ಸೋಮವಾರ, ಫೆಬ್ರವರಿ 27, 2012

ಗಣಕಿಂಡಿ - ೧೪೫ (ಫೆಬ್ರವರಿ ೨೭, ೨೦೧೨)

ಅಂತರಜಾಲಾಡಿ

ಗುಂಪುನಿಧಿ ಜಾಲತಾಣ

ನಿಮ್ಮಲ್ಲಿ ಒಂದು ಅದ್ಭುತ ಯೋಜನೆ ಇದೆ. ಅದನ್ನು ಪರಿಪೂರ್ಣಗೊಳಿಸಿದರೆ ಹಲವರಿಗೆ ತುಂಬ ಉಪಯೋಗವಾಗುವುದು. ಅದು ಸಮಾಜೋದ್ಧಾರದ ಯೋಜನೆ ಇರಬಹುದು, ಸರಳವಾದ ಆದರೆ ತುಂಬ ಉಪಯುಕ್ತವಾದ ತಂತ್ರಾಂಶ ಅಥವಾ ಜಾಲತಾಣ ತಯಾರಿ ಇರಬಹುದು, ಯಾವುದೋ ತಂತ್ರಜ್ಞಾನಾಧಾರಿತ ಯಂತ್ರ ತಯಾರಿ ಇರಬಹುದು, ಅಥವಾ ಜೀವಶಾಸ್ತ್ರ, ತಳಿತಂತ್ರಜ್ಞಾನ ಇರಬಹುದು -ಹೀಗೆ ಏನೂ ಬೇಕಾದರೂ ಆಗಿರಬಹುದು. ಆದರೆ ನಿಮ್ಮಲ್ಲಿ ಅದನ್ನು ಕಾರ್ಯಗತಗೊಳಿಸಲು ಬೇಕಾದ ಬಂಡವಾಳ ಇಲ್ಲ. ಈ ಸಮಸ್ಯೆಗೆ ಒಂದು ಸರಳ ಪರಿಹಾರವೆಂದರೆ ಜನರಿಂದಲೇ ಗುಂಪುನಿಧಿ ಸಂಗ್ರಹ ಮಾಡುವುದು. ಹೀಗೆ ಮಾಡಲು ನೀವು ಒಂದು ಜಾಲತಾಣ ನಿರ್ಮಿಸಿ ಜನರನ್ನು ಕೇಳಿಕೊಳ್ಳಬಹುದು. ಆದರೆ ನಿಮ್ಮಲ್ಲಿ ಯೋಜನೆ ಇದೆ, ಅದು ಯಾವುದೋ ಒಂದು ಜಾಲತಾಣದಲ್ಲಿದೆ ಎಂದು ಜನರಿಗೆ ತಿಳಿಯುವುದು ಹೇಗೆ? ಈ ಸಮಸ್ಯೆಗೆ ಪರಿಹಾರ ರೂಪವಾಗಿ ಕೆಲವು ಗುಂಪುನಿಧಿಸಂಗ್ರಹದ ಜಾಲತಾಣಗಳಿವೆ. ಅಂತಹ ಒಂದು ಜಾಲತಾಣ www.rockethub.com

ಡೌನ್‌ಲೋಡ್

3-D ಗ್ರಾಫಿಕ್ಸ್

ಗಣಕದಲ್ಲಿ ಮೂರು ಆಯಾಮದ ಪ್ರತಿಕೃತಿ ತಯಾರಿಸುವುದು ಒಂದು ಪೂರ್ಣಪ್ರಮಾಣದ ಉದ್ಯೋಗವೇ ಆಗಿದೆ. ಹಲವು ಚಲನಚಿತ್ರಗಳೂ ಗ್ರಾಫಿಕ್ಸ್ ಬಳಸಿಯೇ ಇರುತ್ತವೆ. ಜ್ಯುರಾಸಿಕ್ ಪಾರ್ಕ್ ಯಾರಿಗೆ ಗೊತ್ತಿಲ್ಲ? ಅದರಲ್ಲಿ ಬರುವ ಡೈನೋಸಾರಸ್ ಗಣಕ ಬಳಸಿ ಗ್ರಾಫಿಕ್ಸ್ ಮೂಲಕ ತಯಾರಾಗಿರುವುದು. ಇಂತಹ ಮಾದರಿಗಳನ್ನು ತಯಾರಿಸಬೇಕಾದರೆ ದುಬಾರಿ ಗಣಕ ಮತ್ತು ಜೊತೆಗೆ ದುಬಾರಿ ತಂತ್ರಾಂಶ ಬೇಕು. ಮೂರು ಆಯಾಮದ ಗ್ರಾಫಿಕ್ಸ್ ತಯಾರಿಸಲು ಅನುವು ಮಾಡಿಕೊಡುವ ಒಂದು ಉಚಿತ ಹಾಗೂ ಮುಕ್ತ ತಂತ್ರಾಂಶ  Art of Illusion. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.artofillusion.org.

e - ಸುದ್ದಿ

ಕಳ್ಳರನ್ನು ಓಡಿಸಲು ಟ್ವಿಟ್ಟರ್ ಸಹಾಯ

ಇಜಿಪ್ಟ್ ಮತ್ತು ಇನ್ನೂ ಕೆಲವು ದೇಶಗಳಲ್ಲಿ ಆಡಳಿತ ನಡೆಸುತ್ತಿದ್ದ ನಿರಂಕುಶ ಪ್ರಭುತ್ವವನ್ನು ಹೊಡೆದೋಡಿಸಲು ಚಳವಳಿಗೆ ಜನರನ್ನು ಸೇರಿಸಲು ಟ್ವಿಟ್ಟರ್ ಬಳಕೆಯಾದ ಕಥೆ ಇದೇ ಅಂಕಣದಲ್ಲಿ ವರದಿಯಾಗಿತ್ತು. ಈಗ ಸ್ವಲ್ಪ ಬೇರೆ ರೀತಿಯ ಕಥೆ. ಕೀನ್ಯ ದೇಶದ ಒಂದು ನಗರಾಧಿಪತಿಗೆ ನಡುರಾತ್ರಿ ಒಂದು ಫೋನ್ ಕರೆ ಬರುತ್ತದೆ - “ನಮ್ಮ ಪಕ್ಕದ ಮನೆಗೆ ಕಳ್ಳರು ನುಗ್ಗುತ್ತಿದ್ದಾರೆ, ಸಹಾಯ ಮಾಡಿ” ಎಂದು. ಅವರು ಕೂಡಲೆ ಟ್ವಿಟ್ಟರ್‌ನಲ್ಲಿ ಸಂದೇಶ ದಾಖಲಿಸಿ ಆ ಸ್ಥಳದ ಸುತ್ತಮುತ್ತ ಇರುವವರನ್ನು ಸಹಾಯ ಮಾಡಲು ಕೋರಿಕೊಳ್ಳುತ್ತಾರೆ. ಅವರನ್ನು ಟ್ವಿಟ್ಟರಿನಲ್ಲಿ ಹಿಂಬಾಲಿಸುತ್ತಿದ್ದ ಹಲವು ಮಂದಿ ಕೂಡಲೆ ಆ ಮನೆಯ ಮುಂದೆ ಜಮಾಯಿಸಿ ಕಳ್ಳರನ್ನು ಹೊಡೆದೋಡಿಸುತ್ತಾರೆ.

e- ಪದ

ಗುಂಪುನಿಧಿ (crowdfunding) - ಹಲವಾರು ಮಂದಿ ಸೇರಿ ಸಹಯೋಗಿ ವಿಧಾನದಿಂದ ಯಾವುದಾದರೊಂದು ಯೋಜನೆಗೆ ಧನಸಹಾಯ ಒದಗಿಸುವುದು. ಸಾಮಾನ್ಯವಾಗಿ ಇದನ್ನು ಅಂತರಜಾಲದ ಮೂಲಕ ಮಾಡಲಾಗುತ್ತದೆ. ಈಗೀಗ ಇಂತಹ ಕೆಲಸಗಳಿಗೆಂದೇ ಜಾಲತಾಣಗಳು ಹುಟ್ಟಿಕೊಂಡಿವೆ.

e - ಸಲಹೆ

ಹುಬ್ಬಳ್ಳಿಯ ಗೋವರ್ಧನರ ಪ್ರಶ್ನೆ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಬಗ್ಗೆ ಕನ್ನಡದಲ್ಲಿ ತಿಳಿದುಕೊಳ್ಳಲು ಯಾವ ವೆಬ್ ಸೈಟ್ನಲ್ಲಿ ಸಿಗುತ್ತದೆ?

ಉ: ನನಗೆ ತಿಳಿದಂತೆ ಅಂತಹ ಯಾವ ಜಾಲತಾಣವೂ ಇಲ್ಲ. ಓದುಗರಲ್ಲಿ ಯಾರಿಗಾದರೂ ತಿಳಿದಿದ್ದರೆ ತಿಳಿಸಬೇಕಾಗಿ ವಿನಂತಿ. ಕೆಲವು ವಿಜ್ಞಾನ ಬ್ಲಾಗುಗಳಿವೆ. ಆದರೆ ಅವು ನಿಮಗೆ ಬೇಕಾದಂತಹವಲ್ಲ. ಕರ್ನಾಟಕ ಸರಕಾರದ ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯವರು ಈ ಕಡೆ ಸ್ವಲ್ಪ ಗಮನ ನೀಡಬೇಕು.

ಕಂಪ್ಯೂತರ್ಲೆ

ಕೋಲ್ಯ ಮೈಕ್ರೋಸಾಫ್ಟ್ ಕಂಪೆನಿಗೆ ಫೋನ್ ಮಾಡಿ ಕೇಳಿದ “ವಿಂಡೋಸ್ ೩೨ ಬಿಟ್‌ಗಿಂತ ವಿಂಡೋಸ್ ೬೪ ಬಿಟ್ ಒಳ್ಳೆಯದು ಎಂದು ಯಾರೋ ಹೇಳಿದರು. ಆದರೆ ನನ್ನಲ್ಲಿ ವಿಂಡೋಸ್ ೩೨ ಬಿಟ್ ಡಿವಿಡಿ ಇದೆ. ನಾನು ಅದನ್ನು ಎರಡು ಸಲ ಇನ್‌ಸ್ಟಾಲ್ ಮಾಡಿದರೆ ಅದು ವಿಂಡೋಸ್ ೬೪ ಬಿಟ್ ಆಗುತ್ತದೆಯೇ?”


ಮಂಗಳವಾರ, ಫೆಬ್ರವರಿ 21, 2012

ಗಣಕಿಂಡಿ - ೧೪೪ (ಫೆಬ್ರವರಿ ೨೦, ೨೦೧೨)

ಅಂತರಜಾಲಾಡಿ

ಸ್ವತಂತ್ರ ಉದ್ಯೋಗಿಯಾಗಿ

ನಿಮಗೆ ಒಂದು ಸಣ್ಣ ಕೆಲಸ ಮಾಡಿಸಬೇಕಾಗಿದೆ. ಉದಾಹರಣೆಗೆ ನಿಮ್ಮ ಸಣ್ಣ ಕಂಪೆನಿಯ ಬಗ್ಗೆ ಒಂದು ಚಿಕ್ಕ ಜಾಲತಾಣ ಅಥವಾ ಪ್ರಸೆಂಟೇಶನ್. ಇದಕ್ಕಾಗಿ ದೊಡ್ಡ ಕಂಪೆನಿಯನ್ನು ಹಿಡಿದರೆ ಅವರು ಹೇಳುವಷ್ಟು ಹಣ ಕೊಡಲು ನಿಮ್ಮಿಂದ ಅಸಾಧ್ಯ. ಆಗ ನೀವು ಇಂತಹ ಕೆಲಸಗಳನ್ನು ಮಾಡುವ ಸ್ವತಂತ್ರ ಉದ್ಯೋಗಿಯನ್ನು (freelancer) ಹುಡುಕುತ್ತೀರಿ. ಅದೇ ರೀತಿ ನೀವೇ ಒಬ್ಬ ಸ್ವತಂತ್ರ ಉದ್ಯೋಗಿಯಾಗಿ ಕೆಲಸ ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ಈ ಎರಡು ರೀತಿಯವರನ್ನು ಒಂದುಗೂಡಿಸುವ ಹಲವಾರು ಜಾಲತಾಣಗಳಿವೆ. ಅಂತಹ ಒಂದುಜಾಲತಾಣ www.freelancer.in. ಲಭ್ಯವಿರುವ ಕೆಲಸಗಳನ್ನು ಹಲವು ವಿಧಗಳಲ್ಲಿ ಪಟ್ಟಿ ಮಾಡಲಾಗಿದೆ. ಕೆಲಸ ಬೇಕಿದ್ದವರು ಇವುಗಳಲ್ಲಿ ತಮ್ಮ ಪರಿಣತಿಗೆ ಸರಿಹೊಂದುವುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹರಾಜಿನಲ್ಲಿ ಭಾಗವಹಿಸಬೇಕು.

ಡೌನ್‌ಲೋಡ್

ವಸಾಹುತುಶಾಹಿಗಳಿಗೆ

ಕಾಲೊನಿ ನಿರ್ಮಾಣ ಒಂದು ರೀತಿಯ ಆಟ. ಗಣಕಗಳಲ್ಲಿ ಹಾಗೂ ಅಂತರಜಾಲದಲ್ಲಿ ಇಂತಹ ಆಟಗಳು ಹಲವಾರಿವೆ. ತುಂಬ ಜನಪ್ರಿಯವೂ ಆಗಿವೆ. ಈ ಆಟಗಳು ತುಂಬ ದುಬಾರಿ. ಹಾಗಿದ್ದೂ ಉಚಿತ ಆಟಗಳೂ ಇವೆ. ಅವು ವಾಣಿಜ್ಯಕ ಆಟಗಳಷ್ಟು ಉತ್ತಮ ಇಲ್ಲದಿರಬಹುದು. ಆದರೆ ಅದೇ ಮಾದರಿಯ ಅನುಭವ ನೀಡಬಲ್ಲವು. ಕಾಲೊನಿ ನಿರ್ಮಾಣದ ಅಂತಹ ಒಂದು ಉಚಿತ ಆಟ ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.freecol.org. ೧೯೪೨ನೆಯ ಇಸವಿಯಲ್ಲಿ ಪ್ರಾರಂಭವಾಗುವ ಆಟದ ಉದ್ದೇಶ ಅಮೆರಿಕದಲ್ಲಿ ವಸಾಹುತುಗಳ ನಿರ್ಮಾಣ. ಇಂಗ್ಲೆಂಡ್, ಫ್ರಾನ್ಸ್, ನೆದರ್ಲ್ಯಾಂಡ್ ಮತ್ತು ಸ್ಪೈನ್ ದೇಶಗಳು ಅಮೆರಿಕದಲ್ಲಿ ವಸಾಹುತು ನಿರ್ಮಾಣ ಮಾಡಿದ ಕಥೆಯನ್ನು ಆಧರಿಸಿ ಈ ಆಟವನ್ನು ತಯಾರಿಸಲಾಗಿದೆ. ಈ ಆಟ ಆಡಲು ನಿಮ್ಮ ಗಣಕದಲ್ಲಿ ಜಾವಾ ಇರತಕ್ಕದ್ದು. ಅದನ್ನು java.com/en/download ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

e - ಸುದ್ದಿ

ಗೂಗ್ಲ್ ಗೋಪ್ಯತೆ ಬದಲಾವಣೆ

ಗೂಗ್ಲ್ ಬಳಸುವವರಿಗೆ ಅದರ ಹಲವು ಸೇವೆಗಳೂ ಪರಿಚಿತ. ಅವುಗಳಲ್ಲಿ ಪ್ರಮುಖವಾದವು ಜಿಮೈಲ್ (ಇಮೈಲ್), ಪಿಕಾಸಾ, ಯುಟ್ಯೂಬ್, ಗೂಗ್ಲ್+, ಇತ್ಯಾದಿ. ಪ್ರತಿ ಸೇವೆಗೂ ತನ್ನದೇ ಆದ ಗೋಪ್ಯತೆ ನಿಯಮಗಳಿದ್ದವು. ಈಗ ಗೂಗ್ಲ್ ಹೊಸ ನಿಯಮ ಪ್ರಕಾರ ಎಲ್ಲ ಸೇವೆಗಳಿಗೂ ಒಂದೇ ವ್ಯಕ್ತಿತ್ವ ಮತ್ತು ನಿಯಮ ಜಾರಿ ಆಗುತ್ತದೆ. ಅಂದರೆ ನಿಮಗೆ ಯುಟ್ಯೂಬ್‌ನಲ್ಲಿ ಒಂದು ಅವತಾರ, ಗೂಗ್ಲ್+ ನಲ್ಲಿ ಇನ್ನೊಂದು, ಪಿಕಾಸಾದಲ್ಲಿ ಮಗದೊಂದು ಅವತಾರ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಈ ಹೊಸ ನಿಯಮದಿಂದಾಗಿ ಗೂಗ್ಲ್‌ಗೆ ನಿಮ್ಮ ಬಗ್ಗೆ ನಿಮ್ಮ ಹೆಂಡತಿಗಿಂತಲೂ ಹೆಚ್ಚು ತಿಳಿದಿರುತ್ತದೆ ಎಂದು ತಂತ್ರಜ್ಞಾನದ ಬಗ್ಗೆ ವಿಮರ್ಶೆ ಬರೆಯುವ ಜಾಲತಾಣಗಳು ಟೀಕಿಸಿವೆ.

e- ಪದ

ನೋಮೋಫೋಬಿಯ (Nomophobia) - ಮೊಬೈಲ್ ಫೋನ್ ಇಲ್ಲದಾಗುವ ಭಯ. ಇದು ಇಂಗ್ಲಿಶಿನಲ್ಲಿ no-mobile-phone phobia ಎಂಬುದರ ಹೃಸ್ವ ರೂಪ. ಫೋಬಿಯ ಎಂದರೆ ಭಯ. ಹೈಡ್ರೋಫೋಬಿಯ ಎಂದರೆ ನೀರಿನ ಭಯ. ಅದೇ ರೀತಿ ಇದು ಒಂದು ಹೊಸ ನಮೂನೆಯ ಭಯ.

e - ಸಲಹೆ

ಬಿ. ಎಸ್. ಪಾಟೀಲರ ಪ್ರಶ್ನೆ: ನಾನೊಬ್ಬ ಸಂಶೋಧಕ. ಸಂಶೋಧನೆಗೆ ಸಹಾಯ ಮಾಡುವ ಮುಖ್ಯವಾಗಿ ಸಂಶೋಧನಾ ನಿಯತಕಾಲಿಕೆಗಳಲ್ಲಿ ಬಂದ ವಿಷಯಗಳನ್ನು ಹುಡುಕುವ ಸೌಲಭ್ಯವೇನಾದರೂ ಇದೆಯೇ?
ಉ: ಗೂಗ್ಲ್‌ನವರ scholar.google.com ಬಳಸಬಹುದು. worldwidescience.org ಕೂಡ ಬಳಸಬಹುದು. ಇವೆರಡು ಉಚಿತ. ವಾಣಿಜ್ಯಕ ಸೌಲಭ್ಯಗಳು ಹಲವಾರಿವೆ.

ಕಂಪ್ಯೂತರ್ಲೆ

ಎರಡನೆಯ ತರಗತಿಯ ಗಣಿತ ಪ್ರಶ್ನೆ: ಗಂಡ ಹೆಂಡತಿ ಮಗ ಮಗಳು ಇರುವ ಮನೆಯಲ್ಲಿ ಎರಡು ಲ್ಯಾಂಡ್‌ಲೈನ್ ಫೋನ್, ಐದು ಪೊಬೈಲ್ ಫೋನ್‌ಗಳಿವೆ. ಅವುಗಳಲ್ಲಿ ಎರಡು ಮೊಬೈಲ್ ಫೋನ್‌ಗಳಿಗೆ ಡ್ಯುವಲ್ ಸಿಮ್ ಸೌಲಭ್ಯ ಇದೆ. ಹಾಗಿದ್ದರೆ ಆ ಮನೆಯಲ್ಲಿರುವ ಒಟ್ಟು ಫೋನ್ ಸಂಪರ್ಕಗಳೆಷ್ಟು?

ಸೋಮವಾರ, ಫೆಬ್ರವರಿ 13, 2012

ಗಣಕಿಂಡಿ - ೧೪೩ (ಫೆಬ್ರವರಿ ೧೩, ೨೦೧೨)

ಅಂತರಜಾಲಾಡಿ

ಸಾಮುದಾಯಿಕ ರೇಡಿಯೋ


ಭಾರತ ಸರಕಾರವು ಸಾಮುದಾಯಿಕ ರೇಡಿಯೋ ಕೇಂದ್ರಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಿದೆ. ಇದು ೨೦೦೨ನೆಯ ಇಸವಿಯಿಂದ ಆಚರಣೆಯಲ್ಲಿದೆ. ಆದರೆ ಇದರ ಬಗ್ಗೆ ಹೆಚ್ಚಿನ ಜನರಿಗೆ ಪೂರ್ತಿ ಮಾಹಿತಿ ಇಲ್ಲ. ೩ ವರ್ಷಗಳಿಂದ ಸಮಾಜ ಸೇವೆಯಲ್ಲಿರುವ ಯಾವುದೇ ಸರಕಾರೇತರ ಸಂಸ್ಥೆ ಈ ಸಾಮುದಾಯಿಕ ರೇಡಿಯೋ ಕೇಂದ್ರ ಸ್ಥಾಪಿಸಲು ಪರವಾನಗಿಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿರುವ ಜಾಲತಾಣ ccfcindia.net. ಈ ಜಾಲತಾಣದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು, ಪ್ರಶ್ನೋತ್ತರಗಳು, ಅರ್ಜಿ, ಸಲ್ಲಿಸಿದ ಅರ್ಜಿಯ ಸ್ಥಿತಿ, ಎಲ್ಲ ಮಾಹಿತಿಗಳು ಲಭ್ಯವಿವೆ.

ಡೌನ್‌ಲೋಡ್

ಸಂಗೀತ ಡೌನ್‌ಲೋಡ್ ಮಾಡಿ

ವಿಶ್ವವ್ಯಾಪಿಜಾಲದಲ್ಲಿರುವ ಕೋಟ್ಯನುಕೋಟಿ ಜಾಲತಾಣಗಳಲ್ಲಿ ಹಲವು ಜಾಲತಾಣಗಳಲ್ಲಿ ಹಲವು ಮಂದಿ ಉಚಿತವಾಗಿ ಸಂಗೀತವನ್ನು ಹಂಚುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಎಂಪಿ೩ ವಿಧಾನದಲ್ಲಿ ಸಂಗೀತದ ಫೈಲುಗಳನ್ನು ಡೌನ್‌ಲೋಡ್ ಮಾಡಲು ನೀಡುತ್ತಾರೆ. ಈ ರೀತಿ ಎಲ್ಲೆಲ್ಲ ಸಂಗೀತ ಉಚಿತವಾಗಿ ಲಭ್ಯವಿದೆ ಎಂದು ತಿಳಿಯುವುದು ಹೇಗೆ? ನಂತರ ಅದನ್ನು ಒಂದೊಂದಾಗಿ ಡೌನ್‌ಲೋಡ್ ಮಾಡಬೇಕಲ್ಲ? ಈ ಎಲ್ಲ ಕೆಲಸಗಳನ್ನು ಒಂದೆ ಕಡೆ ಒಟ್ಟಿಗೆ ಮಾಡಲು ಅನುವು ಮಾಡಿಕೊಡುವ ಉಚಿತ ತಂತ್ರಾಂಶ music2pc. ಇದು ಬೇಕಿದ್ದಲ್ಲಿ ನೀವು ಭೇಟಿ ನೀಡಬೇಕಾದ ಜಾಲತಾಣ www.music2pc.com.  

e - ಸುದ್ದಿ


ತನ್ನನ್ನು ತಾನೆ ಬೆಂಬತ್ತಿದ ಭೂಪ

ಒಂದು ತಣ್ಣಗಿನ ಕತ್ತಲಿನ ರಾತ್ರಿಯಲ್ಲಿ ಇಂಗ್ಲೆಂಡಿನ ರಸ್ತೆಯೊಂದರಲ್ಲಿ ಗುಪ್ತವಾಗಿ ಮಫ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೋಲಿಸನೊಬ್ಬನಿಗೆ ಪೋಲೀಸ್ ಕೇಂದ್ರದಿಂದ ವಯರ್‌ಲೆಸ್ ಮೂಲಕ ಸಂದೇಶ ಬಂದಿತು. ಅದರ ಪ್ರಕಾರ ಅವನಿರುವ ಜಾಗದ ಸನಿಹದಲ್ಲೇ ಒಬ್ಬ ಸಂಶಯಾಸ್ಪದ ವ್ಯಕ್ತಿ ತಿರುಗಾಡುತ್ತಿದ್ದಾನೆ. ಹಾಗೆಂದು ಅವರು ಕ್ಲೋಸ್ಡ್ ಸರ್ಕ್ಯುಟ್ ಟಿವಿಯಲ್ಲಿ ನೋಡಿ ವರದಿ ಮಾಡುತ್ತಿದ್ದರು. ಸರಿ. ಆತನನ್ನು ಹಿಡಿದೇ ಬಿಡೋಣ ಎಂದುಕೊಂಡ ಪೋಲೀಸ್ ಆತನ ಹುಡುಕಾಟದಲ್ಲಿ ತೊಡಗುತ್ತಾನೆ. ಆತ ಹೋದಂತೆಲ್ಲ ಕೇಂದ್ರ ಕಚೇರಿಯಿಂದ ಟಿವಿ ನೋಡಿ ಸಂಶಯಾಸ್ಪದ ವ್ಯಕ್ತಿ ಇರುವ ಜಾಗದ ಮಾಹಿತಿ ಬರುತ್ತಲೇ ಇರುತ್ತದೆ. ಈತ ಹುಡುಕುತ್ತಲೇ ಇರುತ್ತಾನೆ. ೨೦ ನಿಮಿಷಗಳ ಸಾಹಸದ ನಂತರ ಆತನಿಗೆ ಅರಿವಾದುದೇನೆಂದರೆ ಕೇಂದ್ರದಿಂದ ಸಂಶಯಾಸ್ಪದ ವ್ಯಕ್ತಿ ಎಂದು ವರದಿ ಮಾಡಿದ್ದು ತನ್ನನ್ನೇ ಟಿವಿಯಲ್ಲಿ ನೋಡಿ ಎಂದು!

e- ಪದ

ಫ್ರೀಮಿಯಂ (Freemium) - ತಂತ್ರಾಂಶವನ್ನು ಕೆಲವು ಮಿತಿಗಳೊಡನೆ ಉಚಿತವಾಗಿ  ಹಂಚುವುದು. ತಂತ್ರಾಂಶದ ಎಲ್ಲ ಸವಲತ್ತುಗಳನ್ನು ಬಳಸಬೇಕಾದರೆ ಹಣ ನೀಡಬೇಕಾಗುತ್ತದೆ.

e - ಸಲಹೆ


ಕಿರಣ್ ಹೆಬ್ಬಾರ್ ಅವರ ಪ್ರಶ್ನೆ: ನಾನು uk truck simulator ಎಂಬ ಆಟವನ್ನು ಡೌನ್‌ಲೋಡ್ ಮಾಡಿದ್ದೇನೆ. ಇದಕ್ಕೆ ಸೀರಿಯಲ್ ನಂಬರ್ ಅಥವಾ ಕೀ ಎಲ್ಲಿಸಿಗುತ್ತದೆ?
ಉ: ನೀವು ಆಟದ ಪ್ರಾಯೋಗಿಕ ಆವೃತ್ತಿಯನ್ನು ಡೌನ್‌ಲೋಡ್ ಮಾಡಿದ್ದೀರಿ. ಪೂರ್ತಿ ಆವೃತ್ತಿ ಬೇಕಿದ್ದರೆ ಹಣ ನೀಡಿ ಕೊಂಡುಕೊಳ್ಳಬೇಕು.

ಕಂಪ್ಯೂತರ್ಲೆ

ಕೋಲ್ಯನ ಮಗ ಯಾವಾಗಲೂ ಗಣಕದಲ್ಲಿ ಆಟ ಆಡುತ್ತಿದ್ದ. ಕೋಲ್ಯ ಮಗನಿಗೆ ದಬಾಯಿಸಿದ “ಕಂಪ್ಯೂಟರ್‌ನಲ್ಲಿ ಗೇಮ್ ಆಡಿದ್ದು ಸಾಕು. ಸ್ವಲ್ಪ ಹೊರಗೆ ಹೋಗಿ ಆಡು”. ಕೋಲ್ಯನ ಮಗ ಹೊರಗೆ ಹೋದ. ಹೋಗುವಾಗ ಗಣಕಕ್ಕೆ ರಿಮೋಟ್ (ದೂರನಿಯಂತ್ರಕ) ತೆಗೆದುಕೊಂಡು ಹೋದ. ಮನೆಹೊರಗಿನಿಂದ ರಿಮೋಟ್ ಮೂಲಕ ಆಟ ಆಡಿದ.

ಸೋಮವಾರ, ಫೆಬ್ರವರಿ 6, 2012

ಗಣಕಿಂಡಿ - ೧೪೨ (ಫೆಬ್ರವರಿ ೦೬, ೨೦೧೨)

ಅಂತರಜಾಲಾಡಿ

ಸಂಗೀತ ಹಂಚಿ

ಸಂಗೀತಗಾರರಿಗೆ ತಾವು ತಯಾರಿಸಿದ ಸಂಗೀತವನ್ನು ಇತರೆ ಸಂಗೀತಗಾರರಿಗೆ ಹಾಗೂ ಜಗತ್ತಿಗೆಲ್ಲ ಹಂಚಲು ಅನುವು ಮಾಡಿಕೊಡುವ ಜಾಲತಾಣ ಸೌಂಡ್‌ಕ್ಲೌಡ್. ಸಂಗೀತ ತಯಾರಿಕೆಯ ಹಂತದಲ್ಲಿರುವಾಗ ಇತರೆ ಸಂಗೀತಗಾರರಿಗೆ ಹಾಗೂ ಸ್ನೇಹಿತರಿಗೆ ಅದನ್ನು ಕೇಳಿಸಿ ಅವರಿಂದ ಹಿಂಮಾಹಿತಿ ಪಡೆದು ತಮ್ಮ ಸಂಗೀತ ಸಂಯೋಜನೆಯನ್ನು ಸುಧಾರಿಸಲು ಈ ಜಾಲತಾಣ ಅನುವು ಮಾಡಿಕೊಡುತ್ತದೆ. ಸಂಗಿತವನ್ನು ತಮ್ಮ ಬ್ಲಾಗ್ ಅಥವಾ ಜಾಲತಾಣದಲ್ಲಿ ಅಡಕಗೊಳಿಸಲು ಇದು ಸಹಾಯ ಮಾಡುತ್ತದೆ. ಸಂಗೀತದ ಬೇರೆ ಬೇರೆ ಭಾಗಗಳಿಗೆ ಸೂಕ್ತ ಶೀರ್ಷಿಕೆ ನೀಡಬಹುದು - “ಈ ಭಾಗದಲ್ಲಿ  ಕೊಳಲು ಅದ್ಭುತವಾಗಿದೆ, ಈ ಭಾಗದಲ್ಲಿ ಆಲಾಪನೆ ಚೆನ್ನಾಗಿದೆ” - ಇತ್ಯಾದಿ ಟಪ್ಪಣಿ ಸೇರಿಸಬಹುದು. ಈ ಜಾಲತಾಣದ ವಿಳಾಸ - soundcloud.com

ಡೌನ್‌ಲೋಡ್

ಪ್ರೌನ್

ಓಟದ ಆಟಗಳು ಸಾವಿರಾರಿವೆ. ಹೆಚ್ಚಿನ ಓಟದ ಆಟಗಳಲ್ಲಿ ಯಾವುದಾದರು ವಾಹನವನ್ನು ರಸ್ತೆಯಲ್ಲಿ ಇಲ್ಲವೇ ಕಾಡಿನಲ್ಲಿ ಓಡಿಸಬೇಕು. ಇಲ್ಲೊಂದು ಬೇರೆಯೇ ಬಗೆಯ ಓಟದ ಆಟವಿದೆ. ಇದರಲ್ಲಿ ಯಾವುದೇ ವಾಹನವಿಲ್ಲ. ರಸ್ತೆಯೂ ಇಲ್ಲ. ಬದಲಿಗೆ ಒಂದು ಕೊನೆಯೇ ಇಲ್ಲದ ದಪ್ಪ ಹಗ್ಗಕ್ಕೆ ಅಂಟಿಕೊಂಡ ಒಂದು ಗೋಲವನ್ನು ಓಡಿಸಬೇಕು. ದಾರಿಯಲ್ಲಿ ಎದುರಾಗುವ ಅಡ್ಡಿಗಳನ್ನು ತಪ್ಪಿಸಲು ಗೋಲವನ್ನು ಹಗ್ಗದ ಇನ್ನೊಂದು ಬದಿಗೆ ತಿರುಗಿಸಬೇಕು. ಬೇರೆ ಯಾವ ರೀತಿಯ ಹೊಡೆದಾಟಗಳಿಲ್ಲ. ಇದರಲ್ಲಿ ಹಲವು ಹಂತಗಳಿವೆ. ಹಾಗೆಯೇ ೪ ಜನರು ಬೇಕಿದ್ದರೂ ಒಟ್ಟಿಗೆ ಆಡಬಹುದು. ನಿಮ್ಮದೇ ಹಳೆಯ ಓಟದ ವಿರುದ್ಧ ನೀವೇ ಮತ್ತೊಮ್ಮೆ ಓಡಿಸಬಹುದು. ಈ ಆಟದ ಹೆಸರು ಪ್ರೌನ್. ಇದು ಬೇಕಿದ್ದರೆ ನೀವು ಭೇಟಿ ನೀಡಬೇಕಾದ ಜಾಲತಾಣದ ವಿಳಾಸ www.proun-game.com

e - ಸುದ್ದಿ

ಟ್ವೀಟ್ ಮಾಡು ಜೈಲಿಗೆ ಹೋಗು

ಟ್ವೀಟ್ ಮಾಡಿ ಜೈಲಿಗೆ ಹೋದ ಇನ್ನೊಂದು ಹೊಸ ಪ್ರಕರಣ. ಇದು ದಕ್ಷಿಣ ಕೊರಿಯಾದಿಂದ ವರದಿಯಾಗಿದೆ. ದಕ್ಷಿಣ ಕೊರಿಯಾದ ಒಬ್ಬಾತ ಉತ್ತರ ಕೊರಿಯ ಸರಕಾರದ ಟ್ವಿಟ್ಟರ್ ಖಾತೆಯಲ್ಲಿ ಬಂದುದನ್ನು ಮರುಟ್ವೀಟ್ ಮಾಡಿದ್ದ. ಅದರಲ್ಲಿ ಉತ್ತರ ಕೊರಿಯಾದ ಹೊಗಳಿಕೆ ಇತ್ತು. ಈತ ಅದನ್ನು ಗೇಲಿ ಮಾಡಲೆಂದು ತನ್ನ ಹೆಸರು ಮತ್ತು ಫೋಟೋ ಸೇರಿಸಿದ್ದ. ಆದರೆ ದಕ್ಷಿಣ ಕೊರಿಯ ಸರಕಾರದ ಪ್ರಕಾರ ಆತ ರಾಷ್ಟ್ರೀಯ ಸುರಕ್ಷತೆಯ ಕಾನೂನನ್ನು ಉಲ್ಲಂಘಿಸಿದ್ದಾನೆ. ಅದಕ್ಕಾಗಿ ಆತನನ್ನು ಸೆರೆಮನೆಗೆ ದೂಡಲಾಗಿದೆ. ತಾನು ಉತ್ತರ ಕೊರಿಯಾವನ್ನು ಹಾಸ್ಯ ಮಾಡಿದ್ದು ಎಂದು ಆತ ವಿವರಿಸಿದರೂ ಅಧಿಕಾರಿಗಳು ಅದನ್ನು ಒಪ್ಪಲಿಲ್ಲ.

e- ಪದ

ಟ್ಯಾಬ್ಲೆಟ್ ಗಣಕ (tablet PC)  - ಇವುಗಳ ಗಾತ್ರ ಸುಮಾರು ೮ ಇಂಚಿನಿಂದ ೧೦ ಇಂಚು ಉದ್ದ, ೫ ರಿಂದ ೮ ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ. ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchsensitive screen) ಪರದೆ ಇರುತ್ತದೆ. ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಜನಸಾಮಾನ್ಯರಿಗೆ ಬಹುಮಟ್ಟಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ ಇದು ಮಾಡಬಲ್ಲುದು. ಉದಾಹರಣೆಗೆ ಇಮೈಲ್, ಅಂತರಜಾಲ ವೀಕ್ಷಣೆ, ಕಡತ ತಯಾರಿ, ವಿ-ಪುಸ್ತಕ ಓದುವುದು -ಇತ್ಯಾದಿ.

e - ಸಲಹೆ


ಹುಬ್ಬಳ್ಳಿಯ ಪ್ರಶಾಂತ್ ಅವರ ಪ್ರಶ್ನೆ: ಹೊಸ ಫೋಲ್ಡರ್ ಮಾಡಿ  "con" ಅಂತ ಹೆಸೆರು ನೀಡುವಾಗ ಯಾಕೆ ತೆಗೆದುಕೊಳ್ಳುವುದಿಲ್ಲ ಮತ್ತು ಇಂತಹದೆ ಯಾವ ಯಾವ ಹೆಸರುಗಳು ತೆಗೆದುಕೊಳ್ಳುವುದಿಲ್ಲ?

ಉ: ಇದಕ್ಕೆ ಉತ್ತರ ಮೈಕ್ರೋಸಾಫ್ಟ್ ಕಾರ್ಯಚರಣೆಯ ವ್ಯವಸ್ಥೆಗಳ ಇತಿಹಾಸದಲ್ಲಿದೆ. ವಿಂಡೋಸ್ ಬರುವುದಕ್ಕೆ ಮೊದಲು ಡಾಸ್ (DOS) ಇತ್ತು. ಅದರಲ್ಲಿ CON ಅಂದರೆ Console ಅಂದರೆ ಪರದೆ ಎಂದು ಅರ್ಥ. ಇದು ಡಾಸ್‌ನಲ್ಲಿ ಕಾದಿರಿಸಿದ ಪದ (reserved word). ಆದುದರಿಂದ ಇದನ್ನು ಯಾವುದೇ ಫೋಲ್ಡರ್ ಅಥವಾ ಫೈಲುಗಳಿಗೆ ಹೆಸರಾಗಿ ಬಳಸುವಂತಿಲ್ಲ. ಇದೇ ಮಾತು LPT, PRN, ಇತ್ಯಾದಿಗಳಿಗೆ ಅನ್ವಯಿಸುತ್ತದೆ.

ಕಂಪ್ಯೂತರ್ಲೆ

ಕಥೆ ಹೇಳು ಎಂದು ಹಠಮಾಡುತ್ತಿರುವ ಕಂದನಿಗೆ ಅಪ್ಪ ಹೇಳಿದ್ದು - “ನೀನು ಹೋಗಿ ಮಲಗಿಕೊ. ಕಥೆಯನ್ನು ಎಸ್‌ಎಂಎಸ್ ಮಾಡುತ್ತೇನೆ”.