನು ಸೇರಿಸಲು ಒಂದು ಸವಲತ್ತು ಇದೆ. ಆದರೆ ಅದು ತುಂಬ ಕ್ಲಿಷ್ಟವಾಗಿದೆ ಹಾಗೂ ತುಂಬ ಕ್ಲಿಷ್ಟವಾದ ಸಮೀಕರಣಗಳನ್ನು ಅದರಲ್ಲಿ ರಚಿಸಲಾಗುವುದಿಲ್ಲ. ಒಂದು ಸರಳ ಉಪಾಯವೆಂದರೆ ನೀವು ವರ್ಡ್‌ನಲ್ಲಿ ಸಮೀಕರಣ ತಯಾರಿಸಿ ನಕಲು ಮಾಡಿಕೊಂಡು (Ctrl-c) ಅದನ್ನು ಯಾವುದಾದರೂ ಗ್ರಾಫಿಕ್ಸ್ ತಂತ್ರಾಂಶಕ್ಕೆ (ಉದಾ -ಫೋಟೋಶಾಪ್) ಅಂಟಿಸಿ (Ctrl-v) ನಂತರ ಅದನ್ನು .jpg ಆಗಿ ಉಳಿಸಿ. ಆ ಫೈಲನ್ನು ಪೇಜ್‌ಮೇಕರ್‌ನಲ್ಲಿ ಆಮದು ಮಾಡಿಕೊಂಡು ಬಳಸಬಹುದು.

ಕಂಪ್ಯೂತರ್ಲೆ

ಆಧುನಿಕ ಚಲನಚಿತ್ರ ಸಂಭಾಷಣೆ-
“ನನ್ನಲ್ಲಿ ಕೋಟಿಗಟ್ಟಳೆ ಹಣವಿದೆ, ಸ್ವಿಸ್ ಬ್ಯಾಂಕ್ ಇದೆ, ಎಂಜಲಿಗೆ ಕೈಯೊಡ್ಡುವ ಜನರಿದ್ದಾರೆ, ಮಾಧ್ಯಮದವರಿದ್ದಾರೆ, ಪೋಲೀಸರಿದ್ದಾರೆ, ಭಟ್ಟಂಗಿಗಳಿದ್ದಾರೆ. ನಿನ್ನಲ್ಲಿ ಏನಿದೆ?”
“ನನ್ನಲ್ಲಿ ಟ್ವಿಟ್ಟರ್ ಫೇಸ್‌ಬುಕ್ ಇದೆ”