ಸೋಮವಾರ, ಜೂನ್ 25, 2012

ಗಣಕಿಂಡಿ - ೧೬೨ (ಜೂನ್ ೨೫, ೨೦೧೨)

ಅಂತರಜಾಲಾಡಿ

ಒಪ್ಪಣ್ಣ

ಕರಾವಳಿಯ ಕಾಸರಗೋಡಿನಿಂದ ಹಿಡಿದು ಗೋಕರ್ಣ, ಮಲೆನಾಡಿನ ಸಾಗರ, ಶಿರ್ಶಿ, ಸಿದ್ಧಾಪುರ - ಈ ಊರುಗಳಲ್ಲಿ ಹಬ್ಬಿರುವ ಹವ್ಯಕ ಜನಾಂಗ ಬಳಸುವ ಭಾಷೆ ಹವ್ಯಕ ಅಥವಾ ಹವಿಗನ್ನಡ. ಇದು ಕನ್ನಡ ಭಾಷೆಯದೇ ಒಂದು ಪ್ರಭೇದ. ಬಹುಮಟ್ಟಿಗೆ ಹಳೆಗನ್ನಡವನ್ನು ಹೋಲುವ ಭಾಷೆ. ಹಳೆಗನ್ನಡಕ್ಕೂ ಹೊಸಗನ್ನಡಕ್ಕೂ ಜೀವಂತ ಕೊಂಡಿ ಎಂದು ಕರೆಯಲೂ ಬಹುದು. ಹವ್ಯಕ ಭಾಷೆಯನ್ನು ಬಳಸುವ ಮಂದಿ ಲಕ್ಷದಲ್ಲಿದ್ದಾರೆ. ಅದೊಂದು ವಿಶಿಷ್ಟ ಜನಾಂಗ. ಹವ್ಯಕ ಭಾಷೆಯು ಕನ್ನಡ ಭಾಷೆಯದೇ ಲಿಪಿಯನ್ನು ಬಳಸುತ್ತದೆ. ಹವ್ಯಕ ಭಾಷೆಯ, ಬಹುಶಃ ಏಕೈಕ, ಜಾಲತಾಣ oppanna.com. ಮೊದಲು ಬ್ಲಾಗ್ ರೂಪದಲ್ಲಿದ್ದ (೨೦೦೯) ಇದು ತನ್ನದೇ ಜಾಲತಾಣವನ್ನು ೨೦೧೦ರಲ್ಲಿ ಪಡೆಯಿತು. ಹವ್ಯಕ ಭಾಷೆಯಂತೆ ಈ ಜಾಲತಾಣವೂ ಕನ್ನಡ ಲಿಪಿಯನ್ನು (ಯುನಿಕೋಡ್) ಬಳಸುತ್ತದೆ. ಸುಮಾರು ೬೦೦ ಮಂದಿ ಸದಸ್ಯರಿರುವ ಈ ಜಾಲತಾಣದಲ್ಲಿ ಹವ್ಯಕ ಭಾಷೆಯಲ್ಲಿ ಲೇಖನಗಳು, ಚರ್ಚೆಗಳು ನಡೆಯುತ್ತಿರುತ್ತವೆ. ಸುಮಾರು ೨೦೦೦ ಲೇಖನ ಮತ್ತು ಚರ್ಚಾ ವಿಷಯಗಳಿವೆ.

ಡೌನ್‌ಲೋಡ್

ಕೇರಂ

ಕೇರಂ ಆಟ ಯಾರಿಗೆ ಗೊತ್ತಿಲ್ಲ? ಈ ಆಟ ತುಂಬ ಜನಪ್ರಿಯ. ಇದನ್ನೇ ಗಣಕದಲ್ಲಿ ಆಡುವಂತಿದ್ದರೆ? ಹೌದು, ಈಗ ಅದೂ ದೊರೆಯುತ್ತಿದೆ. ಈ ಆಟ ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ playcarrom.com. ಆಟ ಫ್ಲಾಶ್ ಫೈಲ್ ಆಗಿದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಸುಮ್ಮನೆ ಡಬಲ್ ಕ್ಲಿಕ್ ಮಾಡಿ ಆಡುವುದು. ಯಾವುದೇ ಇನ್‌ಸ್ಟಾಲ್ ಮಾಡುವ ರಗಳೆ ಇಲ್ಲ. ಇದು ಇನ್ನೂ ಅರಂಭದ ಆವೃತ್ತಿ. ಇದರಲ್ಲಿ ಬೇರೆ ಬೇರೆ ಹಂತಗಳಿಲ್ಲ (ಉದಾ -ಸರಳ, ಕ್ಲಿಷ್ಟ, ಇತ್ಯಾದಿ). ಧ್ವನಿಯೂ ಇಲ್ಲ. ಸ್ಟ್ರೈಕರ್ ಕಾಯಿಗೆ ಕುಟ್ಟಿದಾಗ ಬರುವ ಧ್ವನಿ ಕೇಳುವಂತಿದ್ದರೆ ಚೆನ್ನಾಗಿತ್ತು. ಅದೇ ರೀತಿ ನಾವು ಕಾಯಿಗೆ ಸ್ಟ್ರೈಕರ್ ಗುರಿ ಇಡುವಾಗ ಒಂದು ರೇಖೆಯ ಮೂಲಕ ಗುರಿ ಎಲ್ಲಿದೆ ಎಂದು ತೋರಿಸುವಂತಿದ್ದರೆ ಚೆನ್ನಾಗಿರುತ್ತಿತ್ತು. ಬಹುಶಃ ಮುಂದಿನ ಆವೃತ್ತಿಗಳಲ್ಲಿ ಈ ಸವಲತ್ತುಗಳು ಲಭ್ಯವಾಗಬಹುದು ಎಂದು ಆಶಿಸೋಣ.

e - ಸುದ್ದಿ


ಭಾಷೆಗಳಿಗೆ ಗೂಗ್ಲ್ ಸಹಾಯ

ಶತಕೋಟಿಗಟ್ಟಲೆ ಡಾಲರುಗಳ ದೊಡ್ಡ ರಾಶಿಯ ಮೇಲೆ ಕುಳಿತ ಅತಿ ಶ್ರೀಮಂತ ಗೂಗ್ಲ್ ಕೆಲವು ಲೋಕೋಪಯೋಗಿ ಕೆಲಸಗಳನ್ನೂ ಮಾಡುತ್ತದೆ. ಆ ಮೂಲಕ ಈ ದೊಡ್ಡ ರಾಶಿಯನ್ನು ಅಲ್ಪ ಸ್ವಲ್ಪ ಕರಗಿಸುತ್ತದೆ. ಇಂತಹ ಒಂದು ಕ್ರಿಯಾಯೋಜನೆ ಅಳಿದುಳಿದ ಹಾಗೂ ನಶಿಸುತ್ತಿರುವ ಭಾಷೆಗಳಿಗೆ ಸಹಾಯ ಮಾಡುವುದು. ಇತ್ತೀಚೆಗೆ ಗೂಗ್ಲ್ ತನ್ನ ಬ್ಲಾಗಿನಲ್ಲಿ ಈ ಬಗ್ಗೆ ಹೇಳಿಕೊಂಡಿದೆ. ವಿನಾಶದಂಚಿನಲ್ಲಿರುವ ಭಾಷೆಗಳಿಗೆ ಸಹಾಯ ಮಾಡಲೆಂದೇ ಇರುವ ಸಂಸ್ಥೆಗಳ ಜೊತೆ ಅದು ಕೈಜೋಡಿಸುತ್ತದೆ ಹಾಗೂ ಧನಸಹಾಯ ಮಾಡುತ್ತದೆ. ಹೆದರಬೇಡಿ, ಈ ಪಟ್ಟಿಯಲ್ಲಿ ಕನ್ನಡ ಭಾಷೆ ಇಲ್ಲ.

e- ಪದ
ನೈಜ ಪರದೆ (ರೆಟಿನ ಡಿಸ್‌ಪ್ಲೇ - Retina Display) - ಆಪಲ್ ಕಂಪೆನಿ ಸೃಷ್ಟಿಸಿದ ವ್ಯಾಪಾರೀ ಪದ. ಎಲ್ಲ ಗಣಕ ಪರದೆಗಳಲ್ಲಿ ಒಂದು ಇಂಚಿಗೆ ಇಂತಿಷ್ಟು ಎಂದು ಚುಕ್ಕಿಗಳಿರುತ್ತವೆ. ಇವು ಅತಿ ಹೆಚ್ಚಾದಾಗ ಚಿತ್ರವು ಚುಕ್ಕಿಗಳಿಂದಾಗಿದೆ ಎಂದು ನಮ್ಮ ಕಣ್ಣಿಗೆ ತಿಳಿಯುವುದಿಲ್ಲ. ಇಂತಹ ಪರದೆಗಳಿಗೆ ರೆಟಿನ ಡಿಸ್‌ಪ್ಲೇ ಎನ್ನುತ್ತಾರೆ. ಆಪಲ್ ಐಫೋನ್ 4S ನಲ್ಲಿ ಮೊದಲ ಬಾರಿಗೆ ಇಂತಹ ಪರದೆಗಳನ್ನು ಬಳಸಲಾಯಿತು.

e - ಸಲಹೆ

ಬೆಳ್ಳಾರಿಯ ವೀರಭದ್ರ ಅವರ ಪ್ರಶ್ನೆ: ಸಾಮಾನ್ಯ ಎಲ್‌ಸಿಡಿ ಪರದೆಗಳಲ್ಲಿ ಮೂರು ಆಯಾಮದ ಸಿನಿಮಾ ನೋಡಬಹುದೆ? ಇಲ್ಲವಾದಲ್ಲಿ ಏನೇನು ಬದಲಾವಣೆ ಮಾಡಿಕೊಳ್ಳಬೇಕು?
ಉ: ಇಲ್ಲ. ಮೂರು ಆಯಾಮದ ಪರದೆ ಪ್ರತ್ಯೇಕ ಸಿಗುತ್ತದೆ. ಅದನ್ನು ಕೊಂಡುಕೊಳ್ಳಬೇಕು. ಅದರ ಜೊತೆ ದೊರೆಯುವ ಕನ್ನಡಕ ಹಾಕಿಕೊಂಡು ವೀಕ್ಷಿಸಬೇಕು. ಮೂರು ಆಯಾಮದ ಪರದೆಗಳು ಗಣಕಕ್ಕೂ ದೊರೆಯುತ್ತಿವೆ.

ಕಂಪ್ಯೂತರ್ಲೆ



ಕೋಲ್ಯ ಬೆಳಿಗ್ಗೆ ಎದ್ದು ಕನ್ನಡಿ ಮುಂದೆ ನಿಂತುಕೊಂಡು ತನ್ನ ಪ್ರತಿಬಿಂಬ ನೋಡಹೊರಟ. ಆಗ ಆತನಿಗೆ ಕನ್ನಡಿಯಲ್ಲಿ ಕಂಡು ಬಂದುದು “Error 404: image not found”.

1 ಕಾಮೆಂಟ್‌: