ಸೋಮವಾರ, ಏಪ್ರಿಲ್ 30, 2012

ಗಣಕಿಂಡಿ - ೧೫೪ (ಎಪ್ರಿಲ್ ೩೦, ೨೦೧೨)

ಅಂತರಜಾಲಾಡಿ

ಮನೆ ಕಟ್ಟಿ ನೋಡು

ಮನೆ ಕಟ್ಟಿ ನೋಡು ಮದುವೆ ಮಾಡಿನೋಡು ಎಂಬುದೊಂದು ಹಳೆಯ ಗಾದೆ. ಈ ಗಾದೆ ಸುಮ್ಮನೆ ಹುಟ್ಟಿಕೊಂಡಿಲ್ಲ. ಮನೆ ಕಟ್ಟಿಸುವುದು ಅಷ್ಟು ಕಷ್ಟದ ಕೆಲಸ. ಕಟ್ಟಿಸಲು ಮೊದಲು ಅದರ ವಿನ್ಯಾಸ ಆಗಬೇಕು. ಯಾವ ನಮೂನೆಯ ವಿನ್ಯಾಸ ಮಾಡಿದರೂ ಎಲ್ಲ ಮಂದಿಗೆ ಹಿಡಿಸುವುದು ಕಷ್ಟ. ಗೋಡೆ ಎಲ್ಲಿರಬೇಕು, ಅಡುಗೆಮನೆ ಎಲ್ಲಿ, ಕೋಣೆಗಳ ಗಾತ್ರ ಎಷ್ಟೆಷ್ಟು, ಮುಂದೆ ಎಷ್ಟು ಜಾಗ ಇರಬೇಕು, ಹೀಗೆ ಎಲ್ಲ ವಿಷಯಗಳಲ್ಲೂ ಪ್ರತಿಯೊಬ್ಬರಿಗೂ ಅವರದೇ ಅಭಿಪ್ರಾಯ ಇರುತ್ತದೆ. ಅಂದರೆ ಎಲ್ಲರೂ ಸೇರಿ ಎಷ್ಟು ಸಾಧ್ಯವೋ ಅಷ್ಟು ವಿನ್ಯಾಸಗಳನ್ನು ತಯಾರಿಸಬೇಕು. ಹೀಗೆ ಮನೆಯ ವಿನ್ಯಾಸ ತಯಾರಿಸಲು ಸಹಾಯ ಮಾಡುವ ಜಾಲತಾಣ www.homestyler.com.

ಡೌನ್‌ಲೋಡ್

ಗೂಗ್ಲ್ ಡ್ರೈವ್

ಅಂತರಜಾಲಾಧಾರಿತ ಸಂಗ್ರಹ ಸೇವೆ ನೀಡುವ ಜಾಲತಾಣಗಳು ಹಲವಾರಿವೆ. ಈ ಪಟ್ಟಿಗೆ ಹೊಸ ಸೇರ್ಪಡೆ ಗೂಗ್ಲ್ ಡ್ರೈವ್. ಒಂದು ರಿತಿಯಲ್ಲಿ ನೋಡಿದರೆ ಇದು ಈ ಮೊದಲು ಕೂಡ, ಸ್ವಲ್ಪ ಬೇರೆ ಅವತಾರದಲ್ಲಿ ಬಳಕೆಯಲ್ಲಿತ್ತು. ಅದುವೇ ಗೂಗ್ಲ್ ಡಾಕ್ಸ್. ಈ ಗೂಗ್ಲ್ ಡ್ರೈವ್ ಬಳಸಬೇಕಿದ್ದಲ್ಲಿ ನೀವು drive.google.com ಜಾಲತಾಣಕ್ಕೆ ಭೇಟಿ ನೀಡಿ ಅದನ್ನು ಚಾಲನೆಗೊಳಿಸಬೇಕು. ಗೂಗ್ಲ್ (ಜಿಮೈಲ್) ಖಾತೆ ಇರುವುದು ಮುಖ್ಯ. ನಿಮ್ಮ ಕಡತಗಳನ್ನು ಅಂತರಜಾಲದಲ್ಲಿ ಸಂಗ್ರಹಿಸಲು, ಇತರರಿಗೆ ಹಂಚಲು, ಇನ್ನೊಂದು ಸೇವೆ ಈ ಮೂಲಕ ಲಭ್ಯ. ಗಣಕದಲ್ಲಿ ಬಳಸಲು ಬೇಕಾದ ತಂತ್ರಾಂಶ ಡೌನ್‌ಲೋಡ್ ಮಾಡಿಕೊಳ್ಳಲು ಇದೇ ಜಾಲತಾಣದಲ್ಲಿ ಲಭ್ಯ. 

e - ಸುದ್ದಿ

ಅಂತರಜಾಲದ ಮೇಲೆ ಸರಕಾರದ ಬಿಗಿಮುಷ್ಟಿ

ಅಮೆರಿಕದಲ್ಲಿ ಅಂತರಜಾಲದಲ್ಲಿ ನಡೆಯುವ ವಹಿವಾಟುಗಳ ಮೇಲೆ ಬೇಹುಗಾರಿಕೆ ನಡೆಸಲು ಅನುವು ಮಾಡಿಕೊಡುವ ಸಿಸ್ಪ (CISPA - Cyber Intelligence Sharing and Protection Act)  ಎಂಬ ಕಾನೂನನ್ನು ಅಲ್ಲಿಯ ಪಾರ್ಲಿಮೆಂಟ್ ಅಂಗೀಕರಿಸಿದೆ. ಈ ಕಾನೂನು ಸರಕಾರಕ್ಕೆ ಅತೀವ ಅಧಿಕಾರವನ್ನು ನೀಡುತ್ತದೆ. ಅಂತರಜಾಲದಲ್ಲಿ ನಡೆಯುವ ಎಲ್ಲ ವ್ಯವಹಾರಗಳನ್ನು ಯಾವುದೇ ನ್ಯಾಯಾಲಯದ ಅಂಗೀಕಾರಕ್ಕೆ ಕಾಯದೆ ಅದರ ಮೇಲೆ ಬೇಹುಗಾರಿಕೆ ನಡೆಸುವ ಅಧಿಕಾರ ನೀಡುತ್ತದೆ. ನಾವು ಕಳುಹಿಸುವ ಇಮೈಲ್ ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಅಂತರಜಾಲ ಸಮುದಾಯಗಳು ಈ ಕಾನೂನು ಒಂದು ದುಷ್ಟ ಕಾನೂನು ಎಂದು ಗದ್ದಲ ಮಾಡುತ್ತಿವೆ.  

e- ಪದ

ಸಿಸ್ಪ (CISPA  - Cyber Intelligence Sharing and Protection Act) - ಅಂತರಜಾಲ ಬೇಹುಗಾರಿಕೆ ಮತ್ತು ತಡೆಗಟ್ಟುವಿಕೆಯ ನಿಯಮ. ಇದನ್ನು ಬಳಸಿ ಸರಕಾರವು ಯಾರ ಮೇಲೆ ಬೇಕಿದ್ದರೂ ಅಂತರಜಾಲ ಮೂಲಕ ಬೇಹುಗಾರಿಕೆ ನಡೆಸಬಹುದು. ಇದು ಅಮೆರಿಕದಲ್ಲಿ ಚಾಲನೆಗೆ ಬಂದಿದೆ.

e - ಸಲಹೆ

ಪ್ರಸನ್ನ ಆಡುವಳ್ಳಿಯವರ ಪ್ರಶ್ನೆ: ಮೈಕ್ರೋಸಾಫ್ಟ್ ಆಫೀಸಿನಲ್ಲಿ ವರ್ಡ್ ಡಾಕ್ಯುಮೆಂಟನ್ನು ಪಿಡಿಎಫ್ ರೂಪದಲ್ಲಿ ಉಳಿಸಲು ಅವಕಾಶ ಇದೆಯಷ್ಟೇ? ಆದರೆ ಇದನ್ನು ಬಳಸಿ ಕನ್ನಡ ಫೈಲುಗಳನ್ನು ಪರಿವರ್ತಿಸಲು ಒದ್ದಾಡುತ್ತಿದ್ದೆ. ಆಮೇಲೆ ಗೊತ್ತಾಗಿದ್ದೆಂದರೆ ಕನ್ನಡ ಫಾಂಟನ್ನು ಬೊಲ್ಡ್ ಮಾಡಿದಾಗಲಷ್ಟೇ ಪಿಡಿಎಫ್‌ಗೆ ಪರಿವರ್ತಿಸಲು ಸಾಧ್ಯ! ಆದರೆ ಇಂಗ್ಲೀಷಿನಲ್ಲಿ ಈ ಸಮಸ್ಯೆ ಇಲ್ಲ. ಯಾಕೆ ಹೀಗೆ? ಬೋಲ್ಡ್ ಮಾಡದೇ ಪರಿವರ್ತಿಸಲು ಸಾದ್ಯ ಇಲ್ಲವೇ?
ಉ: ನಾನು ಬೇಕಾದಷ್ಟು ಸಲ ವರ್ಡ್‌ನಿಂದ ಪಿಡಿಎಫ್ ಆಗಿ ಪರಿವರ್ತಿಸಿದ್ದೇನೆ. ನನಗೆ ಈ ಸಮಸ್ಯೆ ಕಂಡುಬಂದಿಲ್ಲ. ಬಹುಶಃ ನೀವು ಬಳಸುತ್ತಿರುವ ಫಾಂಟ್ ಬೋಲ್ಡ್ ರೂಪದಲ್ಲಿ ಮಾತ್ರ ಗಣಕದಲ್ಲಿ embeddable ಆಗಿ ಇರಬೇಕು. ಬೇರೆ ಫಾಂಟ್ ಬಳಸಿ ನೋಡಿ.
 
ಕಂಪ್ಯೂತರ್ಲೆ


ಕೋಲ್ಯ ತನ್ನ ಗರ್ಲ್‌ಫ್ರೆಂಡ್‌ಗೆ ದಿನಕ್ಕೆ ೫೦೦ ಎಸ್‌ಎಂಎಸ್ ಉಚಿತ ಇರುವ ಮೊಬೈಲ್ ಸಿಮ್ ತೆಗೆಸಿಕೊಟ್ಟ. ಮರುದಿನ ಆಕೆ ರಸ್ತೆಪಕ್ಕದ ತೆರೆದಿದ್ದ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದಳು.

ಮಂಗಳವಾರ, ಏಪ್ರಿಲ್ 24, 2012

ಗಣಕಿಂಡಿ - ೧೫೩ (ಎಪ್ರಿಲ್ ೨೩, ೨೦೧೨)

ಅಂತರಜಾಲಾಡಿ

ಹೋಮ್ ಟಾಕೀಸ್

ಟಾಕೀಸ್ ಎನ್ನುವುದು ಸಿನಿಮಾ ಮಂದಿರಕ್ಕೆ ಇನ್ನೊಂದು ಹೆಸರು. ಅದು ಮನೆಯಲ್ಲೇ ಇದ್ದರೆ ಹೇಗೆ? ಸಿನಿಮಾ ಥಿಯೇಟರಿಗೆ ಹೋಗಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ತಾಪತ್ರಯವಿಲ್ಲದೆ ಸಿನಿಮ ನೋಡುವಂತಿದ್ದರೆ ಒಳ್ಳೆಯದಲ್ಲವೇ? ಹೌದು, ಅದಕ್ಕಾಗಿಯೇ ಡಿವಿಡಿ ಪ್ಲೇಯರ್‌ಗಳೂ ಡಿವಿಡಿ ತಟ್ಟೆಗಳೂ ಇವೆ ಎನ್ನುತ್ತೀರಾ? ಆದರೆ ಹೊಸ ಸಿನಿಮಾಗಳು ಡಿವಿಡಿ ರೂಪದಲ್ಲಿ ಬರಲು ವರ್ಷಗಳೇ ಹಿಡಿಯುತ್ತವೆ. ಕೆಲವು ಅಪರೂಪದ ಸಿನಿಮಾಗಳು ಅದರಲ್ಲೂ ಮುಖ್ಯವಾಗಿ ವ್ಯಾವಹಾರಿಕವಾಗಿ ಅಷ್ಟೇನೂ ಯಶಸ್ಸು ಕಾಣದವು ಆದರೆ ಉತ್ತಮವಾಗಿರುವ ಚಲನಚಿತ್ರಗಳು ಸಿಗುವುದು ಕಷ್ಟ. ಈ ಎಲ್ಲ ಸಮಸ್ಯೆಗಳಿಗೆ ಉತ್ತರ ರೂಪವಾಗಿ ಹೋಮ್ ಟಾಕೀಸ್ ಬಂದಿದೆ. ಮನೆಯಲ್ಲಿ ಉತ್ತಮ ಬ್ರಾಡ್‌ಬ್ಯಾಂಡ್ ಅಂತರಜಾಲ ಸಂಪರ್ಕ ಇದ್ದರೆ ಸಾಕು. www.hometalkies.com  ಜಾಲತಾಣದ ಮೂಲಕ ಚಲನಚಿತ್ರ ವೀಕ್ಷಣೆ ಮಾಡಬಹುದು. ಹೌದು, ಇದು ಕಾನೂನುಬದ್ಧವಾಗಿದೆ.

ಡೌನ್‌ಲೋಡ್

ಕ್ಯಾಮರ ಮಾಹಿತಿ ಬದಲಾಯಿಸಿ

ಡಿಜಿಟಲ್ ಕ್ಯಾಮರದಲ್ಲಿ ತೆಗೆದ ಫೋಟೋದ ಜೊತೆ ಹಲವು ಮಾಹಿತಿಗಳು ರೆಕಾರ್ಡ್ ಆಗಿರುತ್ತವೆ. ಅವುಗಳಲ್ಲಿ ಪ್ರಮುಖವಾದವು -ಕ್ಯಾಮರ ಹೆಸರು, ಮಾದರಿ, ಷಟರ್ ವೇಗ, ಅಪೆರ್ಚ್‌ರ್, ಐಎಸ್‌ಓ ಸಂಖ್ಯೆ, ಲೆನ್ಸ್‌ನ ಫೋಕಲ್ ಲೆಂತ್, ಇತ್ಯಾದಿ. ಗಣಕದಲ್ಲಿ ಸಂಗ್ರಹಿತವಾದ ಫೋಟೋವನ್ನು ಸೂಕ್ತ ತಂತ್ರಾಂಶದಲ್ಲಿ ತೆರೆದು Properties ಎಂಬುದನ್ನು ಆಯ್ಕೆ ಮಾಡಿ ನೋಡಿದರೆ ಈ ಹೆಚ್ಚುವರಿ ಮಾಹಿತಿ ನೋಡಲು ಸಿಗುತ್ತದೆ. ಸಾಮಾನ್ಯವಾಗಿ ಯವುದೇ ಫೋಟೋ ಎಡಿಟಿಂಗ್ ತಂತ್ರಾಂಶದಲ್ಲಿ ಇದನ್ನು ಬದಲಾಯಿಸಲು ಆಗುವುದಿಲ್ಲ. ಈ ಮಾಹಿತಿಯನ್ನು ಬದಲಾಯಿಸಲು ಅನುವು ಮಾಡಿಕೊಡುವ ಒಂದು ಉಚಿತ ತಂತ್ರಾಂಶ PhotoME ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.photome.de

e - ಸುದ್ದಿ

ಡಿಜಿಟಲ್ ಓದುಗ ಹೆಚ್ಚು ಓದುತ್ತಾನೆ

ಇತ್ತೀಚೆಗೆ ಇ-ಬುಕ್ ಅರ್ಥಾತ್ ವಿದ್ಯುನ್ಮಾನ ಪುಸ್ತಕ ಜನಪ್ರಿಯವಾಗುತ್ತಿದೆ. ಈ ಪುಸ್ತಕಗಳನ್ನು ಗಣಕ (ಅಂತರಜಾಲ), ಇಬುಕ್ ರೀಡರ್, ಟ್ಯಾಬ್ಲೆಟ್, ಮೊಬೈಲ್ ಫೋನ್ -ಇತ್ಯಾದಿಗಳಲ್ಲೆಲ್ಲ ಓದಬಹುದು. ಯಾವ ಸಮಯದಲ್ಲಿ ಬೇಕಾದರೂ ಎಲ್ಲಿ ಬೇಕಾದರೂ ಓದಬಹುದು. ದೊಡ್ಡ ದೊಡ್ಡ ಕಪಾಟುಗಳ ಅಗತ್ಯವಿಲ್ಲ. ಈಗ ಬಂದ ಸುದ್ದಿ: ವಿದ್ಯುನ್ಮಾನ ಪುಸ್ತಕ ಓದುಗ ಮಾಮೂಲಿ ಮುದ್ರಿತ ಪುಸ್ತಕಗಳ ಓದುಗರಿಗಿಂತ ಜಾಸ್ತಿ ಪುಸ್ತಕ ಓದುತ್ತಾರೆ. ಈ ಸಮೀಕ್ಷೆ ನಡೆದುದು ಅಮೆರಿಕದಲ್ಲಿ. ಈ ಪರಿಸ್ಥಿತಿ ಭಾರತಕ್ಕೆ ಬರಲು ಹೆಚ್ಚು ಸಮಯ ಬೇಕಾಗಿಲ್ಲ.

e- ಪದ

ಎಕ್ಸಿಫ್ ಮಾಹಿತಿ (Exif  - Exchangeable image file format) - ಡಿಜಿಟಲ್ ಕ್ಯಾಮರಾಗಳಲ್ಲಿ ಫೋಟೋ ತೆಗದಾಗ ಫೋಟೋದ ಬಗ್ಗೆ ಹೆಚ್ಚಿನ ಮಾಹಿತಿ ಉದಾ- ಕ್ಯಾಮರ ಹೆಸರು, ಮಾದರಿ, ಷಟರ್ ವೇಗ, ಅಪೆರ್ಚ್‌ರ್, ಐಎಸ್‌ಓ ಸಂಖ್ಯೆ, ಲೆನ್ಸ್‌ನ ಫೋಕಲ್ ಲೆಂತ್, ಇತ್ಯಾದಿಗಳನ್ನು ಫೋಟೋದ ಜೊತೆಗೇ ಸಂಗ್ರಹಿಸಡುವ ಜಾಗತಿಕ ಶಿಷ್ಟತೆ. ಎಲ್ಲ ಡಿಜಿಟಲ್ ಕ್ಯಾಮರಾಗಳೂ ಸ್ಮಾರ್ಟ್‌ಫೋನ್‌ಗಳೂ ಇದನ್ನು ಬಳಸುತ್ತವೆ.

e - ಸಲಹೆ

ಪವನ್ ಅವರ ಪ್ರಶ್ನೆ: ಗಣಕದಲ್ಲಿ ಕನ್ನಡ ಟೈಪ್ ಮಾಡುವುದು, ಅದರಲ್ಲೂ ಮುಖ್ಯವಾಗಿ ಕಚೇರಿಯಲ್ಲಿ, ಸೈಬರ್ ಕೆಫೆಗಳಲ್ಲಿ, ಯಾವುದೇ ತಂತ್ರಾಂಶ ಇನ್‌ಸ್ಟಾಲ್ ಮಾಡದೆ, ಹೇಗೆ? (ಈ ಪ್ರಶ್ನೆ ಮತ್ತೆ ಮತ್ತೆ ಕೇಳಬರುತಿದೆ).
ಉ: ಇದರ ಬಗ್ಗೆ ದೀರ್ಘವಾದ ಉತ್ತರ ಬರೆಯಬೇಕಾಗುತ್ತಿದೆ. ಅದೃಷ್ಟಕ್ಕೆ ವಿಕಾಸ್ ಹೆಗಡೆಯವರು ಈಗಾಗಲೆ ಆ ಕೆಲಸ ಮಾಡಿದ್ದಾರೆ. ಅದನ್ನು ಓದಲು bit.ly/KannadaTyping ಜಾಲತಾಣಕ್ಕೆ ಭೇಟಿ ನೀಡಿ.

ಕಂಪ್ಯೂತರ್ಲೆ

ಟ್ವಿಟ್ಟರ್‌ವ್ಯಸನಿ ಕೋಲ್ಯನಿಗೆ ತನ್ನ ನಾಯಿ ಕಳೆದುಹೋದರೆ ಅದನ್ನು ಮರಳಿ ಪಡೆಯುವುದು ಹೇಗೆ ಎಂಬ ಚಿಂತೆಯಾಯಿತು. ಅದಕ್ಕೊಂದು ಕೊರಳ ಪಟ್ಟಿ ತಂದು ಅದರಲ್ಲಿ ತನ್ನ ಟ್ವಿಟ್ಟರ್ ಹ್ಯಾಂಡಲ್ (ಅಡ್ಡಹೆಸರು) ಬರೆಸಿದ.

ಸೋಮವಾರ, ಏಪ್ರಿಲ್ 16, 2012

ಗಣಕಿಂಡಿ - ೧೫೨ (ಎಪ್ರಿಲ್ ೧೬, ೨೦೧೨)

ಅಂತರಜಾಲಾಡಿ

ಚಾಕೊಲೇಟ್ ಪ್ರಿಯರಿಗೆ

ಚಾಕೊಲೇಟ್ ಇಷ್ಟವಿಲ್ಲದವರ‍್ಯಾರು? ಪುಟ್ಟ ಕಂದನಿಂದ ಹಿಡಿದು ತಾತನವರೆಗು ಎಲ್ಲರಿಗು ಚಾಕೊಲೇಟ್ ಇಷ್ಟ. ಈಗೇನೋ ಭಾರತದಲ್ಲಿ ಹಲವಾರು ನಮೂನೆಯ ಚಾಕೊಲೇಟ್‌ಗಳು ಲಭ್ಯ. ಎರಡು ದಶಕಗಳ ಹಿಂದೆ ಪರಿಸ್ಥಿತಿ ಇಂತಿರಲಿಲ್ಲ. ಆದರೂ ಜಾಗತಿಕ ಮಟ್ಟದಲ್ಲಿ ನೋಡಿದರೆ ನಮ್ಮ ದೇಶದಲ್ಲಿ ದೊರೆಯುವ ಚಾಕೊಲೇಟ್‌ಗಳ ವೈವಿಧ್ಯ ತುಂಬ ಕಡಿಮೆಯೇ. ಚಾಕೊಲೆಟ್‌ಗಳಿಗೆಂದೇ ಮೀಸಲಾದ ಜಾಲತಾಣ www.chocablog.com. ಹಲವು ನಮೂನೆಯ ಚಾಕೊಲೇಟ್‌ಗಳು, ಅವುಗಳ ತಯಾರಿಯ ಪಾಕವಿಧಾನ, ಚಾಕೊಲೇಟ್ ಕೊಳ್ಳಬೇಕಿದ್ದರೆ ಅದಕ್ಕೂ ಅನುಕೂಲ ಎಲ್ಲ ಈ ಜಾಲತಾಣದಲ್ಲಿವೆ.

ಡೌನ್‌ಲೋಡ್

ಮತ್ತೊಂದು ಟೊರೆಂಟ್ ತಂತ್ರಾಂಶ

ಅಂತರಜಾಲದಲ್ಲಿ ತಂತ್ರಾಂಶ, ಸಂಗೀತ, ಚಲನಚಿತ್ರ, ಅಥವಾ ಇನ್ಯಾವುದೇ ಫೈಲುಗಳನ್ನು ಪ್ರಪಂಚಾದ್ಯಂತ ವಿವಿಧ ವ್ಯಕ್ತಿಗಳು ತಮ್ಮ ಗಣಕಗಳಲ್ಲಿ ಸಂಗ್ರಹಿಸಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆ. ಈ ರೀತಿಯ ಸೌಲಭ್ಯಕ್ಕೆ P2P ಅಂದರೆ ಪರ್ಸನ್-ಟು-ಪರ್ಸನ್ ಅರ್ಥಾತ್ ವ್ಯಕ್ತಿಯಿಂದ ವ್ಯಕ್ತಿಗೆ ಎಂದು ಕರೆಯುತ್ತಾರೆ. ಬಿಟ್‌ಟೊರೆಂಟ್ ಇದಕ್ಕೆ ಪ್ರಖ್ಯಾತ. ಇಂತಹ ಟೊರೆಂಟ್ ಪ್ರೊಟೊಕೋಲ್ ಮೂಲಕ ಫೈಲ್‌ಗಳನ್ನು ಟೌನ್‌ಲೋಡ್ ಮಾಡಲು ಅನುವು ಮಾಡಿಕೊಡುವ ಒಂದು ತಂತ್ರಾಂಶ Tixati. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.tixati.com.  

e - ಸುದ್ದಿ

ಫೇಸ್‌ಬುಕ್ ನೋಡುವುದು ಅಪರಾಧವಲ್ಲ

ಕೆಲಸದ ಸಮಯದಲ್ಲಿ ಫೇಸ್‌ಬುಕ್ ನೋಡುವುದು ಅಪರಾಧ ಎಂದು ಹೆಚ್ಚಿನವರು ತೀರ್ಮಾನ ಮಾಡುತ್ತಾರೆ. ಭಾರತದ ಬಹುತೇಕ ಕಂಪೆನಿಗಳಲ್ಲಿ ಫೇಸ್‌ಬುಕ್ ತಾಲತಾಣ ಮಾತ್ರವಲ್ಲ ಅದೇ ಮಾದರಿಯ ಇತರೆ ಸಮಾಜ ಜಾಲತಾಣಗಳನ್ನೂ ನಿರ್ಬಂಧಿಸಿರುತ್ತಾರೆ. ಆದರೆ ಅಮೇರಿಕದಿಂದ ಒಂದು ನ್ಯಾಯಾಲಯದ ತೀರ್ಮಾನ ಈಗ ಬಂದಿದೆ. ಅದರ ಪ್ರಕಾರ ಕೆಲಸದ ಸಮಯದಲ್ಲಿ ಕಚೇರಿಯಲ್ಲಿ ಫೇಸ್‌ಬುಕ್ ನೋಡುವುದು ಅಪರಾಧವಲ್ಲ. ಈ ತೀರ್ಮಾನ ಬಂದಿರುವುದು ಸ್ಯಾನ್‌ಫ್ರಾನ್ಸಿಸ್ಕೋದಿಂದ.

e- ಪದ

ರೂಟಿಂಗ್ (Rooting) - ಇದು ಆಂಡ್ರೋಯಿಡ್ ಫೋನ್‌ಗಳಲ್ಲಿ ಬಳಕೆಯಾಗುತ್ತಿರುವ ಪದ. ಸಾಮಾನ್ಯವಾಗಿ ಫೋನ್ ತಯಾರಕರು ಗ್ರಾಹಕರಿಗೆ ಫೋನಿನ ಮೇಲೆ ಸಂಪೂರ್ಣ ಸಾರ್ವಭೌಮತ್ವ ನೀಡಿರುವುದಿಲ್ಲ. ರೂಟಿಂಗ್ ಮಾಡುವುದರ ಮೂಲಕ ಫೋನಿನ ಮೇಲೆ ಸಂಪೂರ್ಣ ಅಧಿಕಾರ ಹೊಂದಬಹುದು. ಆಗ ಕೆಲವು ಅಯ್ಕೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯ ದೊರೆಯುತ್ತದೆ. ಕೆಲವು ತಂತ್ರಾಂಶಗಳನ್ನು ರೂಟಿಂಗ್ ಮಾಡಿದರೆ ಮಾತ್ರ ಇನ್‌ಸ್ಟಾಲ್ ಮಾಡಲು ಸಾಧ್ಯ.

e - ಸಲಹೆ

ಕೆ. ಬಸವರಾಜು ಅವರ ಪ್ರಶ್ನೆ: ನನಗೆ ಫೇಸ್‌ಬುಕ್‌ನಲ್ಲಿ ನನ್ನ ಹೆಸರು ಬದಲಾಯಿಸಬೇಕಾಗಿದೆ. ಇದು ಸಾಧ್ಯವೇ? ಸಾಧ್ಯವಿದ್ದರೆ ಹೇಗೆ?
ಉ: ಇದು ಬಹಳ ಸುಲಭ. Home ನಲ್ಲಿ Account Settings ಮೇಲೆ ಕ್ಲಿಕ್ ಮಾಡಿ. ನಂತರ Name ಎಂದಿರುವ ಸಾಲಿನ ಕೊನೆಯಲ್ಲಿ ಇರುವ Edit ಎಂಬುದರ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಬೇಕಾದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ. ನೀವು ಫೇಸ್‌ಬುಕ್ ಅನ್ನು ಇಂಗ್ಲಿಶಿನಲ್ಲಿ ಬಳಸುತ್ತಿದ್ದೀರಿ ಎಂದು ಊಹಿಸಿ ಬರೆದಿದ್ದೇನೆ. ಕನ್ನಡದಲ್ಲಿ ಬಳಸುತ್ತಿದ್ದರೂ ಇವೇ ಅಯ್ಕೆಗಳು ಲಭ್ಯವಿವೆ.

ಕಂಪ್ಯೂತರ್ಲೆ


ಕೋಲ್ಯನಿಗೆ ತನ್ನ ಆಂಡ್ರೋಯಿಡ್ ಫೋನಿನಲ್ಲಿ ಯಾವುದೋ ತಂತ್ರಾಂಶ ಇನ್‌ಸ್ಟಾಲ್ ಮಾಡಬೇಕಾಗಿತ್ತು. ಅದು ರೂಟಿಂಗ್ ಮಾಡಿದರೆ ಮಾತ್ರ ಸಾಧ್ಯ ಎಂದು ಆತನ ತಂತ್ರಜ್ಞ ಸ್ನೇಹಿತ ಫೋನಿನಲ್ಲಿ ಹೇಳಿದ್ದ. ಕೋಲ್ಯ ಫೋನನ್ನು ಹೂಕುಂಡದಲ್ಲಿ ಊರಿ ಇಟ್ಟು, ಸ್ವಲ್ಪ ನೀರು ಚಿಮುಕಿಸಿ -ರೂಟಿಂಗ್ ಆಗಲೆಂದು ಕಾಯತೊಡಗಿದ.

ಸೋಮವಾರ, ಏಪ್ರಿಲ್ 9, 2012

ಗಣಕಿಂಡಿ - ೧೫೧ (ಎಪ್ರಿಲ್ ೦೯, ೨೦೧೨)

ಅಂತರಜಾಲಾಡಿ

ಮೇಘದಲ್ಲೊಂದು ಪೆಟ್ಟಿಗೆ

ಈಗೀಗ ಕ್ಲೌಡ್ ಅರ್ಥಾತ್ ಅಂತರಜಾಲಾಧಾರಿತ ಸಂಗ್ರಹ ಮತ್ತು ಗಣಕೀಕರಣ ಸಹಜವಾಗುತ್ತಿದೆ. ಈ ಅಂತರಜಾಲದಲ್ಲಿಯ ಸಂಗ್ರಹವನ್ನು ಹಣ ನೀಡಿ ಕೊಂಡುಕೊಳ್ಳಬೇಕು. ಇವುಗಳಲ್ಲಿ ತುಂಬ ಪ್ರಸಿದ್ಧವಾದವು ಅಮೆಝಾನ್, ಮೈಕ್ರೋಸಾಫ್ಟ್, ಇತ್ಯಾದಿ. ಕೆಲವು ಉಚಿತ ಮೇಘಾಧಾರಿತ ಸಂಗ್ರಹಗಳೂ ಇವೆ. ಅಂತಹವುಗಳಲ್ಲಿ ತುಂಬ ಜನಪ್ರಿಯವಾದುದು ಡ್ರಾಪ್‌ಬಾಕ್ಸ್. ಇದನ್ನು ನೇರವಾಗಿ ಅದರ ಜಾಲತಾಣದಿಂದ, ನಿಮ್ಮ ಗಣಕದಿಂದ ಅಥವಾ ಸ್ಮಾರ್ಟ್‌ಫೋನ್‌ನಿಂದ ಬಳಸಬಹುದು. ಗಣಕದಲ್ಲಿ ಇದನ್ನು ಬಳಸಲು ಅವರೇ ಒಂದು ಚಿಕ್ಕ ತಂತ್ರಾಂಶವನ್ನು ನೀಡಿದ್ದಾರೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಫೋನ್‌ಗಳಿಗೆ ಸೂಕ್ತ ಆಪ್ ನೀಡಿದ್ದಾರೆ. ಡ್ರಾಪ್‌ಬಾಕ್ಸ್‌ನ ಜಾಲತಾಣ ವಿಳಾಸ - www.dropbox.com. ಗಣಕದಲ್ಲಿ ಅದಕ್ಕಂದೇ ಒಂದು ಫೋಲ್ಡರ್ ಮಾಡಿಟ್ಟುಕೊಂಡು ಅಲ್ಲಿ ಫೈಲ್‌ಗಳನ್ನು ಸೇರಿಸಿದರೆ ಸಾಕು. ಅದು ಅಂತರಜಾಲದಲ್ಲಿ, ಗಣಕದಲ್ಲಿ, ಫೋನ್‌ನಲ್ಲಿ -ಎಲ್ಲ ಕಡೆ ಸರಿಹೊಂದಿಕೊಳ್ಳುತ್ತದೆ, ಒಂದು ಕಡೆ ನವೀಕರಿಸಿದರೆ ಎಲ್ಲ ಕಡೆ ನವೀಕರಣಗೊಳ್ಳುತ್ತವೆ.

ಡೌನ್‌ಲೋಡ್

ಆಂಡ್ರೋಯಿಡ್ ಫೋನ್ ವೀಕ್ಷಿಸಿ

ಈಗೀಗ ಆಂಡ್ರೋಯಿಡ್ ಸ್ಮಾರ್ಟ್‌ಫೋನ್ ಬಳಕೆ ತುಂಬ ಸಹಜವಾಗುತ್ತಿದೆ. ಆಂಡ್ರೋಯಿಡ್ ಫೋನ್ ಬಳಸುತ್ತಿರುವವರಿಗೆ ಒಂದು ತಲೆನೋವಿನ ವಿಷಯವೆಂದರೆ ಅದರಲ್ಲಿರುವ ವಿಳಾಸ ಪುಸ್ತಕ ಮತ್ತು ಗಣಕದಲ್ಲಿರುವ ವಿಳಾಸ ಪುಸ್ತಕಗಳನ್ನು ಒಂದಕ್ಕೊಂದು ಸರಿಹೊಂದಿಸುತ್ತಿರುವುದು. ಅದಕ್ಕಾಗಿ ಬಳಸುವ ತಂತ್ರಾಂಶ ಸರಿಯಿಲ್ಲದಿದ್ದರೆ ಪ್ರತಿ ಸಲ ಸಿಂಕ್ ಮಾಡಿದಾಗ ಹೆಸರುಗಳನ್ನು ದ್ವಿಪ್ರತಿ ಮಾಡುತ್ತ ಹೋಗಿ ಕೊನೆಗೊಂದು ದಿನ ನಿಮ್ಮ ಫೋನಿನಲ್ಲಿ ಹತ್ತು, ಹದಿನೈದು ಸಾವಿರ ಹೆಸರುಗಳಾಗುತ್ತವೆ. ಆಂಡ್ರೋಯಿಡ್ ಫೋನಿನಲ್ಲಿ ಏನೇನಿದೆ ಎಂದು ಗಣಕಕ್ಕೆ ಸಂಪರ್ಕ ಮಾಡಿ ಗಣಕದಿಂದಲೇ ಎಲ್ಲ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ತಂತ್ರಾಂಶ MyPhoneExplorer. ಇದರಲ್ಲಿ ಎರಡು ಭಾಗ ಇವೆ. ಒಂದು ಭಾಗ ನಿಮ್ಮ ಫೋನಿನಲ್ಲಿ ಇರತಕ್ಕದ್ದು. ಅದನ್ನು ಆಂಡ್ರೋಯಿಡ್ ಮಾರುಕಟ್ಟೆಯಿಂದ (play.google.com/store) ನೇರವಾಗಿ ಫೋನಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಗಣಕದಲ್ಲಿರಬೇಕಾದ ಇದರ ಜೊತೆಗಾರ ತಂತ್ರಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೊಂಡಿ - www.fjsoft.at/en.

e - ಸುದ್ದಿ

ಆಟೋಪ್ಲೇ ತಂದ ಕುತ್ತು

ಐರ್ಲ್ಯಾಂಡಿನಲ್ಲಿ ಒಬ್ಬ ಪಾದ್ರಿಯವರು ಕೆಲವು ತಂದೆ ತಾಯಿಯರಿಗೆ ಗಣಕವನ್ನು ಬಳಸಿ ಪ್ರವಚನ ನೀಡುತ್ತಿದ್ದರು. ಪ್ರವಚನದ ಕೊನೆಯಲ್ಲಿ ಯುಎಸ್‌ಬಿ ಡ್ರೈವ್ ಒಂದನ್ನು ಗಣಕಕ್ಕೆ ಸೇರಿಸಿ ಅದರಲ್ಲಿರುವ ಪ್ರೆಸೆಂಟೇಶನ್ ತೋರಿಸಲು ಹೊರಟರು. ಯುಎಸ್‌ಬಿ ಡ್ರೈವ್ ತೂರಿಸಿದೊಡನೆ ಅದರಲ್ಲಿದ್ದ ವೀಡಿಯೋವು ಆಟೋಪ್ಲೇ ಮೂಲಕ ಪ್ಲೇ ಆಯಿತು. ಪಾದ್ರಿಯವರ ದುರಾದೃಷ್ಟಕ್ಕೆ ಅದರಲ್ಲಿದ್ದುದು ಅಶ್ಲೀಲ ನೀಲಿ ಚಿತ್ರವಾಗಿತ್ತು. ಅದು ಅಲ್ಲಿಗೆ ಹೇಗೆ ಬಂತು ಎಂಬುದನ್ನು ಈಗ ಪೋಲೀಸರು ಪತ್ತೆಹಚ್ಚುತ್ತಿದ್ದಾರೆ. ಪಾದ್ರಿಯವರೀಗ ಆಟೋಪ್ಲೇ ನಿಲ್ಲಿಸುವುದು ಹೇಗೆ ಎಂದು ಗಣಕ ತಂತ್ರಜ್ಞರಿಂದ ತರಬೇತಿ ಪಡೆಯುತ್ತಿದ್ದಾರೆ.

e- ಪದ

ಸಿಂಕ್ (Sync - Synchronization) - ಗಣಕ, ಫೋನ್, ಬೇರೆ ಬೇರೆ ಸಾಧನಗಳು (ಎಂಪಿ೩ ಪ್ಲೇಯರ್‌ಗಳು), ಅಂತರಜಾಲತಾಣ -ಇತ್ಯಾದಿಗಳಲ್ಲಿ ಒಂದೇ ಫೈಲ್ ಇದ್ದಾಗ ಒಂದು ಕಡೆ ಫೈಲ್ ಬದಲಾಯಿಸಿದಾಗ ಅದನ್ನು ಎಲ್ಲ ಕಡೆ ಬದಲಾಯಿಸಿ ಎಲ್ಲವೂ ಒಂದೇ ಅಗಿರುವಂತೆ ಸರಿಹೊಂದಿಸುವುದು. ಇಂಗ್ಲಿಶಿನಲ್ಲಿ ಈ ಪ್ರಕ್ರಿಯೆಗೆ synching ಎಂದೂ ಕರೆಯುತ್ತಾರೆ.

e - ಸಲಹೆ

ಪ್ರ: ನಾನು ನನ್ನ ಗಣಕಕ್ಕೆ ಯಾವುದೇ ಯುಎಸ್‌ಬಿ ಡ್ರೈವ್ ತೂರಿಸಿದೊಡನೆ ಅದರಲ್ಲಿರುವ ತಂತ್ರಾಂಶ ತನ್ನಿಂದತಾನೆ ಚಾಲೂಗೊಳ್ಳುತ್ತದೆ. ಈ ರೀತಿ ಆಗದಂತೆ ಮಾಡಲು ಸಾಧ್ಯವೇ?
ಉ: ಸಾಧ್ಯವಿದೆ. ಇದನ್ನು ಆಟೋಪ್ಲೇ ಎನ್ನುತ್ತಾರೆ. ಅದನ್ನು ನಿಲ್ಲಿಸತಕ್ಕದ್ದು. ಇದಕ್ಕಾಗಿ ನೀವು ಮಾಡಬೇಕಾದುದೇನೆಂದರೆ - Control Panel > Hardware and Sound > AutoPlay ಇಲ್ಲಿಗೆ ಹೋಗಿ Software and games ಎಂಬುದರ ಮುಂದೆ Ask me everytime ಎಂಬುದಾಗಿ ಆಯ್ಕೆ ಮಾಡಿಕೊಳ್ಳಬೇಕು.

ಕಂಪ್ಯೂತರ್ಲೆ

ಒಬ್ಬಾತ ತನ್ನ ಎಂಪಿ೩ ಪ್ಲೇಯರ್‌ಗೆ ಟೈಟಾನಿಕ್ ಎಂದು ನಾಮಕರಣ ಮಾಡಿದ್ದ. ಪ್ರತಿ ಸಲ ಅದನ್ನು ಗಣಕಕ್ಕೆ ಸಂಪರ್ಕಿಸಿ ಸಿಂಕ್ ಮಾಡಿದಾಗಲೂ “ಟೈಟಾನಿಕ್ ಈಸ್ ಸಿಂಕಿಂಗ್” ಎಂದು ಸಂದೇಶ ಮೂಡಿಬರುತ್ತಿತ್ತು.

ಸೋಮವಾರ, ಏಪ್ರಿಲ್ 2, 2012

ಗಣಕಿಂಡಿ - ೧೫೦ (ಎಪ್ರಿಲ್ ೦೨, ೨೦೧೨)

ಅಂತರಜಾಲಾಡಿ

ಭಾರತದ ಹೂವುಗಳು

ಹೂವುಗಳನ್ನು ಮೆಚ್ಚದವರಾರು? ಹೂವುಗಳು ಎಲ್ಲರಿಗೂ ಇಷ್ಟ. ಹೂವುಗಳ ಫೋಟೋ ತೆಗೆಯುವವರೂ ತುಂಬ ಮಂದಿ. ಹೂವುಗಳ ಫೋಟೋ ನೋಡಿದೊಡನೆ ಮನಸ್ಸಿನಲ್ಲಿ ಅದರ ಬಗ್ಗೆ ಹಲವು ನೆನಪುಗಳು ಮೂಡುತ್ತವೆ. ಅದೆಲ್ಲ ಸರಿ. ಆದರೆ ಅದರ ಹೆಸರು ಗೊತ್ತಾಗುತ್ತದೆಯೇ? ಕೆಲವು ಸಾಮಾನ್ಯ ಹೂವುಗಳಿಗೆ ಕೂಡ ನಮಗೆ ನಾವು ಮನೆಯಲ್ಲಿ ಬಳಸುವ ಹೆಸರು ಗೊತ್ತಿರುತ್ತದೆ, ಆದರೆ ಅದರ ವೈಜ್ಞಾನಿಕ ಹೆಸರು ಗೊತ್ತಿರುವುದಿಲ್ಲ. ಅಂತಹವರಿಗಾಗಿಯೇ ಒಂದು ಜಾಲತಾಣವಿದೆ. ಭಾರತೀಯ ಹೂವುಗಳಿಗೆಂದೇ ಇರುವ ಜಾಲತಾಣ www.flowersofindia.net. ಭಾರತದ ಪ್ರಮುಖ ಹೂವುಗಳ ಫೋಟೋ ಮತ್ತು ವಿವರ ಇಲ್ಲಿವೆ. 

ಡೌನ್‌ಲೋಡ್


ಅಂತರಿಕ್ಷದಲ್ಲಿ ಕೋಪದ ಹಕ್ಕಿಗಳು

ಸ್ಮಾರ್ಟ್‌ಫೋನ್‌ಗಳಲ್ಲಿ ಆಡುವ ಆಟಗಳಲ್ಲಿ ಜನಪ್ರಿಯತೆಯಲ್ಲಿ ಮೊದಲನೆಯ ಸ್ಥಾನದಲ್ಲಿರುವುದು ಆಂಗ್ರಿ ಬರ್ಡ್ಸ್. ಇದು ಐಫೋನ್, ಆಂಡ್ರೋಯಿಡ್ ಮತ್ತು ಗಣಕಗಳಿಗೂ ಲಭ್ಯವಿದೆ. ಮಾರ್ಚ್ ೨೨ರಂದು ಇದರ ಹೊಸ ಆವೃತ್ತಿ ಆಂಗ್ರಿ ಬರ್ಡ್ಸ್ ಸ್ಪೇಸ್ ಬಂದಿದೆ. ಇದು ಡೌನ್‌ಲೋಡ್‌ಗೆ ಲಭ್ಯವಾಗಿ ೨೪ ಗಂಟೆಗಳಲ್ಲಿ ೫೦ ಲಕ್ಷ ಮಂದಿ ಇದನ್ನು ಡೌನ್‌ಲೋಡ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರ ಇಷ್ಟವಿರುವವರಿಗೆಲ್ಲ ಈ ಆಟ ತುಂಬ ಪ್ರಿಯವಾಗಲೇ ಬೇಕು. ಯಾಕೆಂದರೆ ಈ ಆಟ ನಡೆಯುವುದು ಶೂನ್ಯ ಗುರುತ್ವಾಕರ್ಷಣೆಯ ಅಂತರಿಕ್ಷದಲ್ಲಿ. ಕವಣೆಯಿಂದ ಎಸೆದರೆ ಭೂಮಿಯ ಮೇಲೆ ಗುರುತ್ವಾಕರ್ಷಣೆಯಿಂದಾಗಿ ಅದು ಬಾಗಿದ ಪಥದಲ್ಲಿ ಸಾಗುತ್ತದೆ. ಅಂತರಿಕ್ಷದಲ್ಲಿ ಅದರ ಪಥ ಅದು ಯಾವ ವಸ್ತುವಿನ ಗುರುತ್ವಾಕರ್ಷಣೆಯಗೆ ಒಳಪಟ್ಟಿದೆಯೋ ಇಲ್ಲವೋ ಎನ್ನುವುದನ್ನು ಅವಲಂಬಿಸಿದೆ. ಇದನ್ನು ಈ ಆಟದಲ್ಲಿ ತೋರಿಸಲಾಗಿದೆ. ಅದ್ಭುತ ಆಟ. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ space.angrybirds.com.

e - ಸುದ್ದಿ

ಗೂಗ್ಲ್ ಅರ್ತ್ ಮೂಲಕ ಕುಟುಂಬದ ಪತ್ತೆ

೫ ವರ್ಷ ಪ್ರಾಯದವನಿದ್ದಾಗ ರೈಲಿನಲ್ಲಿ ತಪ್ಪಿಸಿಕೊಂಡ ಹುಡುಗನೊಬ್ಬ ೨೫ ವರ್ಷಗಳ ನಂತರ ಗೂಗ್ಲ್ ಅರ್ತ್ ಮತ್ತು ಫೇಸ್‌ಬುಕ್ ಬಳಸಿ ತನ್ನ ಕುಟುಂಬದವರನ್ನು ಪತ್ತೆ ಮಾಡಿದ ಸುದ್ದಿ ಬಂದಿದೆ. ಇದೊಂದು ಥೇಟ್ ಸಿನಿಮಾ ಕಥೆಯಂತಿದೆ. ರೈಲಿನಿಂದ ಸರಿಯಾದ ನಿಲ್ದಾಣದಲ್ಲಿ ಇಳಿಯದೆ ತಪ್ಪಿಕೊಂಡ ಹುಡುಗ ಕೊಲ್ಕತ್ತ ಸೇರಿ ಅಲ್ಲಿ ಬಿಕ್ಷುಕರ ಕೈಗೆ ಸಿಕ್ಕಿದ. ಅವರಿಂದ ಅವನನ್ನು ಬಿಡಿಸಿಕೊಂಡುದು ಆಸ್ಟ್ರೇಲಿಯನ್ ದಂಪತಿಗಳು. ಅವರೊಂದಿಗೆ ಆಸ್ಟ್ರೇಲಿಯಕ್ಕೆ ಪಯಣ. ಅಲ್ಲಿಯೇ ಕಲಿತು ದೊಡ್ಡವನಾಗಿ ಉತ್ತಮ ಸಂಪಾದನೆ. ತನ್ನ ಊರಿನ ಹೆಸರು ಮಾತ್ರ ಆತನಿಗೆ ಚೆನ್ನಾಗಿ ನೆನಪಿತ್ತು. ತಿಂಗಳುಗಳ ಕಾಲ ಗೂಗ್ಲ್ ಅರ್ತ್‌ನಲ್ಲಿ ಹುಡುಕಾಡಿ ಕೊನೆಗೂ ತನ್ನ ಊರು, ರೈಲು ನಿಲ್ದಾಣ ಎಲ್ಲ ಪತ್ತೆ ಹಚ್ಚಿದ. ಫೇಸ್‌ಬುಕ್ ಮೂಲಕ ಕೆಲವರ ಪರಿಚಯವನ್ನೂ ಮಾಡಿಕೊಂಡ. ಕೊನೆಗೊಮ್ಮೆ ಊರಿಗೆ ಬಂದು ತಾಯಿಯ ಜೊತೆಗೂಡಿದ. ಈಗ ಆತ ಆಸ್ಟ್ರೇಲಿಯಾಕ್ಕೆ ವಾಪಾಸು ಹೋಗಿದ್ದಾನೆ, ಪುನಃ ಬರುತ್ತೇನೆ ಎಂಬ ವಾಗ್ದಾನದೊಂದಿದೆ.

e- ಪದ

ನೂಕ್ (Nook) - ಬಾರ್ನ್ಸ್ ಮತ್ತು ನೋಬಲ್ ಕಂಪೆನಿಯವರು ತಯಾರಿಸಿರುವ ವಿದ್ಯುನ್ಮಾನ ಪುಸ್ತಕ ಓದುಗ (ebook reader). ಇದು ಬಹುಮಟ್ಟಿಗೆ ಟ್ಯಾಬ್ಲೆಟ್‌ಗಳನ್ನು ಹೋಲುತ್ತದೆ. ಅಮೆಝಾನ್‌ನವರ ಕಿಂಡಲ್‌ಗೆ ಪ್ರತಿಸ್ಪರ್ಧಿ. ಕಿಂಡಲ್‌ನಂತೆ ಇಲ್ಲೂ ಭಾರತೀಯ ಭಾಷೆಗಳ ಬೆಂಬಲ ನೀಡಿಲ್ಲ.

e - ಸಲಹೆ

ನಾಗರತ್ನ ಅವರ ಪ್ರಶ್ನೆ: ನನಗೆ ನನ್ನ ಫೇಸ್‌ಬುಕ್ ಖಾತೆ ಅಳಿಸಿಹಾಕಬೇಕು. ಹೇಗೆ?
ಉ: Account Settings  > Security  >  Deactivate your account

ಕಂಪ್ಯೂತರ್ಲೆ


ಬ್ಯಾಂಕಿನ ಲಾಗಿನ್ ಮತ್ತು ಪಾಸ್‌ವರ್ಡ್ ಕದಿಯಲು ಬರುವ ಇಮೈಲ್‌ಗಳು ತೆರೆಯುವ ನಕಲಿ ಬ್ಯಾಂಕ್ ಜಾಲತಾಣದಲ್ಲಿ ನಾನು ನಮೂದಿಸುವ ಲಾಗಿನ್ ಮತ್ತು ಪಾಸ್‌ವರ್ಡ್ ಪೆದ್ದ ಮತ್ತು ಮೂರ್ಖ.